ಸಾರಾಂಶ
ಪಿಎಂ ಧನ್-ಧಾನ್ಯ ಕೃಷಿ ಯೋಜನೆಯಡಿ ಪ್ರತಿ ಜಿಲ್ಲೆಯಲ್ಲಿ ಕೃಷಿ ಅಭಿವೃದ್ಧಿಗೆ ರೈತರಿಗೆ ಒಟ್ಟು 1.07 ಕೋಟಿ ರು. ಮೀಸಲಿರಿಸಿದ್ದು, ಇದರಿಂದ ದ.ಕ.ಜಿಲ್ಲೆಗೂ ಪ್ರಯೋಜನ ಸಿಗುವ ಬಗ್ಗೆ ಆಶಾವಾದ ಹೊಂದಲಾಗಿದೆ.
ಮಂಗಳೂರು : ಕರಾವಳಿ ಜಿಲ್ಲೆಗೆ ಕೇಂದ್ರ ಬಜೆಟ್‌ನಲ್ಲಿ ವಿಶೇಷ ಯೋಜನೆ, ಕೊಡುಗೆಗಳು ಇಲ್ಲ. ಆದರೂ ಆದಾಯ ತೆರಿಗೆ ಪಾವತಿ ವಿನಾಯ್ತಿಯನ್ನು 12 ಲಕ್ಷ ರು.ಗೆ ನಿಗದಿಪಡಿಸಿರುವುದು, ಮೀನುಗಾರಿಕೆ, ಕೃಷಿ ವಲಯಕ್ಕೆ ಯೋಜನೆಗಳನ್ನು ಪ್ರಕಟಿಸಿರುವುದು, ಮಧ್ಯಮ ವರ್ಗದ ಏಳಿಗೆಗೆ ಪೂರಕವಾದ ಕಾರ್ಯಕ್ರಮ ಹಮ್ಮಿಕೊಂಡಿರುವುದಕ್ಕೆ ಜನಸಾಮಾನ್ಯ ವರ್ಗದಿಂದ ಶ್ಲಾಘನೆ ವ್ಯಕ್ತವಾಗಿದೆ.
ಕೇಂದ್ರ ಬಜೆಟ್‌ನಲ್ಲಿ ಮೀನು ಉತ್ಪಾದನೆಯಿಂದ ರಫ್ತಿನ ವರೆಗೆ 60 ಸಾವಿರ ಕೋಟಿ ರು. ನಿಗದಿಪಡಿಸಲಾಗಿದೆ. ಸಮುದ್ರೋತ್ಪನ್ನಗಳ ಅಭಿವೃದ್ಧಿಪಡಿಸಿ ಮೌಲ್ಯವರ್ಧಿತ ಉತ್ಪನ್ನ ತಯಾರಿಗೆ 25 ಸಾವಿರ ಕೋಟಿ ರು. ಮೀಸಲಿರಿಸಲಾಗಿದೆ. ಮೆರಿಟೈಮ್ ಯೋಜನೆಯಡಿ ಕೇಂದ್ರ ಸರ್ಕಾರ ಶೇ.49 ಪಾಲು ಹೂಡಿಕೆ ಮಾಡಿದರೆ, ಉಳಿದಂತೆ ಬಂದರು ಹಾಗೂ ಖಾಸಗಿ ಕಂಪನಿಗಳು ಹೂಡಿಕೆ ಮಾಡಬೇಕಾಗಿದೆ. ಇದು ಸಮುದ್ರೋತ್ಪನ್ನ ಉದ್ಯಮದಲ್ಲಿ ಸ್ಪರ್ಧಾತ್ಮಕತೆಗೆ ಸಾಧ್ಯವಾಗಲಿದೆ ಎಂದು ಹೇಳಲಾಗಿದೆ.
