ಸಾರಾಂಶ
ಕೆಲ ತಿಂಗಳು ತಾಲೂಕಿನಾದ್ಯಂತ ಸುತ್ತಾಡಿ ಕುರಿಗಳನ್ನು ಮೇಯಿಸುತ್ತಾರೆ. ಬಳಿಕ ಅಂದರೆ ಮಳೆಗಾಲ ಆರಂಭವಾಗುವ ಮುನ್ನ ತಮ್ಮ ಸ್ವಂತ ಊರುಗಳಿಗೆ ತೆರಳುತ್ತಾರೆ.
ಸಂತೋಷ ದೈವಜ್ಞ
ಮುಂಡಗೋಡ: ಒಂದೆಡೆ ತಾಲೂಕಿನಲ್ಲಿ ಭತ್ತ ಕಟಾವು ಪ್ರಕ್ರಿಯೆ ಆರಂಭವಾಗಿದ್ದು, ಇನ್ನೊಂದೆಡೆ ಬಯಲು ಸೀಮೆಯ ಕುರಿಗಳ ಹಿಂಡು ತಂಡೋಪತಂಡವಾಗಿ ತಾಲೂಕಿಗೆ ಲಗ್ಗೆ ಇಟ್ಟಿದ್ದು, ಎಲ್ಲಿ ನೋಡಿದರಲ್ಲಿ ಕುರಿಗಳ ಹಿಂಡು ಕಾಣಸಿಗುತ್ತಿವೆ.ಮಳೆಗಾಲ ಮುಗಿದು ಭತ್ತದ ಸುಗ್ಗಿ ಆರಂಭವಾಗುತ್ತಿದ್ದಂತೆ ಕುರಿಗಾಯಿಗಳು ತಮ್ಮ ನೂರಾರು ಸಂಖ್ಯೆಯ ಕುರಿಗಳೊಂದಿಗೆ ಊರೂರು ಅಲೆದು ರೈತರ ಗದ್ದೆಯಲ್ಲಿ ಕುರಿಗಳೊಂದಿಗೆ ಠಿಕಾಣಿ ಹೂಡುತ್ತಾರೆ. ಅದಕ್ಕೆ ಪ್ರತಿಯಾಗಿ ರೈತರಿಂದ ಧಾನ್ಯ ಪಡೆಯುತ್ತಾರೆ. ಅದೇ ರೀತಿ ಈ ವರ್ಷವೂ ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ಸಂಕೇಶ್ವರ, ಅಥಣಿ, ಗೋಕಾಕ, ಚಿಕ್ಕೋಡಿ ಮುಂತಾದ ಕಡೆಯಿಂದ ಕುರಿಗಳ ಹಿಂಡು, ಕುದುರೆ ಹಾಗೂ ನಾಯಿಗಳೊಂದಿಗೆ ಈ ಭಾಗಕ್ಕೆ ಆಗಮಿಸಿದ್ದಾರೆ.ಕೆಲ ತಿಂಗಳು ತಾಲೂಕಿನಾದ್ಯಂತ ಸುತ್ತಾಡಿ ಕುರಿಗಳನ್ನು ಮೇಯಿಸುತ್ತಾರೆ. ಬಳಿಕ ಅಂದರೆ ಮಳೆಗಾಲ ಆರಂಭವಾಗುವ ಮುನ್ನ ತಮ್ಮ ಸ್ವಂತ ಊರುಗಳಿಗೆ ತೆರಳುತ್ತಾರೆ.ಭತ್ತದ ಕಣಜ ಎಂದೇ ಹೆಸರಾಗಿರುವ ಮುಂಡಗೋಡ ಭಾಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಈ ಕುರಿ ಹಿಂಡುಗಳು ಬರುತ್ತವೆ. ಒಂದು ದಿನ ಒಂದು ಕಡೆ ಠಿಕಾಣಿ ಹೂಡಿದರೆ ಇನ್ನೊಂದು ದಿನ ಮತ್ತೊಂದು ಊರಿನ ರೈತರ ಭೂಮಿಯಲ್ಲಿ ಬೀಡು ಬಿಡುತ್ತಾರೆ. ಇದರಿಂದ ಕುರಿಗಳಿಗೆ ಮೇವು ಸಿಗುತ್ತದೆ. ಅಲ್ಲದೆ ರೈತರ ಗದ್ದೆಗಳಿಗೆ ಫಲವತ್ತಾದ ಗೊಬ್ಬರ ಸಿಗುತ್ತದೆ. ಇದರಿಂದ ರೈತರು ಕೂಡ ಕುರಿ ಹಿಂಡು ತಮ್ಮ ಗದ್ದೆಯಲ್ಲಿ ಬೀಡು ಬಿಡಲಿ ಎಂದು ಬಯಸುತ್ತಾರೆ.
ಅಲೆಮಾರಿಗಳಾಗಿ ಬರುವ ಈ ಕುರಿಗಾಹಿಗಳು ಮಾಡುವ ಕಾಯಕ ಅಪಾರ. ವರ್ಷದಲ್ಲಿ ೬ ತಿಂಗಳು ಹಗಲು ರಾತ್ರಿ ಚಳಿ, ಗಾಳಿ, ಬಿಸಿಲನ್ನು ಲೆಕ್ಕಿಸದೇ ತಮ್ಮ ಬಳಗವನ್ನು ಕಟ್ಟಿಕೊಂಡು ಊರು- ಕೆರೆ ಅಲೆಯುತ್ತಾರೆ. ಕುರಿಹಿಂಡಿಗೆ ಡಿಮ್ಯಾಂಡ್ ಹೆಚ್ಚುಕುರಿಗಳನ್ನು ಗದ್ದೆಯಲ್ಲಿ ನಿಲ್ಲಿಸುವುದರಿಂದ ಭೂಮಿಗೆ ಫಲವತ್ತಾದ ಗೊಬ್ಬರ ದೊರೆಯುತ್ತದೆ. ಹಾಗಾಗಿ ರೈತರೂ ಕುರಿಗಳ ಹಿಂಡನ್ನು ಗದ್ದೆಯಲ್ಲಿ ನಿಲ್ಲಿಸಲು ನಾ ಮುಂದು ತಾ ಮುಂದು ಮುಗಿಬೀಳುತ್ತಾರೆ. ಸದ್ಯ ಭತ್ತದ ಕೊಯ್ಲು ಆರಂಭವಾಗಿದ್ದು, ಖಾಲಿಯಾಗುವ ಭೂಮಿಯಲ್ಲಿ ಬೀಡುಬಿಡುತ್ತಿವೆ.