ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸಾವಯವ ಅಂಶಗಳನ್ನು ಮಣ್ಣಿನಲ್ಲಿ ಹೆಚ್ಚಿಸಿ, ನಿಖರ ನೀರು ನಿರ್ವಹಣೆ ಕೈಗೊಳ್ಳಬೇಕೆಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ಜಿ.ಎಸ್. ಯೋಗೇಶ್ ತಿಳಿಸಿದರು.ವಿಶ್ವ ಮಣ್ಣು ದಿನಾಚರಣೆ-೨೦೨೪ನ್ನು ಮಣ್ಣಿನ ಆರೈಕೆ-ಮಾಪನ, ಮೇಲ್ವಿಚಾರಣೆ ಮತ್ತು ನಿರ್ವಹಣೆ ಎಂಬ ಘೋಷವಾಕ್ಯದಡಿ ಕೃಷಿ ವಿಜ್ಞಾನ ಕೇಂದ್ರ ಚಾಮರಾಜನಗರ ಮತ್ತು ಕೃಷಿ ಇಲಾಖೆ ಗುಂಡ್ಲುಪೇಟೆ ತಾಲೂಕು ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಣ್ಣಿನ ಸುಧಾರಣೆ ಮತ್ತು ನಿರ್ವಹಣೆಗಾಗಿ ಮಣ್ಣಿನ ಸವಕಳಿ ತಡೆಯುವುದು ಈ ಕ್ಷಣದ ಆದ್ಯತೆಯಾಗಿದ್ದು, ಇದಲ್ಲದೇ ಬೇಸಾಯ ಕ್ರಮಗಳಡಿ, ಸೂಕ್ತ ಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳಲು ರೈತರು ದ್ವಿದಳ ಧಾನ್ಯ ಬೆಳೆಗಳು ಮತ್ತು ಹಸಿರೆಲೆ ಗೊಬ್ಬರದ ಬೆಳೆಗಳನ್ನು ಅಂತರ ಬೆಳೆಗಳಾಗಿ ಅಥವಾ ಬೆಳೆ ಪರಿವರ್ತನೆಯಲ್ಲಿ ಅಳವಡಿಸಿಕೊಂಡು ಮಣ್ಣಿನ ಗುಣಧರ್ಮಗಳನ್ನು, ಅದರಲ್ಲೂ ಸೂಕ್ಷ್ಮಜೀವಿ ಸಂಕುಲಗಳನ್ನು ಸಂರಕ್ಷಿಸಬೇಕಾಗಿ ತಿಳಿಸಿದರು.
ಬೆಳೆಗಳಿಗೆ ರಸಗೊಬ್ಬರಗಳನ್ನು ಮಣ್ಣು ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ, ಶಿಫಾರಸ್ಸಿನ ಪ್ರಮಾಣದಲ್ಲಿ, ಬೆಳೆ ಸೂಕ್ತವಾಗಿ ಒದಗಿಸಬೇಕೆಂದು ಕರೆ ನೀಡಿದರು. ಸಾವಯವ ಗೊಬ್ಬರಗಳನ್ನು ಬಿತ್ತನಗೆ ಮೊದಲು ಅಥವಾ ಬಿತ್ತುವ ಸಮಯದಲ್ಲಿ ಬಳಸುವುದರಿಂದ ಮಣ್ಣಿನ ಗುಣಲಕ್ಷಣಗಳು ಸರಿದೂಗಿಸಲ್ಪಟ್ಟು, ಬೆಳೆ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಯಾಗಿ, ಉತ್ತಮ ಇಳುವರಿ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ. ಇದು ಮಣ್ಣಿನ ಆರೋಗ್ಯ ಹಾಗೂ ಪೌಷ್ಟಿಕ ಭದ್ರತೆಗೆ ಬುನಾದಿಯಾಗುವುದಿಲ್ಲವೇ ಹಲವಾರು ಪೋಷಕಾಂಶಗಳ ಕೊರತೆಯನ್ನು ನೀಗಿಸುವುದು ಎಂದರು. ಗುಂಡ್ಲುಪೇಟೆ ತಾಲೂಕಿನ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಶಶಿಧರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯದಿಂದ ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುವ ಅನಿವಾರ್ಯತೆ ಉಂಟಾಗಿದ್ದು, ರೈತರು ಜಮೀನಿನ ಬದುಗಳನ್ನು ಸಶಕ್ತಗೊಳಿಸಿ, ಸಸ್ಯ ಸಂಕುಲಗಳನ್ನು ಉಳಿಸಿ, ಮಣ್ಣಿನ ಸವಕಳಿಯನ್ನು ನಿಯಂತ್ರಿಸಿ, ಮಳೆಯ ಪ್ರಮಾಣ ಆಧಾರಿತವಾಗಿ ಕೃಷಿ ಹೊಂಡಗಳನ್ನು ಸೂಕ್ತ ಸ್ಥಳಗಳಲ್ಲಿ ನಿರ್ಮಿಸಿ ಮಳೆ ನೀರು ಸಂಗ್ರಹಣೆ ಮಾಡಿ ಬೆಳೆಗಳನ್ನು ಬೆಳೆಯಲು ಬಳಸಿಕೊಳ್ಳಬೇಕೆಂದು ಕರೆ ನೀಡಿದರು.ಬದುಗಳನ್ನು ನಿರ್ಮಾಣ ಮಾಡುವುದರಿಂದ ಮಣ್ಣು ಮತ್ತು ನೀರಿನ ಸಂರಕ್ಷಣೆಯಾಗಿ ಭೂಮಿಯಲ್ಲಿನ ನೀರಿನ ಲಭ್ಯತೆಯ ಅವಧಿ ಹೆಚ್ಚಿ ಉತ್ತಮ ಇಳುವರಿ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ. ಕೃಷಿ ಇಲಾಖೆಯಿಂದ ರೈತರಿಗೆ ದೊರೆಯುವ ಹಲವಾರು ಯೋಜನೆಗಳ ಸೌಲಭ್ಯಗಳು, ಅದರಲ್ಲೂ ಮಣ್ಣಿನ ಮತ್ತು ನೀರಿನ ಸಂರಕ್ಷಣೆಗೆ ಇರುವ ಯೋಜನೆಗಳ ಬಗ್ಗೆ ವಿವರ ನೀಡಿದರು.
ಗ್ರಾಪಂ ಸದಸ್ಯ ಮಹದೇವಸ್ವಾಮಿ ಮಾತನಾಡಿ, ರೈತರು ಬಿತ್ತನೆ ಬೀಜ, ಗೊಬ್ಬರ ಇವುಗಳಿಗೂ ಮೊದಲು ಮಣ್ಣಿನ ಆರೈಕೆ ಮಾಡುವುದರ ಕಡೆ ಗಮನ ಕೊಡಬೇಕು. ಸಾವಯವ ಗೊಬ್ಬರಗಳಾದ ಸಗಣಿ ಗೊಬ್ಬರ, ಹಸಿರೆಲೆ ಗೊಬ್ಬರ, ಎರೆಹುಳು ಗೊಬ್ಬರ ಇವುಗಳನ್ನು ಮಣ್ಣಿಗೆ ಸೇರಿಸಿ ರಾಸಾಯನಿಕಗಳ ಮೇಲಿನ ಅವಲಂಬನೆ ಕಡಿತಗೊಳಿಸಲು ಕರೆ ನೀಡಿದರು. ಇದರಿಂದ ಜಮೀನಿನಲ್ಲಿ ಆರೋಗ್ಯದಾಯಕ ವಾತಾವರಣ ಉಂಟಾಗಿ, ಉತ್ತಮ ಬೆಳೆ ಬೆಳವಣಿಗೆ ಹಾಗೂ ಇಳುವರಿ ಪಡೆದುಕೊಳ್ಳಬಹುದು ಎಂದರು.