ಮೂರು ವರ್ಷಗಳಲ್ಲಿ ದೇಶದ ಪ್ರತಿ ಜಿಲ್ಲೆಯಲ್ಲೂ ಕ್ಯಾನ್ಸರ್ ಪೀಡಿತರಿಗೆ ಡೇ ಕೇರ್ ಕ್ಯಾನ್ಸರ್ ಸೆಂಟರ್ ತೆರೆಯಲು ಪ್ರಸ್ತಾಪಿಸಲಾಗಿದೆ. ಪ್ರಥಮ ಹಂತದಲ್ಲಿ 200 ಜಿಲ್ಲೆಗಳಲ್ಲಿ ಈ ಸೆಂಟರ್ ತೆರೆಯಲಾಗುತ್ತದೆ.
ಪಿಎಂ ಧನ್-ಧಾನ್ಯ ಕೃಷಿ ಯೋಜನೆಯಡಿ ಪ್ರತಿ ಜಿಲ್ಲೆಯಲ್ಲಿ ಕೃಷಿ ಅಭಿವೃದ್ಧಿಗೆ ರೈತರಿಗೆ ಒಟ್ಟು 1.07 ಕೋಟಿ ರು. ಮೀಸಲಿರಿಸಿದ್ದು, ಇದರಿಂದ ದ.ಕ.ಜಿಲ್ಲೆಗೂ ಪ್ರಯೋಜನ ಸಿಗುವ ಬಗ್ಗೆ ಆಶಾವಾದ ಹೊಂದಲಾಗಿದೆ. ಸಣ್ಣ ಮತ್ತು ಅತೀ ಸಣ್ಣ ಉದ್ದಿಮೆಗಳಿಗೆ ಇನ್ನಷ್ಟು ಉತ್ತೇಜನ ಮತ್ತಿತರ ಕಾರ್ಯಕ್ರಮಗಳನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.
ಪ್ರಗತಿಗೆ ಪೂರಕ ಬಜೆಟ್: ಡಾ.ವಿಘ್ನೇಶ್ವರ ವರ್ಮುಡಿ
ಕೃಷಿ, ಕೈಗಾರಿಕೆ ಹಾಗೂ ಸೇವಾ ಕ್ಷೇತ್ರಗಳ ದೂರದೃಷ್ಟಿಯ ಅಭಿವೃದ್ಧಿ ಬೆಳವಣಿಗೆ ಮತ್ತು ಪ್ರಗತಿಗೆ ಪೂರಕ ಬಜೆಟ್. ಅಮ್ಮಂದಿರು ಮತ್ತು ಕಂದಮ್ಮಗಳಿಗೆ ಪೌಷ್ಠಿಕ ಆಹಾರ, ಗ್ರಾಮೀಣ ಕುಟುಂಬಗಳಿಗೆ ಕುಡಿಯುವ ನೀರು, ಶಾಲೆಗಳ ಅಭಿವೃದ್ಧಿ ಆದರೆ ಅನ್ನದಾತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಮಿತಿ ಹೆಚ್ಚಳ, ಗ್ರಾಮ ಮಟ್ಟದಲ್ಲಿ ಧಾನ್ಯಗಳ ಸಂಗ್ರಹಣೆ ಇವೆಲ್ಲ ಗ್ರಾಮೀಣ ಮತ್ತು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಪೂರಕ. ಅಕ್ಷರ ಕ್ಷೇತ್ರದ ಅಭಿವೃದ್ಧಿಗೆ ಶಾಲೆಗಳ ಬೆಳವಣಿಗೆಗೆ ಪೂರಕ ವಾತಾವರಣ, ಆರೋಗ್ಯ ಕ್ಷೇತ್ರದ ಬೆಳವಣಿಗೆಗೆ ಮೆಡಿಕಲ್ ಸೀಟುಗಳ ಹೆಚ್ಚಳ ಇವೆಲ್ಲದರೊಂದಿಗೆ ವಿವಿಧ ಸೇವೆಗಳ ಸುಧಾರಣೆ ಪ್ಲಸ್ ಪಾಯಿಂಟ್. ಒಟ್ಟಾರೆಯಾಗಿ ಕೇಂದ್ರ ಬಜೆಟ್ ಎಲ್ಲರನ್ನೂ ಗಮನದಲ್ಲಿ ಇಟ್ಟುಕೊಂಡು ದೂರ ದೃಷ್ಟಿಯ ಪ್ರಗತಿಗೆ ಪೂರಕ.
