ಉಪಮುಖ್ಯಮಂತ್ರಿ ಆದ ಬಳಿಕ ಸ್ವಕ್ಷೇತ್ರ ಕೊರಟಗೆರೆಗೆ ಆಗಮಿಸಿದ್ದ ಡಾ। ಜಿ.ಪರಮೇಶ್ವರ್‌ ಅವರಿಗೆ ಕಾಂಗ್ರೆಸ್‌ ಕಾರ್ಯಕರ್ತರು, ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ ಸಿಕ್ಕಿತು.ಬ್ಲಾಕ್ ಕಾಂಗ್ರೆಸ್‌, ಮಹಿಳಾ, ಯುವ ಕಾಂಗ್ರೆಸ್ ಮತ್ತು ಡಾ। ಜಿ.ಪರಮೇಶ್ವರ ಅಭಿಮಾನಿ ಬಳಗದಿಂದ ಅಭಿನಂದನಾ ಸಮಾರಂಭ 

 ಕೊರಟಗೆರೆ : ಉಪಮುಖ್ಯಮಂತ್ರಿ ಆದ ಬಳಿಕ ಸ್ವಕ್ಷೇತ್ರ ಕೊರಟಗೆರೆಗೆ ಆಗಮಿಸಿದ್ದ ಡಾ। ಜಿ.ಪರಮೇಶ್ವರ್‌ ಅವರಿಗೆ ಕಾಂಗ್ರೆಸ್‌ ಕಾರ್ಯಕರ್ತರು, ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ ಸಿಕ್ಕಿತು.

ಬ್ಲಾಕ್ ಕಾಂಗ್ರೆಸ್‌, ಮಹಿಳಾ, ಯುವ ಕಾಂಗ್ರೆಸ್ ಮತ್ತು ಡಾ। ಜಿ.ಪರಮೇಶ್ವರ ಅಭಿಮಾನಿ ಬಳಗದಿಂದ ಪಟ್ಟಣದ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಅನಾರೋಗ್ಯದ ಮಧ್ಯೆಯೂ ಪರಮೇಶ್ವರ್‌ ಅವರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಅನಾರೋಗ್ಯ ನಿಮಿತ್ತ ಚಿಕಿತ್ಸೆ ಪಡೆಯುತ್ತಿರುವ ಡಿಸಿಎಂ ಅಭಿಮಾನಿಗಳನ್ನು ನಿರಾಸೆ ಮಾಡದೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಕೈಗೆ ಹಾಕಲಾಗಿದ್ದ ಸೂಜಿ (ಈಸಿಫಿಕ್ಸ್‌) ತೆಗೆಯದೆ ಮುಖಕ್ಕೆ ಮಾಸ್ಕ ಧರಿಸಿ ಅಭಿಮಾನದ ಸನ್ಮಾನವನ್ನು ಸ್ವೀಕರಿಸುವ ಮೂಲಕ ಸ್ವಕ್ಷೇತ್ರದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದರು.

