ಆರೋಗ್ಯ ಎಂಬುದು ಕೇವಲ ಯಾವುದೇ ರೋಗಗಳಿಂದ ಮುಕ್ತರಾಗಿ ಇರುವುದಲ್ಲ. ಸಮಗ್ರ ಆರೋಗ್ಯ ಸಕಾರಾತ್ಮಕವಾಗಿದ್ದು, ಅದು ದೈಹಿಕ ಮಾನಸಿಕ ಮತ್ತು ಸಾಮಾಜಿಕ ಮುಖಗಳನ್ನಲ್ಲದೆ ಬೌದ್ಧಿಕ ಮತ್ತು ಆಧ್ಯಾತ್ಮಿಕ ಸ್ಥಿತಿಗಳನ್ನು ಒಳಗೊಂಡಿದ್ದು, ಆರೋಗ್ಯಕರ ಸಮಾಜ ದೇಶದ ಶಕ್ತಿಯಾಗಿದೆ.

ಗದಗ: ಆರೋಗ್ಯವಂತ ವ್ಯಕ್ತಿಯಿಂದ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಡಾ. ರಾಜೇಂದ್ರ ಎಸ್. ಗಡಾದ ತಿಳಿಸಿದರು.ನಗರದ ವಿ.ಟಿ. ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ, ನಗರ ಆರೋಗ್ಯ ಕೇಂದ್ರ, ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸಹಯೋಗದಲ್ಲಿ ನಡೆದ ತಾಲೂಕು ಮಟ್ಟದ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆರೋಗ್ಯ ಎಂಬುದು ಕೇವಲ ಯಾವುದೇ ರೋಗಗಳಿಂದ ಮುಕ್ತರಾಗಿ ಇರುವುದಲ್ಲ. ಸಮಗ್ರ ಆರೋಗ್ಯ ಸಕಾರಾತ್ಮಕವಾಗಿದ್ದು, ಅದು ದೈಹಿಕ ಮಾನಸಿಕ ಮತ್ತು ಸಾಮಾಜಿಕ ಮುಖಗಳನ್ನಲ್ಲದೆ ಬೌದ್ಧಿಕ ಮತ್ತು ಆಧ್ಯಾತ್ಮಿಕ ಸ್ಥಿತಿಗಳನ್ನು ಒಳಗೊಂಡಿದ್ದು, ಆರೋಗ್ಯಕರ ಸಮಾಜ ದೇಶದ ಶಕ್ತಿಯಾಗಿದೆ ಎಂದರು.

ಪ್ರಸ್ತುತ ದಿನಗಳಲ್ಲಿ ದೈನಂದಿನ ಕಾರ್ಯಗಳಲ್ಲಿನ ಅತಿಯಾದ ಮಾನಸಿಕ ಒತ್ತಡಗಳಿಂದ ಆಹಾರ ವಿಹಾರ ಮತ್ತು ವಿಶ್ರಾಂತಿಗಳಿಗೆ ಸಂಬಂಧಿಸಿದಂತೆ ಒಟ್ಟಾರೆಯಾಗಿ ಜೀವನಶೈಲಿಯು ಬದಲಾಗುತ್ತಿದೆ. ಇದರ ಪರಿಣಾಮ ಭಾರತವು ವಿಶ್ವದ ಮಧುಮೇಹ ಮತ್ತು ಕ್ಯಾನ್ಸರ್ ರೋಗಗಳ ರಾಜಧಾನಿಯಾಗುತ್ತಿರುವುದು ಕಳವಳಕಾರಿ ಸಂಗತಿ ಎಂದರು.

ಪ್ರತಿಯೊಬ್ಬ ಮನುಷ್ಯನಿಗೂ ಸದೃಢ ಆರೋಗ್ಯ ಎಂಬುದು ಮೂಲಭೂತ ಹಕ್ಕು. ಉತ್ತಮ ಆರೋಗ್ಯ ಎಲ್ಲರೂ ಕನಸು ಕಾಣುವ ವಿಷಯ. ಆದರೆ ದುರದೃಷ್ಟವಶಾತ್ ಎಲ್ಲರೂ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಉತ್ತಮ ಆರೋಗ್ಯದ ಮಹತ್ವ ತಿಳಿಸಲು ಮತ್ತು ಎಲ್ಲರಿಗೂ ಆರೋಗ್ಯ ಸೇವೆ ಲಭ್ಯವಾಗುವಂತೆ ಅರಿವು ಮೂಡಿಸುವುದೇ ವಿಶ್ವ ಆರೋಗ್ಯ ದಿನಾಚರಣೆಯ ಉದ್ದೇಶವಾಗಿದೆ ಎಂದರು. ಡಾ. ವಸುಂಧರಾ ಗಾಯಕ್ವಾಡ್‌ ಮಾತನಾಡಿ, ಆರೋಗ್ಯದ ಮೂಲ ಸೌಕರ್ಯ ಅಭಿವೃದ್ಧಿ ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆಗಳು. ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿ ದೀರ್ಘಕಾಲ ಉತ್ತಮ ಆರೋಗ್ಯದ ಬದುಕು ನಡೆಸುವ ಕಡೆ ನಾವಿಂದು ಗಮನಹರಿಸಬೇಕಾಗಿದೆ ಎಂದರು.

ವೈದ್ಯಾಧಿಕಾರಿ ಡಾ. ಮಹೇಶ್ ಕೊಪ್ಪಳ ಮಾತನಾಡಿ, ಸರ್ಕಾರವು ಸದ್ಯ ಜಾರಿಗೊಳಿಸಿರುವ ಕೆಲ ರಾಷ್ಟ್ರೀಯ ಕಾರ್ಯಕ್ರಮಗಳ ಕಾರ್ಯಯೋಜನೆಗಳು ಕುರಿತು ಸಂಕ್ಷಿಪ್ತವಾಗಿ ವಿವರಿಸಿ ಇವುಗಳ ಪ್ರಯೋಜನವನ್ನು ಜನರು ಪಡೆಯಲು ಮುಂದಾಗಬೇಕೆಂದರು. ಅಧ್ಯಕ್ಷತೆಯನ್ನು ಪ್ರಾ. ಶಿವಕುಮಾರ ಕಾತರಿಕಿ ವಹಿಸಿದ್ದರು. ಈ ವೇಳೆ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು. ಸಹಜಾನಂದ ಸಾಸ್ವಿಹಳ್ಳಿ ಸ್ವಾಗತಿಸಿದರು. ವಿನಯ ಕುಪ್ಪಸ್ತ ನಿರೂಪಿಸಿ, ವಂದಿಸಿದರು.