-ಡಾ.ವಿಘ್ನೇಶ್ವರ ವರ್ಮುಡಿ, ಕೃಷಿ ಮಾರುಕಟ್ಟೆ ತಜ್ಞರು
ಮೋದಿ ಸರ್ಕಾರದ ಸರ್ವಸ್ಪರ್ಶಿ ಬಜೆಟ್ : ವೇದವ್ಯಾಸ್ ಕಾಮತ್ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ದಾಖಲೆಯ ಎಂಟನೇ ಬಾರಿಯ 2025-26 ನೇ ಸಾಲಿನ ವಿಕಸಿತ ಬಜೆಟ್ ನವ ಭಾರತಕ್ಕೆ ಹೊಸ ಶಕ್ತಿಯನ್ನು ತುಂಬುವುದರ ಜೊತೆಗೆ ರಾಷ್ಟ್ರವು ಜಾಗತಿಕ ಮಟ್ಟದಲ್ಲಿ ಸದೃಢವಾಗಿ ಬೆಳೆಯುತ್ತಿರುವುದರ ಸಂಕೇತವಾಗಿದೆ. ಬಜೆಟ್‌ನಲ್ಲಿ ತೆರಿಗೆದಾರರಿಗೆ 12 ಲಕ್ಷ ರು. ವರೆಗೆ ಆದಾಯ ತೆರಿಗೆ ರದ್ದುಪಡಿಸಿರುವುದು ಅತ್ಯಂತ ದೊಡ್ಡ ನಿರ್ಧಾರವಾಗಿದ್ದು, ಕ್ಯಾನ್ಸರ್ ಔಷಧ, ಎಲೆಕ್ಟ್ರಿಕ್ ವಾಹನಗಳು, ಮೊಬೈಲ್ ಫೋನ್, ಎಲ್‌ಇಡಿ ಟಿವಿ, ಚರ್ಮದ ಉತ್ಪನ್ನಗಳು, ಸ್ವದೇಶಿ ಬಟ್ಟೆಗಳು ಹೀಗೆ ಹತ್ತು ಹಲವು ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಲಾಗಿದ್ದು ಬಡ ಹಾಗೂ ಮಧ್ಯಮ ವರ್ಗದ ಹರ್ಷಕ್ಕೆ ಕಾರಣವಾಗಿದೆ. -ವೇದವ್ಯಾಸ್ ಕಾಮತ್, ಶಾಸಕರು, ಮಂಗಳೂರು ದಕ್ಷಿಣ.
ಆರ್ಥಿಕ ಪ್ರಗತಿಯ ಬಜೆಟ್: ಕ್ಯಾ.ಗಣೇಶ್ ಕಾರ್ಣಿಕ್
ಆತ್ಮ ವಿಶ್ವಾಸದೊಂದಿಗೆ ನಮ್ಮ ದೇಶವನ್ನು ಆತ್ಮ ನಿರ್ಭರತೆಯತ್ತ ಕೊಂಡೊಯ್ಯುವ 2025-26ರ ಬಜೆಟ್. ಮಧ್ಯಮ ವರ್ಗದ ಹಿತಾಸಕ್ತಿಯನ್ನು ಪರಿಗಣಿಸಿ ತೆರಿಗೆಯನ್ನು ಸರಳೀಕರಿಸಿ 1 ಲಕ್ಷ ಕೋಟಿ ರು.ಗೂ ಹೆಚ್ಚಿನ ರಿಲೀಫ್ ನೀಡಿರುವ ಸ್ವಾಗತಾರ್ಹ ಬಜೆಟ್.
