ಗಾಂಧಿ ಮಾರ್ಗದಿಂದ ಸ್ವಸ್ಥ ಸಮಾಜ

| Published : Oct 03 2025, 01:07 AM IST

ಸಾರಾಂಶ

ಗಾಂಧಿ ಮಾರ್ಗದಲ್ಲಿ ಸಾಗಿದರೆ ನೈತಿಕ ಬಲವಾಗಿರುವ ಸ್ವಸ್ಥ ಸಮಾಜ ನಿರ್ಮಿಸಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ಚಿತ್ರದುರ್ಗ: ಗಾಂಧಿ ಮಾರ್ಗದಲ್ಲಿ ಸಾಗಿದರೆ ನೈತಿಕ ಬಲವಾಗಿರುವ ಸ್ವಸ್ಥ ಸಮಾಜ ನಿರ್ಮಿಸಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವ ಜನತೆ ಬುದ್ಧ, ಬಸವ, ಗಾಂಧಿ ಹಾಗೂ ಅಂಬೇಡ್ಕರ್ ಮಾರ್ಗದಲ್ಲಿ ಸಾಗಬೇಕಾದ ಅನಿವಾರ್ಯತೆ ಇದೆ ಎಂದರು.

ಸತ್ಯ ಹಾಗೂ ಅಹಿಂಸೆ ಎಂಬ ಅಸ್ತ್ರಗಳಿಂದ ಬ್ರಿಟೀಷರ ವಿರುದ್ಧ ಹೋರಾಡಿದ ಮಹಾತ್ಮ ಗಾಂಧೀಜಿ, ಈ ಎರಡೂ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಇವರ ಹಾದಿಯಲ್ಲೇ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಯವರು ನಡೆದರು. ನೈತಿಕ ರಾಜಕಾರಣಕ್ಕೆ ಗಾಂಧೀಜಿ ಹಾಗೂ ಶಾಸ್ತ್ರೀಜಿ ಮಾದರಿಯಾಗಿದ್ದರು. ಗಾಂಧೀಜಿಯವರ ಜೀವನವೇ ನಮಗೆಲ್ಲ ಸಂದೇಶ. ಸತ್ಯವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಗಾಂಧೀಜಿಯವರು ನಡೆಸಿದ ಪ್ರಯತ್ನವನ್ನು ಅವರ ಆತ್ಮಕಥನದಲ್ಲಿ ನಾವು ಕಾಣಬಹುದು ಎಂದರು.

