ಚಳ್ಳಕೆರೆ ಜನತೆಗೆ ನೆಮ್ಮದಿ ತಂದ ಹಸ್ತ

| Published : Oct 01 2024, 01:16 AM IST

ಸಾರಾಂಶ

ಚಳ್ಳಕೆರೆ ತಾಲೂಕಿನ ಅಡವಿಚಿಕ್ಕೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಿಂತಿರುವ ಮಳೆ ನೀರು.

ಕನ್ನಡಪ್ರಭವಾರ್ತೆ ಚಳ್ಳಕೆರೆ

ಕಳೆದ ಒಂದು ತಿಂಗಳಿಂದ ಬಿಡುವು ನೀಡಿದ್ದ ಮಳೆರಾಯ ಮತ್ತೊಮ್ಮೆ ತಾಲೂಕಿನಾದ್ಯಂತ ಬಿರುಸಾಗಿ ಬರದೇ ಇದ್ದರೂ ಕೆಲವೆಡೆ ಸಮೃದ್ಧ ಮಳೆಯಾಗಿದೆ. ಪ್ರಾರಂಭದಲ್ಲಿ ಹಸ್ತ ಮಳೆ ಜನರಿಗೆ ನೆಮ್ಮದಿಯನ್ನುಂಟು ಮಾಡುವ ನಿಟ್ಟಿನಲ್ಲಿ ವಿವಿಧ ಭಾಗಗಳಲ್ಲಿ ಸುರಿದಿದ್ದು ಗ್ರಾಮದ ಸರ್ಕಾರಿ ಶಾಲೆಗಳು ಮಳೆ ನೀರಿನಿಂದ ಆವೃತ್ತವಾಗಿವೆ.

ತಾಲೂಕಿನ ಕಸಬಾ ಹೋಬಳಿಯ ಗೋಪನಹಳ್ಳಿ ಗ್ರಾಪಂ ವ್ಯಾಪ್ತಿಯ ಅಡವಿಚಿಕ್ಕೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಒಳ ಹಾಗೂ ಹೊರ ಭಾಗದಲ್ಲಿ ಮಳೆ ನೀರಿನಿಂದ ಆವೃತ್ತವಾಗಿದ್ದು, ಸೋಮವಾರ ಬೆಳಗ್ಗೆ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಶಾಲೆ ಒಳಗೆ ಪ್ರವೇಶಿಸದಂತೆ ಮಳೆಯ ನೀರು ನಿಂತಿದ್ದು ನೋಡಿ ದಂಗಾಗಿದ್ದಾರೆ.

ಗ್ರಾಮದ ಮುಖಂಡ ಶ್ರೀನಿವಾಸ್ ಈ ಕುರಿತು ಮಾಹಿತಿ ನೀಡಿ, ಕಳೆದ ಹಲವು ವರ್ಷಗಳಿಂದ ಶಾಲೆಯ ದುರಸ್ಥಿ ಹಾಗೂ ಮಳೆ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಶಾಲೆಯ ಹಲವು ಕೊಠಡಿಗಳು ಮಳೆ ಬಂದರೆ ಸೋರುತ್ತವೆ, ಗೋಡೆಗಳು ಬಿರುಕು ಬಿಟ್ಟಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಸೋಮವಾರ ಬೆಳಗಿನ ಜಾವ ಬಿದ್ದ ಮಳೆ ನೀರು ಶಾಲಾ ಆವರಣದಲ್ಲೇ ನಿಂತಿದ್ದು ವಿದ್ಯಾರ್ಥಿಗಳಿಗೆ ಪಾಠ, ಪ್ರವಚನಕ್ಕೆ ತೊಂದರೆಯಾಗುವ ದೃಷ್ಠಿಯಿಂದ ನಿಂತಿದ್ದ ನೀರು ಹರಿಯಲು ವ್ಯವಸ್ಥೆ ಮಾಡಲಾಯಿತು.

ಪ್ರಸ್ತುತ ಶಾಲೆಯ ಅವ್ಯವಸ್ಥೆಯ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಗ್ರಾಮಸ್ಥರು ಈಗಾಗಲೇ ತುರ್ತು ರಿಪೇರಿ ಕಾರ್ಯ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಗ್ರಾಮಸ್ಥರ ಮನವಿ ನಂತರವೂ ಇದುವರೆಗೂ ಯಾವುದೇ ಅಧಿಕಾರಿ ಶಾಲೆಗೆ ಭೇಟಿ ನೀಡಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಪ್ರಸ್ತುತ ಶಾಲೆಯ ಸ್ಥಿತಿಯನ್ನು ಸುಧಾರಿಸುವ ಕುರಿತು ಕ್ರಮ ಕೈಗೊಳ್ಳುವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಭರವಸೆ ನೀಡಿದ್ದಾರೆ.

ನಗರದ ಬಳ್ಳಾರಿ ರಸ್ತೆಯ 2ನೇ ಕ್ರಾಸ್‌ನ ತಿಪ್ಪೇರುದ್ರಸ್ವಾಮಿ ಕಾಂಡಿಮೆಂಟ್ಸ್ ಮುಂಭಾಗದಲ್ಲಿ ಇತ್ತೀಚೆಗೆ ಇಟ್ಟಿಗೆ ಸ್ಲಾಬ್‌ನ ರಸ್ತೆ ನಿರ್ಮಿಸಿದ್ದು, ಮಳೆ ನೀರು ಸರಾಗವಾಗಿ ಹರಿಯಲು ವ್ಯವಸ್ತೆ ಮಾಡದ ಕಾರಣ ನೀರು ರಸ್ತೆಯ ಮೇಲೆ ನಿಂತು ಸಾರ್ವಜನಿಕ ಹಾಗೂ ವಾಹನ ಓಡಾಟಕ್ಕೆ ತೊಂದರೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂದು ತಿಪ್ಪೇರುದ್ರಪ್ಪ ಮನವಿ ಮಾಡಿದ್ದಾರೆ.