ಯಾವುದೇ ಪತ್ರಕರ್ತನೊಳಗೆ ಮನುಷ್ಯತ್ವ ಇಲ್ಲದಿದ್ದರೆ ಆತ ನಿಜವಾದ ಪತ್ರಕರ್ತನಾಗಲಾರ. ಮನುಷ್ಯತ್ವ ಇಲ್ಲದಾಗ ಮಾತ್ರ ಪತ್ರಕರ್ತ ಯಾವುದೇ ಸಾವನ್ನು ಸಂಭ್ರಮಿಸಬಹುದು ಎಂದು ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಡಿ.ಎಸ್.ಪೂರ್ಣಾನಂದ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಯಾವುದೇ ಪತ್ರಕರ್ತನೊಳಗೆ ಮನುಷ್ಯತ್ವ ಇಲ್ಲದಿದ್ದರೆ ಆತ ನಿಜವಾದ ಪತ್ರಕರ್ತನಾಗಲಾರ. ಮನುಷ್ಯತ್ವ ಇಲ್ಲದಾಗ ಮಾತ್ರ ಪತ್ರಕರ್ತ ಯಾವುದೇ ಸಾವನ್ನು ಸಂಭ್ರಮಿಸಬಹುದು ಎಂದು ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಡಿ.ಎಸ್.ಪೂರ್ಣಾನಂದ ಅಭಿಪ್ರಾಯಪಟ್ಟರು.ಈ ಸಲದ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಹಿನ್ನೆಲೆಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ನಿವೃತ್ತ ಪ್ರಾಧ್ಯಾಪಕ ವಿಭಾಗದಿಂದ ಆಯೋಜಿಸಿದ್ದ ಸನ್ಮಾನ ಹಾಗೂ ''''''''ವಿಶ್ವದ ಓದು: ವಿಮರ್ಶಾತ್ಮಕ ಪತ್ರಿಕೋದ್ಯಮದ ದೃಷ್ಟಿಕೋನ'''''''' ಎಂಬ ವಿಷಯದ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಈ ಭೂಮಿ ಯಾರಿಗೂ ಸೇರಿಲ್ಲ. ಯಾವುದೇ ಸಮುದಾಯ ಒಂದು ಪ್ರದೇಶ ಅಥವಾ ದೇಶ ತಮಗೆ ಸೇರಿದ್ದು ಎಂದು ಪ್ರತಿಪಾದನೆ ಮಾಡುವುದು ತಪ್ಪು. ಅವರವರ ಅನುಕೂಲಕ್ಕಾಗಿ ಗಡಿಗಳನ್ನು ನಿರ್ಮಿಸಿದ್ದೇವೆಯೇ ಹೊರತು ಅವು ನ್ಯಾಯಯುತ ಗಡಿಗಳಲ್ಲ ಎಂದು ತಿಳಿಸಿದರು.
ಇರಾನ್ ಮತ್ತು ಇಸ್ರೇಲ್, ಅಮೆರಿಕ ನಡುವೆ ನಡೆಯುವುದು ಯದ್ಧವಲ್ಲ. ಅದು ಜನಾಂಗೀಯ ಹತ್ಯೆ. ಇದು ಇತಿಹಾಸದಿಂದಲೂ ನಡೆದು ಬಂದಿದೆ. ನಾಯಕರ ಪ್ರತಿಷ್ಠೆಗಾಗಿ ಸಾಮಾನ್ಯ ಜನರ ಹತ್ಯೆ ನಡೆಯುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.ಶಸ್ತ್ರಾಸ್ತ್ರ ತಯಾರಿಸುವ ಕಂಪನಿಗಳು ವಿಶ್ವದ ದೊಡ್ಡ ಉದ್ಯಮಿಗಳ ಒಡೆತನದಲ್ಲಿವೆ. ಅವರ ಒಡೆತನದಲ್ಲಿ ಬಹುಭಾಗ ಮಾಧ್ಯಮ ಸಂಸ್ಥೆಗಳಿವೆ. ಆದ್ದರಿಂದ ಮಾಧ್ಯಮಗಳು ಯುದ್ಧವನ್ನು ನಿಲ್ಲಿಸುವ ಬದಲು ಮುಂದುವರಿಸಲು ಪ್ರೋತ್ಸಾಹ ನೀಡುತ್ತಿವೆ ಎಂದು ಅಭಿಪ್ರಾಯ ತಿಳಿಸಿದರು.
ಹಿಂದೆ ಯುರೋಪ್ ದೇಶಗಳ ನಿಯಂತ್ರಣದಲ್ಲಿ ವಸಾಹತು ದೇಶಗಳಿದ್ದರೆ, ಇಂದು ಅಮೆರಿಕ ಇಡೀ ವಿಶ್ವವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ. ಅದಕ್ಕಾಗಿ ವಿಶ್ವದ ಹೆಚ್ಚಿನ ರಾಷ್ಟ್ರಗಳಲ್ಲಿ ಅಮೆರಿಕದ ಸೇನಾ ನೆಲೆಗಳಿವೆ ಎಂದರು.ಇಂದು ಮುಖ್ಯವಾಹಿನಿಯ ಮಾಧ್ಯಮಗಳು ವಾಸ್ತವಾಂಶ ವರದಿ ಮಾಡಲು ವಿಫಲರಾದರೂ ಕೆಲವು ಸ್ವತಂತ್ರ ಮಾಧ್ಯಮಗಳು ಆ ಕೆಲಸ ಮಾಡುತ್ತಿವೆ. ಸ್ವತಂತ್ರ ಧ್ವನಿ ದೊಡ್ಡ ಸಂಖ್ಯೆಯಲ್ಲಿ ಬಂದರೆ ಯಾವುದೇ ಬದಲಾವಣೆ ಸಾಧ್ಯ ಎಂದು ಹೇಳಿದರು.
ವಿಭಾಗದ ಅಧ್ಯಕ್ಷ ಪ್ರೊ. ಪಿ.ಎ.ವರ್ಗೀಸ್ , ಪ್ರಾಧ್ಯಾಪಕರಾದ ಪ್ರೊ. ಸತೀಶ್ ಕುಮಾರ್ ಅಂಡಿಂಜೆ, ಪ್ರೊ. ಎಂ.ಆರ್.ಸತ್ಯಪ್ರಕಾಶ್ ಅವರು ಈ ಸಂದರ್ಭದಲ್ಲಿ ಮಾತನಾಡಿದರು. ವಿದ್ಯಾರ್ಥಿನಿ ಪ್ರಗತಿ ವಂದಿಸಿದರು. ವಿಭಾಗದ ಉಪನ್ಯಾಸಕರು, ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.