ಪರೋಕ್ಷ ತೆರಿಗೆಗಳ ಇನ್ನಷ್ಟು ಸರಳಗೊಳಿಸುವ ಪ್ರಯತ್ನ ಇರುವ ಭವಿಷ್ಯದ ಸ್ಪಷ್ಟ ದೃಷ್ಟಿ ಕೋನವಿರುವ ಬಜೆಟ್. ಸರ್ಕಾರದ ಕೈಯಲ್ಲಿ ಹಣ ಇರಿಸಿ ದುಂದುವೆಚ್ಚ ಮಾಡುವುದಕ್ಕಿಂತ ಜನತೆಯ ಕೈಯಲ್ಲಿ ಹೆಚ್ಚು ಹಣವಿರುವಂತೆ ಮಾಡಿ ಉಳಿತಾಯ, ಹೂಡಿಕೆ ಹಾಗೂ ಅಗತ್ಯವಸ್ತುಗಳಿಗಾಗಿ ವೆಚ್ಚ ಮಾಡಲು ಅವಕಾಶ ನೀಡಿ ಆರ್ಥಿಕ ಪ್ರಗತಿಯನ್ನು ಪ್ರೋತ್ಸಾಹಿಸುವ ಆಶಾ ದಾಯಕ ಬಜೆಟ್.
-ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ವಿಧಾನ ಪರಿಷತ್ ಮಾಜಿ ಸದಸ್ಯರು
-ಸ್ಟಾರ್ಟಪ್‌ಗಳಿಗೆ ಶಕ್ತಿಯ ಬಜೆಟ್: ವಿಶಾಲ್ ಸಾಲಿಯಾನ್
ಇದು ಎಂಎಸ್‌ಎಂಇಗಳು ಮತ್ತು ಸ್ಟಾರ್ಟಪ್‌ಗಳಿಗೆ ಶಕ್ತಿ ಕೊಡುವ ಪ್ರಗತಿಪರ ಬಜೆಟ್. CGTMSE ಯೋಜನೆಯಡಿಯಲ್ಲಿ ಎಂಎಸ್‌ಎಂಇ ಮತ್ತು ಸ್ಟಾರ್ಟಪ್‌ಗಳಿಗೆ ಔಪಚಾರಿಕ ಸಾಲವನ್ನು ಸುಲಭಗೊಳಿಸಲು ಕ್ರೆಡಿಟ್ ಗ್ಯಾರಂಟಿ ಕವರನ್ನು ಹೆಚ್ಚಿಸಲಾಗಿದೆ. ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಪ್ರಸ್ತುತ 5 ಕೋಟಿ ರು. ಇರುವುದನ್ನು 10 ಕೋಟಿ ರು. ವರೆಗೆ ಹೆಚ್ಚಿಸಲಾಗಿದೆ. ಇದರಿಂದ ಮುಂದಿನ ಐದು ವರ್ಷಗಳಲ್ಲಿ 1.5 ಲಕ್ಷ ಕೋಟಿ ಹೆಚ್ಚುವರಿ ಕ್ರೆಡಿಟ್ ಸಿಗಲಿದೆ. ಸ್ಟಾರ್ಟಪ್‌ಗಳಿಗೆ, ಪ್ರಸ್ತುತ 10 ಕೋಟಿ ರು. ಇದ್ದುದನ್ನು 20 ಕೋಟಿ ರು. ವರೆಗೆ ಹೆಚ್ಚಿಸಲಾಗಿದೆ.
