ಸಾರಾಂಶ
ಮುಂದಿನ ದಿನಗಳಲ್ಲಿ ಸ್ವಚ್ಛತೆಯ ಬಗ್ಗೆ ಚಿಂತನೆ ಮಾಡದೇ ಇದ್ದಲ್ಲಿ ಸಮಾಜವು ಆರೋಗ್ಯದ ಸಮಸ್ಯೆಗಳ ಸುಳಿಯಲ್ಲಿ ಸಿಲುಕುತ್ತದೆ.
ಕನ್ನಡಪ್ರಭ ವಾರ್ತೆ ಕೊಪ್ಪಳ
ಪ್ರತಿ ಗ್ರಾಮವನ್ನು ಸ್ವಚ್ಛ ಮತ್ತು ಹಸಿರಾಗಿಸಲು ಪ್ರತಿ ಕುಟುಂಬದ ಸಹಕಾರ ಬೇಕು ಎಂದು ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ ಹೇಳಿದರು.ಸ್ವಚ್ಛ, ಹಸಿರು ಗ್ರಾಮ ವಾರ ಕಾರ್ಯಕ್ರಮದ ಪ್ರಯುಕ್ತ ತಾಲೂಕಿನ ಕಲ್ಲತಾವರಗೇರಾ ಗ್ರಾಮ ಪಂಚಾಯಿತಿಯ ದನಕನದೊಡ್ಡಿ ಗ್ರಾಮದ ಮಸೀದಿಯ ಆವರಣದಲ್ಲಿ ನಡೆದ ಐಇಸಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಸುತ್ತಮುತ್ತಲು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಜಗತ್ತಿನಲ್ಲಿ ನಾವು ಎಲ್ಲ ವಸ್ತುಗಳನ್ನು ಕೊಂಡುಕೊಳ್ಳಬಹುದು ಆದರೆ ಆರೋಗ್ಯವನ್ನು ನಾವು ಹಣದಿಂದ ಖರೀದಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಸ್ವಚ್ಛತೆಯ ಬಗ್ಗೆ ಚಿಂತನೆ ಮಾಡದೇ ಇದ್ದಲ್ಲಿ ಸಮಾಜವು ಆರೋಗ್ಯದ ಸಮಸ್ಯೆಗಳ ಸುಳಿಯಲ್ಲಿ ಸಿಲುಕುತ್ತದೆ. ಪ್ರತಿ ಮನೆಯ ಬಚ್ಚಲು ನೀರನ್ನು ರಸ್ತೆಗೆ ಹರಿಬಿಡುವುದರಿಂದ ಸೊಳ್ಳೆ ಉತ್ಪತ್ತಿ, ದುರ್ನಾತದಿಂದ ಸಮಸ್ಯೆಯಾಗುತ್ತದೆ. ಇದರಿಂದ ಮುಕ್ತಿ ಹೊಂದಬೇಕಾದರೆ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಪ್ರತಿ ಮನೆಗೆ ಬಚ್ಚಲುಗುಂಡಿ ನಿರ್ಮಾಣಕ್ಕೆ ಅವಕಾಶ ಇರುತ್ತದೆ. ಜಾಬ್‌ಕಾರ್ಡ್ ಹೊಂದಿದವರು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿ ₹11,000 ವೆಚ್ಚದಲ್ಲಿ ಬಚ್ಚಲುಗುಂಡಿ ನಿರ್ಮಿಸಿಕೊಳ್ಳಬೇಕೆಂದು ಕರೆ ನೀಡಿದರು. ದನಕನದೊಡ್ಡಿ ಗ್ರಾಮವು ಸಂಪೂರ್ಣ ಬಚ್ಚಲಗುಂಡಿ ಹೊಂದಿದ ಗ್ರಾಮವನ್ನಾಗಿ ನಿರ್ಮಿಸಲು ಎಲ್ಲರೂ ಕೈ ಜೋಡಿಸಬೇಕೆಂದರು.ಪಿಡಿಒ ಯಮನೂರಪ್ಪ ಕಬ್ಬಣ್ಣನವರ ಮಾತನಾಡಿ, ನರೇಗಾ ಯೋಜನೆಯನ್ನು ಕೇವಲ ಕೂಲಿ ಹಣಕ್ಕಾಗಿ ಮಾತ್ರ ಬಳಸದೇ ವೈಯಕ್ತಿಕ ಸುಸ್ಥಿರ ಕಾಮಗಾರಿಗಳನ್ನು ಅನುಷ್ಠಾನಿಸಿಕೊಳ್ಳಲು ಆದ್ಯತೆ ನೀಡಬೇಕೆಂದರು. ಗ್ರಾಪಂಯಿಂದ ದನದ ಶೆಡ್, ಕುರಿಶೆಡ್, ಬಚ್ಚಲಗುಂಡಿ, ತೋಟಗಾರಿಕೆ ಇಲಾಖೆಯಿಂದ ತೋಟಗಾರಿಕೆ ಬೆಳೆಗಳು, ಕೃಷಿ ಇಲಾಖೆಯಿಂದ ಬದು ನಿರ್ಮಾಣ, ಕೃಷಿಹೊಂಡ, ಎರೆಹುಳು ತೊಟ್ಟಿ, ರೇಷ್ಮೆ ಇಲಾಖೆಯಿಂದ ರೇಷ್ಮೆ ಕೃಷಿ ಇತ್ಯಾದಿ ಕಾಮಗಾರಿಗಳನ್ನು ಅನುಷ್ಠಾನಿಸಿಕೊಂಡು ನರೇಗಾ ಯೋಜನೆಯ ಸದ್ಭಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಅನುಷ್ಠಾನ ಇಲಾಖೆಯ ತಾಂತ್ರಿಕ ಸಂಯೋಜಕಿ ಕವಿತಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರೈತರು ರಾಸಾಯನಿಕ ಗೊಬ್ಬರ ಬಳಕೆಗೆ ಮಾರು ಹೋಗಿದ್ದಾರೆ. ರಾಸಾಯನಿಕ ಗೊಬ್ಬರ ಬಳಕೆಯಿಂದ ಪ್ರತಿಯೊಬ್ಬರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಆಸ್ಪತ್ರೆಗೆ ಅಲೆಯುವುದು ಪ್ರಾರಂಭವಾಗುತ್ತದೆ. ಅಲ್ಲದೇ ಭೂಮಿಯ ಸತ್ವ ಕಡಿಮೆಯಾಗುವುದರ ಜೊತೆಗೆ ಇಳುವರಿ ಕೂಡಾ ಕಡಿಮೆಯಾಗುತ್ತದೆ. ಮನುಷ್ಯನ ಆರೋಗ್ಯದ ಜೊತೆಗೆ ಮಣ್ಣಿನ ಆರೋಗ್ಯವು ಕೂಡಾ ಅಷ್ಟೇ ಮುಖ್ಯವಾಗಿದೆ ಎಂದರು.ಇದೇ ಸಂದರ್ಭದಲ್ಲಿ ಬಚ್ಚಲಗುಂಡಿ ನಿರ್ಮಿಸಿಕೊಂಡ ಚನ್ನಮ್ಮ ಪಕೀರಪ್ಪ ಕೋರಿ ಹಾಗೂ ಎರೆಹುಳುತೊಟ್ಟಿ ನಿರ್ಮಿಸಿಕೊಂಡ ಗೊವಿಂದಪ್ಪ ಕುರಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ರವಿ ಒಂಟಿಗಾರ, ಸಿವಿಲ್ ತಾಂತ್ರಿಕ ಸಹಾಯಕ ಶರಣಯ್ಯ, ಕೃಷಿ ತಾಂತ್ರಿಕ ಸಹಾಯಕಿ ಸರಸ್ವತಿ, ಗ್ರಾಮಸ್ಥರಾದ ಯಮನೂರಪ್ಪ ಕೊಳ್ಳಿ, ಬಸವರಾಜ ಪರ್ವತಮಲ್ಲಯ್ಯ, ಗ್ರಾಪಂ ಡಿಇಒ ಲಕ್ಷ್ಮಣ ಹಿರೇಮನಿ, ಗ್ರಾಮ ಕಾಯಕ ಮಿತ್ರ ಯಂಕಮ್ಮ ವಾಲಿಕಾರ, ತಾಂಡಾ ರೋಜಗಾರ್ ಮಿತ್ರ ಶೇಖಪ್ಪ ಪೂಜಾರ, ಸಂಜಿವಿನಿ ಸಂಘದ ಮಹಿಳೆಯರು, ಮಹಿಳಾ ಕೂಲಿಕಾರರು, ಗ್ರಾಮದ ಸಾರ್ವಜನಿಕರು ಭಾಗವಹಿಸಿದ್ದರು.