ಸಾರಾಂಶ
ದಾಂಡೇಲಿ: ನಾವು ನಮ್ಮ ಜೀವನದಲ್ಲಿ ಯಾವುದನ್ನಾದರು ಸಾಧಿಸಬೇಕಾದರೆ ಆರೋಗ್ಯ ಅತೀ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಆರೋಗ್ಯವಂತ ಸಮಾಜ ನಿರ್ಮಾಣವೇ ರಾಷ್ಟ್ರದ ಬಹುದೊಡ್ಡ ಆಸ್ತಿ ಎಂದು ನಗರದ ರೋಟರಿ ಕ್ಲಬ್‌ನ ಅಧ್ಯಕ್ಷ ಆಶಿತೋಷಕುಮಾರ ರಾಯ ಹೇಳಿದರು.ಅವರು ಶನಿವಾರ ಡಾ.ಜಿ.ವಿ. ಭಟ್ಟ ಹಾಸ್ಪಿಟಲ್, ರೋಟರಿ ಕ್ಲಬ್, ವಿಹಾನ ಹಾರ್ಟ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ದಾಂಡೇಲಿಯ ಕರ್ನಾಟಕ ಸಂಘದ ಪಂಚಗಾನ ಭವನದಲ್ಲಿ ಆಯೋಜಿಸಲಾಗಿದ್ದ ಉಚಿತ ಹೃದಯ ರೋಗ ತಪಾಸಣಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದಾಂಡೇಲಿ ಮತ್ತು ದಾಂಡೇಲಿ ಸುತ್ತಮುತ್ತ ಸಾವಿರಾರು ಜನರ ಜೀವವನ್ನು ಉಳಿದ ಹಿರಿಯ ಹೃದಯ ರೋಗ ವೈದ್ಯರಾದ ಡಾ.ಜಿ.ವಿ.ಭಟ್ಟ ಸಾರಥ್ಯದಲ್ಲಿ ನಡೆಯುತ್ತಿರುವ ಈ ಶಿಬಿರದ ಉಪಯೋಗವನ್ನು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳಬೇಕು ಎಂದರು.ಹಿರಿಯ ಹೃದಯರೋಗ ವೈದ್ಯ ಡಾ.ಜಿ.ವಿ.ಭಟ್ಟ ಮಾತನಾಡಿ, ಈ ಹಿಂದೆ ೪೦-೫೦ ವಯಸ್ಸು ದಾಟಿದ ನಂತರ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸುತ್ತಿದ್ದವು. ಆದರೆ ಇಂದು ಕಾಲ ಬದಲಾಗಿದೆ. ಒತ್ತಡದ ಬದುಕಿನಲ್ಲಿ ಎಳೆಯ ಮಕ್ಕಳಿಗೂ ಹೃದಯ ಕಾಯಿಲೆಯಿಂದ ಹೃದಯಾಘಾತ ಆಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಬದಲಾದ ನಮ್ಮ ಆಹಾರ ಪದ್ಧತಿ, ದೈಹಿಕವಾಗಿ ವ್ಯಾಯಾಮಗಳಿಲ್ಲದೆ ಇರುವುದು ಮುಂತಾದ ಕಾರಣಗಳಿಂದ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತಿವೆ. ಒತ್ತಡವಿಲ್ಲದ ಬದುಕು ಹಾಗೂ ಪೌಷ್ಟಿಕವಾದ ಆಹಾರವನ್ನು ಸೇವಿಸುವುದು ಮತ್ತು ದೈಹಿಕ ವ್ಯಾಯಾಮ ಮಾಡಿಕೊಳ್ಳುವುದು ಮುಖ್ಯವಾಗಿದೆ ಎಂದರು.
ಜನರಲ್ಲಿ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಜನರು ಕಾಲಕಾಲಕ್ಕೆ ಆರೋಗ್ಯತಜ್ಞರನ್ನು ಭೇಟಿಯಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ವಿಹಾನ ಹಾರ್ಟ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯೆ ಡಾ.ಗೀತಾಂಜಲಿ ಈ ಭಾಗದ ಜನರಿಗೆ ಅನುಕೂಲವಾಗಲಿ ಎಂದು ಈ ಶಿಬಿರವನ್ನು ಆಯೋಜಿಸಲಾಗಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ರೋಟರಿ ಕ್ಲಬ್ ಕಾರ್ಯದರ್ಶಿ ಮಿಥುನ ನಾಯ್ಕ, ಖಜಾಂಚಿ ಲಿಯೋ ಪಿಂಟೊ, ಇವೆಂಟ್ ಚೇರ್‌ಮೆನ್ ಆರ್.ಪಿ. ನಾಯ್ಕ ಇದ್ದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‌ನ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು. ಶಿಬಿರದ ಯಶಸ್ಸಿಗೆ ನಗರದ ಕೆ.ಎಲ್.ಇ ನರ್ಸಿಂಗ್ ಹೋಮ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ರೋಟರಿ ಶಾಲೆಯ ಸಿಬ್ಬಂದಿ ಸಹಕರಿಸಿದರು.ಶಿಬಿರದಲ್ಲಿ ಬಿಪಿ, ಇಸಿಜಿ, ೨ಡಿ ಇಕೋ ಮತ್ತು ವೈದ್ಯರೊಂದಿಗೆ ಸಮಾಲೋಚನೆಯನ್ನು ಆಯೋಜಿಸಲಾಯಿತು.