ಇದರ ಜೊತೆಗೆ ಸೂಕ್ಷ್ಮ ಉದ್ಯಮಗಳಿಗೆ 5 ಲಕ್ಷದ ಮಿತಿಯ ಕಸ್ಟಮೈಸ್‌ಡ್ ಕ್ರೆಡಿಟ್ ಕಾರ್ಡ್‌ಗಳನ್ನು ಪರಿಚಯಿಸುವುದು. ಆರ್ಥಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಶ್ಲಾಘನೀಯ ಕ್ರಮವಾಗಿದೆ. ಈ ಕ್ರಮಗಳು ಕೈಗಾರಿಕಾ ಬೆಳವಣಿಗೆ, ಉದ್ಯಮಶೀಲತೆಯ ಬಲವರ್ಧನೆ ಮತ್ತು ಎಂಎಸ್‌ಎಂಇ ಕ್ಷೇತ್ರದಲ್ಲಿ ಹೊಸ ಅವಕಾಶಗಳ ಸೃಷ್ಟಿಯನ್ನು ಉತ್ತೇಜಿಸಲಿದೆ.
-ವಿಶಾಲ್ ಸಾಲಿಯಾನ್, ಅಧ್ಯಕ್ಷರು, ಜಿಲ್ಲಾ ಸಣ್ಣ ಕೈಗಾರಿಕಾ ಸಂಘ, ಮಂಗಳೂರು-
ಮಧ್ಯಮ ವರ್ಗಕ್ಕೆ ಅನುಕೂಲ ಬಜೆಟ್: ನಳಿನ್ ಕುಮಾರ್
ಇದು ಬಡವರ, ಮಧ್ಯಮ ವರ್ಗ, ಮಹಿಳೆಯರು ಹಾಗೂ ರೈತರ ಪರವಾದ ಬಜೆಟ್. ಅದರಲ್ಲೂ ರೈತರಿಗೆ, ಯುವಕರಿಗೆ, ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಆದಾಯ ತೆರಿಗೆ ವ್ಯಾಪ್ತಿಯನ್ನು 12 ಲಕ್ಷ ರು.ಗೆ ಏರಿಸಲಾಗಿದೆ. ಇದರಿಂದ ಮಧ್ಯಮ ವರ್ಗದ ಬಹಳಷ್ಟು ಅನುಕೂಲವಾಗಲಿದೆ. ಪ್ರಧಾನಮಂತ್ರಿ ಧನ್ ಧಾನ್ಯ ಕೃಷಿ ಯೋಜನೆ ಕೃಷಿ ಜಿಲ್ಲೆಗಳ ಅಭಿವೃದ್ಧಿ ಕಾರ್ಯಕ್ರಮ. ಸರ್ಕಾರ ರಾಜ್ಯಗಳೊಂದಿಗೆ ಸಹಭಾಗಿತ್ವದಲ್ಲಿ 100 ಜಿಲ್ಲೆಗಳನ್ನು ಒಳಗೊಂಡಿರುವಂತೆ ಈ ಯೋಜನೆ ರೈತಾಪಿ ವರ್ಗಕ್ಕೆ ಬಹಳ ಅನುಕೂಲವಾಗಲಿದೆ.
ಮಧ್ಯಮ ವರ್ಗಕ್ಕೆ ಗಿಫ್ಟ್: ಡಾ.ಭರತ್ ಶೆಟ್ಟಿ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಧ್ಯಮ ವರ್ಗಕ್ಕೆ ಆದಾಯ ತೆರಿಗೆ ವ್ಯಾಪ್ತಿಯನ್ನು 12 ಲಕ್ಷ ರು. ವರೆಗೆ ವಿಸ್ತರಿಸಿದ್ದು ಬಹುದೊಡ್ಡ ಗಿಫ್ಟ್ ನೀಡಿದ್ದಾರೆ. ದೇಶದ ಬೆನ್ನೆಲುಬಿನಂತೆ ಇರುವ ಬಡ ಹಾಗೂ ಮಧ್ಯಮ ವರ್ಗದ ಜನರಲ್ಲಿ ಹೆಚ್ಚು ಸಂಪತ್ತು ಉಳಿತಾಯವಾಗುತ್ತದೆ. ಮಾತ್ರವಲ್ಲ ಕೊಳ್ಳುವ ಶಕ್ತಿ ಹೆಚ್ಚಾಗಿ ಆರ್ಥಿಕವಾಗಿ ವ್ಯಾಪಾರ ವಹಿವಾಟಿಗೆ ಉತ್ತೇಜನ ನೀಡಿದಂತಾಗಿದೆ.