ಪ್ರಸ್ತುತ ಜಗತ್ತಿನಾದ್ಯಂತ ಹಿಂಸೆ ತಾಂಡವವಾಡುತ್ತಿದೆ. ಯುವ ಜನತೆ ಭ್ರಮಾಲೋಕದಲ್ಲಿ ಮುಳುಗಿ ಸತ್ಯ ಸಂಗತಿಗಳಿಂದ ದೂರವಾಗಿದ್ದಾರೆ. ಓದು ಎನ್ನುವುದು ಕೇವಲ ಕೆಲಸ ಗಿಟ್ಟಿಸಿಕೊಳ್ಳುವ ಮಾರ್ಗವಾಗಿ ಉಳಿದಿದೆ ಎಂದು ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ್ಯ ತಾಜ್‍ಪೀರ್ ಮಾತನಾಡಿ, ಸ್ವಾತ್ಯಂತ್ರ್ಯ ಹೋರಾಟಕ್ಕೆ ಧುಮುಕುವ ಮುನ್ನ ಗಾಂಧೀಜಿ ದೇಶವನ್ನು ಸುತ್ತಿ ಬಡ ಜನರ ಜೀವನವನ್ನು ಅರಿತುಕೊಂಡರು. ತಮ್ಮ ಐಶಾರಾಮಿ ಜೀವನವನ್ನು ತ್ಯಜಿಸಿ ಬಡವರ ಶ್ರೇಯೋಭಿವೃದ್ಧಿಗಾಗಿ ದುಡಿದರು. ಅರೆ ಬಟ್ಟೆಯ ದೋತಿ ಹಾಗೂ ಖಾದಿ ವಸ್ತ್ರ ಧರಿಸಿ ಗಾಂಧೀಜಿ ದುಂಡು ಮೇಜಿನ ಸಮ್ಮೇಳನದಲ್ಲಿ ಭಾಗವಹಿಸಿ ಬ್ರಿಟನ್ ರಾಜನನ್ನು ಭೇಟಿಯಾದರು. ಸ್ವಾತ್ಯಂತ್ರ್ಯ ಹೋರಾಟದ ಜೊತೆಗೆ ದೇಶದ ಸಾಮಾಜಿಕ ಸುಧಾರಣೆಗೂ ಗಾಂಧೀಜಿ ಕೊಡುಗೆ ನೀಡಿದ್ದಾರೆ ಎಂದರು. ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಕುರಿತು ಉಪನ್ಯಾಸ ನೀಡಿದ ನಿವೃತ್ತ ಪ್ರಾಂಶುಪಾಲ ಡಾ.ಎಚ್.ಗುಡ್ಡದೇಶ್ವರಪ್ಪ, ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ತತ್ವಾದರ್ಶಗಳು ಒಂದೇ ರೀತಿಯಾಗಿದ್ದು, ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಿವೆ. ತಾವು ಪ್ರತಿಪಾದಿಸಿದ ಆದರ್ಶಗಳಂತೆ ಬದುಕಿದ ಈ ಇಬ್ಬರೂ ಮಹನೀಯರು ಜನಸಾಮಾನ್ಯರು ಹಾಗೂ ದೇಶದ ಒಳಿತಿಗಾಗಿ ಶ್ರಮಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಗಾಂಧೀಜಿ ಪ್ರತಿಪಾದಿಸಿದ ಅಹಿಂಸೆ ಹಾಗೂ ಸತ್ಯದ ತತ್ವಗಳನ್ನು ಶಾಸ್ತ್ರೀಜಿಯವರೂ ತಮ್ಮ ಜೀವನದುದ್ದಕ್ಕೂ ಅನುಸರಿಸಿದರು ಎಂದು ತಿಳಿಸಿದರು.

ಇದೇ ವೇಳೆ ಮಹಾತ್ಮಾ ಗಾಂಧೀಜಿ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲೆಯ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಹಾಗೂ ಪದವಿ, ಸ್ನಾತಕೋತ್ತರ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಜಿಲ್ಲಾಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.

ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಶಿವಣ್ಣ, ನಗರಸಭೆ ಅಧ್ಯಕ್ಷೆ ಎಂ.ಪಿ.ಅನಿತಾ ರಮೇಶ್, ಉಪಾಧ್ಯಕ್ಷೆ ಶಕೀಲಾಬಾನು, ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ, ಜಿಪಂ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್, ನಗರಸಭೆ ಆಯುಕ್ತೆ ಲಕ್ಷ್ಮೀ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ.ಗುರುನಾಥ್, ಡಿಡಿಪಿಐ ಮಂಜುನಾಥ್, ಡಿಡಿಪಿಯು ಕೆ.ತಿಮ್ಮಯ್ಯ, ಸಮಾಜ ಕಲ್ಯಾಣಾ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ ಉಪಸ್ಥಿತರಿದ್ದರು.

ಚಿತ್ರದುರ್ಗ ಸಂತಜೋಸೆಫ್ ಕಾನ್ವೆಂಟ್ ಶಾಲೆಯ ವಿದ್ಯಾರ್ಥಿಗಳು ಸರ್ವಧರ್ಮ ಪ್ರಾರ್ಥನೆ ಮಾಡಿದರು. ಮೀನಾಕ್ಷಿ ಭಟ್ ಮತ್ತು ಸಂಗಡಿಗರು ಗಾಂಧೀಜಿಯವರ ಪ್ರಿಯವಾದ ಗೀತ ಗಾಯನ ನಡೆಸಿಕೊಟ್ಟರು.