ಕೊಲ್ಹಾರ ಬಳಿ ರಸ್ತೆಯಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

| Published : Sep 16 2024, 01:51 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಕೊಲ್ಹಾರ: ಕೊಲ್ಹಾರ ಯು.ಕೆ.ಪಿ ಸಮೀಪದ ಬನ್ನಿ ಹಳ್ಳದ ಪಕ್ಕದ ರಸ್ತೆಯ ಮೇಲೆ ಶನಿವಾರ ತಡರಾತ್ರಿ ಬೃಹತ್ ಗಾತ್ರದ ಮೊಸಳೆಯೊಂದು ಪ್ರತ್ಯಕ್ಷವಾಗಿ ರೈತರಲ್ಲಿ ಆತಂಕ ಮೂಡಿಸಿದೆ. ಅರ್ಜುನ ಬ್ಯಾಲ್ಯಾಳ ಎಂಬ ರೈತ ಶನಿವಾರ ತಡರಾತ್ರಿ ತಮ್ಮ ಜಮೀನ ಕಡೆಗೆ ಹೋಗುತ್ತಿದ್ದಾಗ ರಸ್ತೆ ಮೇಲೆ ಮೊಸಳೆ ಪ್ರತ್ಯಕ್ಷವಾಗಿದೆ. ತಕ್ಷಣ ಭಯಭೀತನಾದ ಅರ್ಜುನ ರೈತ ಪಕ್ಕದ ಇನ್ನೊರ್ವ ರೈತ ಸುರೇಶ ಶಿವಣ್ಣವರ ಅವರಿಗೆ ಮೊಸಳೆ ಇದ್ದ ಬಗ್ಗೆ ಮಾಹಿತಿ ನೀಡಿದ್ದಾನೆ.

ಕನ್ನಡಪ್ರಭ ವಾರ್ತೆ ಕೊಲ್ಹಾರ: ಕೊಲ್ಹಾರ ಯು.ಕೆ.ಪಿ ಸಮೀಪದ ಬನ್ನಿ ಹಳ್ಳದ ಪಕ್ಕದ ರಸ್ತೆಯ ಮೇಲೆ ಶನಿವಾರ ತಡರಾತ್ರಿ ಬೃಹತ್ ಗಾತ್ರದ ಮೊಸಳೆಯೊಂದು ಪ್ರತ್ಯಕ್ಷವಾಗಿ ರೈತರಲ್ಲಿ ಆತಂಕ ಮೂಡಿಸಿದೆ.

ಅರ್ಜುನ ಬ್ಯಾಲ್ಯಾಳ ಎಂಬ ರೈತ ಶನಿವಾರ ತಡರಾತ್ರಿ ತಮ್ಮ ಜಮೀನ ಕಡೆಗೆ ಹೋಗುತ್ತಿದ್ದಾಗ ರಸ್ತೆ ಮೇಲೆ ಮೊಸಳೆ ಪ್ರತ್ಯಕ್ಷವಾಗಿದೆ. ತಕ್ಷಣ ಭಯಭೀತನಾದ ಅರ್ಜುನ ರೈತ ಪಕ್ಕದ ಇನ್ನೊರ್ವ ರೈತ ಸುರೇಶ ಶಿವಣ್ಣವರ ಅವರಿಗೆ ಮೊಸಳೆ ಇದ್ದ ಬಗ್ಗೆ ಮಾಹಿತಿ ನೀಡಿದ್ದಾನೆ. ಅವರೊಂದಿಗೆ ಅಕ್ಕ ಪಕ್ಕದ ಜಮೀನಿನ ಹತ್ತಾರು ರೈತರು ಸ್ಥಳಕ್ಕೆ ಆಗಮಿಸಿದ್ದಾರೆ. ರೈತರನ್ನು ಕಂಡ ಮೊಸಳೆ ಪ್ರಾಣೇಶ ಪತ್ತಾರವರ ಗೋವಿನಜೋಳದ ಮೂಲಕ ಹಾದು ಪಕ್ಕದಲ್ಲಿದ್ದ ಕಿರು ಕಾಲುವೆ ಬದಿಯಲ್ಲಿ ಮುಳ್ಳು ಕಂಟಿಯಲ್ಲಿ ಸೇರಿಕೊಂಡಿದೆ. ರೈತರು ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಉಪ ವಲಯ ಅರಣ್ಯ ಅಧಿಕಾರಿ ಬಸವರಾಜ ಕೊಣ್ಣೂರ ಹಾಗೂ ನಿಡಗುಂದಿ-ಕೊಲ್ಹಾರ ವಲಯದ ಮೊಸಳೆ ರಕ್ಷಣೆ ಅಧಿಕಾರಿ ನಾಗೇಶ ಸೇರಿ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮೊಸಳೆಯನ್ನು ಸೆರೆ ಹಿಡಿದಿದ್ದು, ತಡರಾತ್ರಿ ಕೊರ್ತಿ -ಕೊಲ್ಹಾರ ಸೇತುವೆ ಬಳಿಯ ಕೃಷ್ಣಾ ನದಿ ಹಿನ್ನಿರಿಗೆ ಬಿಟ್ಟಿದ್ದಾರೆ. ಕೃಷ್ಣಾ ನದಿ ಹಿನ್ನಿರು ಬನ್ನಿ ಹಳ್ಳದವರೆಗೆ ಹರಿದು ಬರುತ್ತಿದೆ. ಅದರ ಮೂಲಕ ಈ ಮೊಸಳೆಯು ಇಲ್ಲಿಗೆ ಬಂದಿರಬಹುದು ಎಂದು ಶಂಕಿಸಲಾಗಿದೆ.