ಜೀವರಕ್ಷಕ ಔಷಧಿ ಸುಂಕದಲ್ಲಿ ಗಣನೀಯವಾಗಿ ಕಡಿತ ಮಾಡಿದ್ದು ಇದರಿಂದ ಪ್ರಮುಖ ಔಷಧಿಗಳ ದರ ಕಡಿಮೆಯಾಗಿ ಸಾಮಾನ್ಯ ಜನರಿಗೆ ವರದಾನವಾಗಲಿದೆ. ಕೃಷಿ, ಶಿಕ್ಷಣ, ಸಣ್ಣ ಕೈಗಾರಿಕೆಗೆ ಒತ್ತು, ಸಂಶೋಧನೆ, ಕೌಶಲ್ಯ ವೃದ್ಧಿಗೆ ಆದ್ಯತೆ ನೀಡಿ ಭವಿಷ್ಯದ ಯುವ ಸಮಾಜವನ್ನು ಬಲಾಡ್ಯಗೊಳಿಸುವ ಅತ್ಯುತ್ತಮ, ಅಭಿವೃದ್ಧಿ ಪರ ಬಜೆಟ್ ಆಗಿದೆ.
-ಡಾ.ಭರತ್ ಶೆಟ್ಟಿ, ಶಾಸಕರು, ಮಂಗಳೂರು ಉತ್ತರ
ಮಧ್ಯಮ ವರ್ಗಕ್ಕೆ, ವೇತನದಾರರಿಗೆ ಆಶಾವಾದ: ಡಾ.ಹರೀಶ್ ಆಚಾರ್ಯಈ ಬಜೆಟ್‌ನಲ್ಲಿ ಆದಾಯ ತೆರಿಗೆಯಲ್ಲಿ ಹಲವು ಬದಲಾವಣೆಗಳನ್ನು ಘೋಷಿಸಿದ್ದು, ೧೨ ಲಕ್ಷ ರು.ವರೆಗೆ ಯಾವುದೇ ತೆರಿಗೆ ಇಲ್ಲ ಘೋಷಿಸಿದ್ದಾರೆ. ಇದರಿಂದ ಮಧ್ಯಮ ವರ್ಗದ ಜನರಿಗೆ ಮತ್ತು ವೇತನದಾರರಿಗೆ ನೆರವಾಗಲಿದೆ.
ಮಧ್ಯಮ ವರ್ಗದ ಜನರನ್ನು ವಿಶೇಷವಾಗಿ ಗಮನದಲ್ಲಿರಿಸಿ ಆದಾಯ ತೆರಿಗೆ ಸುಧಾರಣೆಗಳನ್ನು ಜಾರಿಗೆ ತರಲಾಗಿದೆ. ಮಧ್ಯಮ ವರ್ಗದವರ ತೆರಿಗೆ ಪಾವತಿಯ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಲು ಮತ್ತು ಅವರಿಗೆ ಸಿಗುವ ವೇತನದ ಹೆಚ್ಚಿನ ಹಣ ಅವರದೇ ಕೈಸೇರುವಂತೆ ಮಾಡುವುದಕ್ಕೆ ಒತ್ತು ಕೊಟ್ಟಿರುವುದು ನಿರ್ಮಲಾ ಸೀತಾರಾಮನ್ ಅವರ ಬಜೆಟ್‌ನಲ್ಲಿ ಕಂಡುಬರುತ್ತದೆ.
