ಕನ್ನಡ ಅತ್ಯಂತ ಶ್ರೀಮಂತ ಭಾಷೆ: ರಾಧಾಕೃಷ್ಣನ್‌

| Published : Nov 10 2025, 01:15 AM IST

ಕನ್ನಡ ಅತ್ಯಂತ ಶ್ರೀಮಂತ ಭಾಷೆ: ರಾಧಾಕೃಷ್ಣನ್‌
Share this Article
  • FB
  • TW
  • Linkdin
  • Email

ಸಾರಾಂಶ

ಧಾರ್ಮಿಕ ತಾಣಗಳಿಂದ ತುಂಬಿರುವ ಈ ಪವಿತ್ರ ರಾಜ್ಯವನ್ನು ನಾನು ಪವಿತ್ರ ಕರ್ನಾಟಕ ಎಂದು ಕರೆಯುತ್ತೇನೆ. ನೀವಾಡುವ ಈ ಕನ್ನಡ ಭಾಷೆ ವಿಶ್ವದ ಅತ್ಯಂತ ಶ್ರೀಮಂತ ಭಾಷೆಗಳಲ್ಲೊಂದು ಎಂದು ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್‌ ಅವರು ಕನ್ನಡ ಭಾಷೆ, ನೆಲವನ್ನು ಹಾಡಿ, ಹೊಗಳಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು/ಹಾಸನ/ಮಂಡ್ಯ

ಧಾರ್ಮಿಕ ತಾಣಗಳಿಂದ ತುಂಬಿರುವ ಈ ಪವಿತ್ರ ರಾಜ್ಯವನ್ನು ನಾನು ಪವಿತ್ರ ಕರ್ನಾಟಕ ಎಂದು ಕರೆಯುತ್ತೇನೆ. ನೀವಾಡುವ ಈ ಕನ್ನಡ ಭಾಷೆ ವಿಶ್ವದ ಅತ್ಯಂತ ಶ್ರೀಮಂತ ಭಾಷೆಗಳಲ್ಲೊಂದು ಎಂದು ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್‌ ಅವರು ಕನ್ನಡ ಭಾಷೆ, ನೆಲವನ್ನು ಹಾಡಿ, ಹೊಗಳಿದ್ದಾರೆ.

ಮೈಸೂರಿನ ಜೆಎಸ್‌ಎಸ್‌ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ 16ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಅವರು ಘಟಿಕೋತ್ಸವ ಭಾಷಣ ಮಾಡಿದರು. ಇದು ನನ್ನ ಕರ್ನಾಟಕದ ಪವಿತ್ರ ನೆಲೆಗೆ ನೀಡಿದ ಮೊದಲ ಭೇಟಿ. ಇಂದು ಬೆಳಗ್ಗೆ ಶ್ರವಣಬೆಳಗೊಳಕ್ಕೆ ಭೇಟಿ ನೀಡಿ, ಈಗ ಮೈಸೂರಿನ ಪವಿತ್ರ ಭೂಮಿಗೆ ಬಂದಿದ್ದೇನೆ. ಕರ್ನಾಟಕ ತನ್ನ ಶ್ರೀಮಂತ ಸಂಸ್ಕೃತಿ ಮತ್ತು ಆರೋಗ್ಯಕರ ಜೀವನ ಶೈಲಿಯಿಂದ ಪ್ರಸಿದ್ಧವಾಗಿದೆ. ಧಾರ್ಮಿಕ ತಾಣಗಳಿಂದ ತುಂಬಿರುವ ಈ ಪವಿತ್ರ ರಾಜ್ಯವನ್ನು ನಾನು ಪವಿತ್ರ ಕರ್ನಾಟಕ ಎಂದು ಕರೆಯುತ್ತೇನೆ. ಕನ್ನಡ ಭಾಷೆ ವಿಶ್ವದ ಅತ್ಯಂತ ಶ್ರೀಮಂತ ಭಾಷೆಗಳಲ್ಲೊಂದು. ಕರ್ನಾಟಕದ ಗೀತೆ ಕೇಳಿದರೆ ಅದು ಎಷ್ಟು ದಿವ್ಯ, ಎಷ್ಟು ಮನಮುಟ್ಟುವಂತಿದೆ ಎಂಬುದು ಗೊತ್ತಾಗುತ್ತದೆ ಎಂದರು.ಮೇಲುಕೋಟೆ, ಚಾಮುಂಡಿಬೆಟ್ಟಕ್ಕೆ ಭೇಟಿ:

ಇದಕ್ಕೂ ಮೊದಲು, ಭಾನುವಾರ ಬೆಳಗ್ಗೆ 10.45ಕ್ಕೆ ಬೆಂಗಳೂರಿನಿಂದ ಮೇಲುಕೋಟೆಗೆ ಆಗಮಿಸಿದ ಉಪ ರಾಷ್ಟ್ರಪತಿಗಳನ್ನು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಕೃಷಿ ಸಚಿವ ಚಲುವರಾಯಸ್ವಾಮಿ ಸ್ವಾಗತಿಸಿದರು. ಬಳಿಕ, ಅವರು ಚೆಲುವನಾರಾಯಣಸ್ವಾಮಿ, ಮಹಾಲಕ್ಷ್ಮಿ ಅಮ್ಮನವರು, ರಾಮಾನುಜರ ದೇವಾಲಯಗಳಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.

ನಂತರ, ಹಾಸನ ಜಿಲ್ಲೆ ಶ್ರವಣಬೆಳಗೊಳಕ್ಕೆ ಭೇಟಿ ನೀಡಿದರು. ಶ್ರವಣಬೆಳಗೊಳದ ದಿಗಂಬರ ಜೈನ ಮಹಾಸಂಸ್ಥಾನದಿಂದ ಗೊಮ್ಮಟ ನಗರದ ಬಾಹುಬಲಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ನಡೆದ 20ನೇ ಶತಮಾನದ ಪ್ರಥಮಾಚಾರ್ಯ ಚಾರಿತ್ರ್ಯ ಚಕ್ರವರ್ತಿ ಪ.ಪೂ ಆಚಾರ್ಯ ಶ್ರೀ 108 ಶಾಂತಿಸಾಗರ ಮಹಾರಾಜರ ಪ್ರತಿಮೆ ಅನಾವರಣ ಮಾಡಿದರು. ಶ್ರವಣಬೆಳಗೊಳದ 4ನೇ ಬೆಟ್ಟಕ್ಕೆ ಶಾಂತಿಸಾಗರ ಮಹಾರಾಜರ ಪದನಾಮ ಅನಾವರಣಗೊಳಿಸಿದರು. ಬಳಿಕ, ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.