ದೊಡ್ಡತುಪ್ಪೂರು ಗ್ರಾಮದ ಯುವ ರೈತ ಶಶಿಕುಮಾರ್ ಮಾತನಾಡಿ, ಸಾವಯವ ಕೃಷಿಯಿಂದ ಮಣ್ಣಿನಲ್ಲಿ ಸಾವಯವ ಅಂಶ ಹೆಚ್ಚಾಗಿ ಬೆಳೆ ಹಾನಿ ಮಾಡುವ ರೋಗಗಳು ಕಡಿಮೆಯಾಗುತ್ತವೆ. ಜೊತೆಗೆ ತಾವು ಸಾವಯವ ಪದ್ಧತಿಯಲ್ಲಿ ರಸಬಾಳೆ ಬೆಳೆಯುತ್ತಿದ್ದು, ಕೀಟ ಮತ್ತು ರೋಗಗಳ ಹಾವಳಿ ಕನಿಷ್ಠವಾಗಿದ್ದು ನೇರ ಮಾರುಕಟ್ಟೆ ಮಾಡಿ ಉತ್ತಮ ಮಾರುಕಟ್ಟೆ ಧಾರಣೆ ಮತ್ತು ಆದಾಯ ಗಳಿಸುವ ಆಶಾಭಾವನೆ ವ್ಯಕ್ತಪಡಿಸಿದರು. ಭೂಮಿಯ ಮಣ್ಣು ತಾಯಿಗೆ ಸಮವಾಗಿದ್ದು, ತಾಯಿ ಚೆನ್ನಾಗಿದ್ದರೆ ಮಕ್ಕಳು ಆರೋಗ್ಯಕರವಾಗಿರುತ್ತಾರೆಂದು ತಿಳಿಸಿದರು.
ಕೆಲಸೂರುಪುರ ಗ್ರಾಮದ ಲಿಂಗಪ್ಪ ಮಾತನಾಡಿ, ತಾವು 8 ವರ್ಷಗಳಿಂದ ಸಾವಯವ ಕೃಷಿಕರಾಗಿದ್ದು ಬೇವು, ಹೊಂಗೆಸೊಪ್ಪು, ನಾಟಿ ಹಸುವಿನ ಗೋಮೂತ್ರ, ಸಗಣಿ ಮತ್ತು ಹುರುಳಿ ಹಿಟ್ಟು ಬಳಸಿ ಸಾವಯವ ದ್ರವ್ಯಗಳನ್ನು ತಯಾರಿಸುತ್ತಿದ್ದು, ಇವುಗಳನ್ನು ಮುಸುಕಿನ ಜೋಳ, ಸಣ್ಣ ಈರುಳ್ಳಿ, ಕೋಸು, ಟೊಮೆಟೋ ಬೆಳೆಗಳಿಗೆ ಬಳಕೆ ಮಾಡುತ್ತಿದ್ದು ಯಾವುದೇ ಕೀಟ ಮತ್ತು ರೋಗಗಳು ಹಾನಿಯ ಮಟ್ಟ ತಲುಪಿಲ್ಲ, ಹಾಗಾಗಿ ಉತ್ತಮ ಇಳುವರಿ ದೊರೆಯುತ್ತಿದ್ದು ಸಾವಯವ ಕೃಷಿ ಫಲಪ್ರದವಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಶಿಂಡನಪುರ ಮತ್ತು ಅಕ್ಕ ಪಕ್ಕದ ಗ್ರಾಮಗಳ ರೈತರು ಭಾಗವಹಿಸಿದ್ದರು. ಕೃಷಿ ಇಲಾಖೆಯ ತಾಲೂಕು ತಾಂತ್ರಿಕ ವ್ಯವಸ್ಥಾಪಕಿ ವೀಣಾ ಮತ್ತು ಕೃಷಿ ವಿಜ್ಞಾನ ಕೇಂದ್ರದ ಕ್ಷೇತ್ರ ಪರಿವೀಕ್ಷಕ ಮಂಜುನಾಥ್ ಕಾರ್ಯಕ್ರಮ ನಿರ್ವಹಿಸಿದರು.