-ಡಾ.ಎಸ್.ಆರ್.ಹರೀಶ್ ಆಚಾರ್ಯ, ಅಧ್ಯಕ್ಷರು, ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ.
ತೆರಿಗೆ ಪಾವತಿದಾರರಿಗೆ ಸವಲತ್ತು ನೀಡಿ: ವೇಣು ಶರ್ಮಾ
ಸದ್ಯ ದೇಶದ ಶೇ. 80ಕ್ಕಿಂತ ಜಾಸ್ತಿ ಜನ ಉಚಿತ ಅಥವಾ ಮೀಸಲಾತಿ ಅನುಭವಿಸುತ್ತಿದ್ದಾರೆ. ಆದರೆ ದೇಶ ಕಟ್ಟುವ ಟ್ಯಾಕ್ಸ್ ಪಾವತಿದಾರರಿಗೆ ಇದುವರೆಗೆ ಯಾವುದೇ ಸರ್ಕಾರ ಏನನ್ನೂ ಕೊಡಲಿಲ್ಲ.ಹಾಗಾಗಿ ಮುಂದಿನ ದಿನಗಳಲ್ಲಿ ಟ್ಯಾಕ್ಸ್ ಕಟ್ಟಿದ ಅಥವಾ ಐಟಿ ರಿಟರ್ನ್ಸ್ ಮಾಡಿದವರಿಗೆ ಸರ್ಕಾರಿ ವ್ಯವಸ್ಥೆಯ ಬಸ್ಸು, ದೇವಸ್ಥಾನ, ರೈಲು, ಸರ್ಕಾರಿ ಇಲಾಖೆಗಳಲ್ಲಿ ಆದ್ಯತೆ ನೀಡಬೇಕಾಗಿದೆ. ಅವರಿಗೆ ವಿಶೇಷ ಐಡಿ ಕಾರ್ಡ್ ನೀಡುವ ಬಗ್ಗೆ ಮುಂದಿನ ಬಜೆಟ್‌ನಲ್ಲಿ ಈ ಕುರಿತು ಆಲೋಚಿಸಬೇಕು.
ಮಧ್ಯಮ ವರ್ಗದ ಭರ್ಜರಿ ಕೊಡುಗೆ: ಸತೀಶ್ ಕುಂಪಲಕೇಂದ್ರ ಬಜೆಟ್‌ನಲ್ಲಿ ಮಧ್ಯಮ ವರ್ಗದ ಜನರಿಗೆ ಭರ್ಜರಿ ಕೊಡುಗೆ ನೀಡಿದೆ. ವಾರ್ಷಿಕ 12 ಲಕ್ಷ ರು. ವರೆಗೆ ಆದಾಯಕ್ಕೆ ಆದಾಯ ತೆರಿಗೆಯಿಂದ ಮುಕ್ತಿ ನೀಡಿದ ಐತಿಹಾಸಿಕ ನಿರ್ಣಯವು ಜನ ಸಾಮಾನ್ಯ ಹಾಗೂ ಮಧ್ಯಮ ವರ್ಗಕ್ಕೆಮೋದಿ ಸರ್ಕಾರದ ಭರ್ಜರಿ ಗಿಫ್ಟ್ ಆಗಿದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡಿರುವುದು ಕೃಷಿಕರಿಗೆ ವರದಾನವಾಗಲಿದೆ. ನಗರಾಭಿವೃದ್ಧಿಗೆ 1 ಲಕ್ಷ ಕೋಟಿ ರು. ಹೂಡಿಕೆಯಿಂದಾಗಿ ಜಲ ಹಾಗೂ ಮೂಲ ಸೌಕರ್ಯ ಅಭಿವೃದ್ಧಿಗೆ ಬಳಕೆಯಾಗಲಿದೆ.ಕೇಂದ್ರ ಸರ್ಕಾರ ರಾಜ್ಯಗಳಿಗೆ 1.5 ಲಕ್ಷ ಕೋಟಿ ರು. ಬಡ್ಡಿ ರಹಿತ ಸಾಲ ನೀಡುವುದು ಸ್ವಾಗತಾರ್ಹವಾಗಿದೆ. ಪ್ರಧಾನಮಂತ್ರಿ ಧನ್ ಧಾನ್ಯ ಕೃಷಿ ಯೋಜನೆಯಿಂದ 1.7 ಕೋಟಿ ರೈತರಿಗೆ ಉಪಯೋಗ ಆಗಲಿದೆ.
