ಕನ್ನಡಪ್ರಭ ವಾರ್ತೆ ಪಾಂಡವಪುರ
ಸಾರ್ವಜನಿಕರಲ್ಲಿ ಬಾಲ್ಯ ವಿವಾಹದ ವಿರುದ್ಧ ಅರಿವು ಮೂಡಿಸಲು ಪಟ್ಟಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಬೃಹತ್ ಜನಜಾಗೃತಿ ಜಾಥಾ ನಡೆಸಿದರು.ಪಟ್ಟಣದ ತಾಲೂಕು ಕಚೇರಿಯಿಂದ ಹೊರಟ ಜಾಗೃತಿ ಜಾಥಾಕ್ಕೆ ಸಿವಿಲ್ ನ್ಯಾಯಾಧೀಶ ಆನಂದ್ ಎಂ.ಚಾಲನೆ ನೀಡಿದರು. ನಂತರ ಜಾಥವು ಪಟ್ಟಣದ ವಿವಿಧ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪಟ್ಟಣದ ವಿಜಯ ಕಾಲೇಜು ಬಳಿ ಅಂತಿಮಗೊಳಿಸಿದರು. ವಿಜಯ ಕಾಲೇಜಿನ ಸಭಾಂಗಣದಲ್ಲಿ ಪ್ರತಿಜ್ಞಾನ ವಿಧಿಬೋಧನೆ ಮಾಡಲಾಯಿತು.
ನ್ಯಾಯಾಧೀಶರಾದ ಎಂ.ಆನಂದ್ ಮಾತನಾಡಿ, ಬಾಲ್ಯ ವಿವಾಹದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಜಾಥ ನಡೆಸಲಾಗುತ್ತಿದೆ. ಪಾಂಡವಪುರವನ್ನು ಬಾಲ್ಯ ವಿವಾಹ ಮುಕ್ತ ತಾಲೂಕನ್ನಾಗಿ ಮಾಡಬೇಕೆಂಬ ಸಂಕಲ್ಪವನ್ನು ತೆಗೆದುಕೊಳ್ಳಲಾಗಿದೆ ಎಂದರು.ಸಾರ್ವಜನಿಕರಿಗೆ ಬಾಲ್ಯ ವಿವಾಹ ಮಾಡುವುದು ತಪ್ಪು ಎನ್ನುವುದರ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಅದಾಗ್ಯು ಸಹ ಕೆಲವರು ಮೌಢ್ಯದಿಂದಲೂ, ಬಡತನದಿಂದಲೂ ಅಥವಾ ಆತುರದ ನಿರ್ಧಾರಗಳಿಂದಲೂ ಬಾಲ್ಯವಿವಾಹ ಮಾಡುತ್ತಿದ್ದಾರೆ. ಇದು ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುವುದಾಗಿದೆ. ಹೀಗಾಗಿ ಬಾಲ್ಯ ವಿವಾಹ ಮಾಡುವುದು, ತೊಡಗುವುದು ತಪ್ಪು. ಇದಕ್ಕಾಗಿ ಶಿಕ್ಷೆಗೂ ಗುರಿ ಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಿಡಿಪಿಓ ಪೂರ್ಣಿಮಾ ಮಾತನಾಡಿ, ಬಾಲ್ಯ ವಿವಾಹ ಮಾಡುವುದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಮುಂದೆ ಅವರ ಜೀವನ ಭದ್ರತೆ ಜತೆಗೆ ಸಾಕಷ್ಟು ಸಮಸ್ಯೆಗಳನ್ನು ಎದುರಬೇಕಾಗುತ್ತದೆ. ಹಾಗಾಗಿ ಬಾಲ್ಯ ವಿವಾಹದ ತಡೆಗೆ ಪೋಷಕರು ಸಹಕಾರ ನೀಡಬೇಕು ಎಂದರು.
ಈ ವೇಳೆ ಮಕ್ಕಳ ಆಯೋಗದ ಸದಸ್ಯ ವೆಂಕಟೇಶ್, ಜಿಲ್ಲಾ ಉಪ ನಿರ್ದೇಶಕಿ ಆಶಾ, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ರಶ್ಮಿ, ಉಪ ತಹಸೀಲ್ದಾರ್ ಸಂತೋಷ್, ತಾಪಂ ಇಒ ವೀಣಾ, ಸಿಪಿಡಿಒ ಪೂರ್ಣೀಮಾ, ಪುರಸಭೆ ಮುಖ್ಯಾಧಿಕಾರಿ ಸಂತೋಷ್, ಪಿಎಸ್‌ಐ ಉಮೇಶ್, ಹಿಂದುಳಿದ ವರ್ಗಗಳ ಸಹಾಯಕ ನಿರ್ದೇಶಕ ನಂದಕುಮಾರ್, ಮೇಲ್ವಿಚಾರಕಿ ಜಾಕಿಯ ಬಾನು ಸೇರಿದಂತೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.