ಡಾ। ಜಿ.ಪರಮೇಶ್ವರ ಬೃಹತ್ ಮೆರವಣಿಗೆ

ಕೊರಟಗೆರೆ ಪಟ್ಟಣದ ಊರ್ಡಿಗೆರೆ ವೃತ್ತದಿಂದ ಸರ್ಕಾರಿ ಬಸ್ ನಿಲ್ದಾಣದ ಮೂಲಕ ಜೂನಿಯರ್ ಕಾಲೇಜು ಮೈದಾನದ ವರೆಗೆ ತೆರೆದ ವಾಹನದಲ್ಲಿ ಡಾ। ಜಿ.ಪರಮೇಶ್ವರ ಬೃಹತ್ ಮೆರವಣಿಗೆ ನಡೆಸಿದರು. ಈ ವೇಳೆ ಕೋಲಾಟ, ಕೊಳ್ಳುಕುಣಿತ, ಯಕ್ಷಗಾನ ಕುಣಿತ, ಕಾಡಿನ ನೃತ್ಯ, ವೀರಗಾಸೆ ಗಮನ ಸೆಳೆಯಿತು. ರಸ್ತೆಯುದ್ದಕ್ಕೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಹಿಸಿದರು. ಬೃಹತ್ ಮೆರವಣಿಗೆ ವೇಳೆ ಅಭಿಮಾನಿಗಳು ಡಿಸಿಎಂಗೆ ಕಡ್ಲೆ ಚಿಕ್ಕಿ ಹಾರ ಹಾಕಿ ಗಮನ ಸೆಳೆದರು. ಸರ್ಕಾರಿ ಬಸ್ ನಿಲ್ದಾಣ, ಊರ್ಡಿಗೆರೆ ವೃತ್ತ, ಭೋವಿಕಾಲೋನಿ ಮತ್ತು ಕಾಲೇಜು ಮೈದಾನ ಬಳಿ ಅಭಿಮಾನಿಗಳು ಸೇಬು, ಮೈಸೂರು ಪಾಕ್, ಪೇಡಾ, ಮೊಸಂಬಿಯ ಬೃಹತ್ ಹಾರಗಳನ್ನು ಜೆಸಿಬಿಯ ಮೂಲಕ ಹಾಕಿ ಅಭಿಮಾನ ಮೆರೆದರು.

2028ಕ್ಕೆ ಮತ್ತೆ ನಮ್ಮ ಸರ್ಕಾರ

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪರಮೇಶ್ವರ್‌, ಕೊರಟಗೆರೆ ಕ್ಷೇತ್ರದ ಮತದಾರರ ಆಶೀರ್ವಾದಿಂದ ಕೆಪಿಸಿಸಿ ಅಧ್ಯಕ್ಷ, ಗೃಹಸಚಿವ, ಗ್ಯಾರಂಟಿ ಅಧ್ಯಕ್ಷ ಮತ್ತು ಡಿಸಿಎಂ ಸ್ಥಾನ ಸಿಕ್ಕಿದೆ. ಮತದಾರರ ಋಣ ನನ್ನ ಮೇಲಿದೆ. 2028ಕ್ಕೆ ಮತ್ತೆ ನಮ್ಮ ಸರ್ಕಾರ ಬರುತ್ತೆ. ಕೊರಟಗೆರೆ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಮಾಡುತ್ತೇನೆ. ನನ್ನ ಆರೋಗ್ಯಕ್ಕಿಂತ ನಿಮ್ಮ ಅಭಿಮಾನವೇ ದೊಡ್ಡದು ಎಂದರು.

ಎತ್ತಿನಹೊಳೆ ಯೋಜನೆ ಮಾಡೆ ಮಾಡ್ತೀವಿ. ರೈತರ ನೀರಾವರಿ ಸಮಸ್ಯೆ ನಿವಾರಣೆ ಮಾಡ್ತೀನಿ. ಬೈರಗೊಂಡ್ಲು ರೈತರು ವಿರೋಧ ಪಕ್ಷದವರ ಮಾತು ಕೇಳಿ ನೀರಾವರಿ ಯೋಜನೆ ಹಾಳುಮಾಡಿದ್ರು. ಬೈರಗೊಂಡ್ಲು ಬಳಿ ೨೫೦೦ ವಿಸ್ತೀರ್ಣದ ಜಲಾಶಯ ಈಗ ನಮ್ಮ ಕೈತಪ್ಪಿದೆ. ವಡೇರಹಳ್ಳಿ ಬಳಿ ಈಗ ಕೇವಲ ೫೦೦ ಎಕರೆ ನೀಡಿದ್ರೆ ಅನುಕೂಲ ಆಗುತ್ತೆ. ಈಗ ಅದಕ್ಕೂ ವಿರೋಧ ಆಗ್ತಿದೆ, ಸರ್ಕಾರ ಕೈಕಟ್ಟಿ ಕೂರಲ್ಲ. ವಿನಯವಾಗಿ ಗೌರವದಿಂದ ಕೈಮುಗಿದು ಕೇಳುತ್ತೇನೆ ಜಮೀನು ನೀಡಲು ವಿರೋಧ ಮಾಡಬೇಡಿ ಎಂದು ಮನವಿ ಮಾಡಿದರು.