-ಸತೀಶ್ ಕುಂಪಲ, ಜಿಲ್ಲಾಧ್ಯಕ್ಷ, ಭಾಜಪ, ದ.ಕ.
ಅನುಕೂಲಕರ ಬಜೆಟ್: ಆನಂದ್ ಜಿ.ಪೈ
-ಕೃಷಿ, ಕೈಗಾರಿಕೆಗಳಲ್ಲಿ ಅಭಿವೃದ್ಧಿ ಹೂಡಿಕೆಗೆ ಅನುಕೂಲಕರ ಬಜೆಟ್. ನೇರ ಹಾಗೂ ಪರೋಕ್ಷ ತೆರಿಗೆಯಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಎಂಎಸ್‌ಎಂಇ ಮತ್ತು ಸ್ಟಾರ್ಟಪ್‌ಗಳಿಗೆ ಉತ್ತೇಜನ ನೀಡಲಾಗಿದೆ. ಮೂಲಸೌಕರ್ಯ ವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಆರ್ಥಿಕ ಕ್ಷೇತ್ರದ ಸುಧಾರಣೆ, ಉದ್ಯೋಗ ಹಾಗೂ ವೃತ್ತಿಪರತೆಗೆ ಕ್ರಮ, ಪ್ರವಾಸೋದ್ಯಮಕ್ಕೆ ಪೂರಕ ಬಜೆಟ್ ಇದಾಗಿದೆ.
ಕರ್ನಾಟಕಕ್ಕೆ ಬಜೆಟ್ ತಾರತಮ್ಯ: ಹರೀಶ್ ಕುಮಾರ್‌ಕೇಂದ್ರದ ಬಿಜೆಪಿ ಸರ್ಕಾರವು ಚುನಾವಣಾ ಹೊಸ್ತಿಲಲ್ಲಿರುವ ಬಿಹಾರಕ್ಕೆ ಬಜೆಟ್‌ನಲ್ಲಿ ಬಂಪರ್ ಕೊಡುಗೆ ನೀಡಿದೆ. ಆ ಮೂಲಕ ಕರ್ನಾಟಕದ ಬಗ್ಗೆ ಅನುಸರಿಸುತ್ತಿರುವ ತಾರತಮ್ಯ ಧೋರಣೆ ಜಗಜ್ಜಾಹೀರಾಗಿದೆ. ಪ್ರಕೃತಿ ವಿಕೋಪದಿಂದ ರೈತರು ತತ್ತರಿಸಿದ್ದು, ರೈತರ ಕೃಷಿ ಸಾಲ ಮನ್ನಾ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಘೋಷಣೆ ಮಾಡಿಲ್ಲ. ಕರ್ನಾಟಕ ಸೇರಿದಂತೆ ಅಭಿವೃದ್ಧಿ ಪಥದಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳನ್ನು ಕಡೆಗಣಿಸಲಾಗಿದ್ದು, ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿರುವ ತಾರತಮ್ಯ ನೀತಿಯನ್ನು ಮತ್ತೆ ಮುಂದುವರಿಸುತ್ತಿದೆ. ಇದೊಂದು ನಿರಾಶಾದಾಯಕ ಬಜೆಟ್.-
ಕೆ.ಹರೀಶ್ ಕುಮಾರ್, ಮಾಜಿ ಎಂ.ಎಲ್ಸಿ, ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ.