ಸಾರಾಂಶ
ಮೂರನೇ ಅವಧಿಗೆ ಭಾರತದ ಪ್ರಧಾನಿಯಾಗಿ ಭಾನುವಾರ ಪ್ರಮಾಣವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ಗಡಿನಾಡು ಕಾಸರಗೋಡಿನ ಸೂಕ್ಷ್ಮ ಕುಸುರಿಯ ಕಲಾವಿದರೊಬ್ಬರು ಅಕ್ಕಿಕಾಳು ಗಾತ್ರದಲ್ಲಿ ಮೋದಿಯ ಕಲಾಕೃತಿ ರಚಿಸಿ ಗಮನ ಸೆಳೆದಿದ್ದಾರೆ. ಈ ಚಿತ್ರ ಪ್ರಧಾನಿ ಮೋದಿಗೆ ಅರ್ಪಿಸುತ್ತಿರುವುದಾಗಿ ಹೇಳಿದ್ದಾರೆ. ಕಾಸರಗೋಡಿನ ವೆಂಕಟೇಶ್ ಆಚಾರ್ಯ ಎಂಬವರೇ ಈ ಗಮನಾರ್ಹ ಸಾಧನೆ ಮಾಡಿದವರು.
ಕನ್ನಡಪ್ರಭ ವಾರ್ತೆ ಮಂಗಳೂರು
ಭಾರತದ ಪ್ರಧಾನಿಯಾಗಿ ಭಾನುವಾರ ನರೇಂದ್ರ ಮೋದಿ ಮೂರನೇ ಅವಧಿಗೆ ಪ್ರಮಾಣವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ಗಡಿನಾಡು ಕಾಸರಗೋಡಿನ ಸೂಕ್ಷ್ಮ ಕುಸುರಿಯ ಕಲಾವಿದರೊಬ್ಬರು ಅಕ್ಕಿಕಾಳು ಗಾತ್ರದಲ್ಲಿ ಮೋದಿಯ ಕಲಾಕೃತಿ ರಚಿಸಿ ಗಮನ ಸೆಳೆದಿದ್ದಾರೆ. ಈ ಚಿತ್ರ ಪ್ರಧಾನಿ ಮೋದಿಗೆ ಅರ್ಪಿಸುತ್ತಿರುವುದಾಗಿ ಹೇಳಿದ್ದಾರೆ.ಕಾಸರಗೋಡಿನ ವೆಂಕಟೇಶ್ ಆಚಾರ್ಯ ಎಂಬವರೇ ಈ ಗಮನಾರ್ಹ ಸಾಧನೆ ಮಾಡಿದ ಕಲಾವಿದ.
ಕಳೆದ ಎರಡು ದಿನಗಳ ಹಿಂದೆ ಗಮ್‌ನಿಂದ ಅಕ್ಕಿಕಾಳು ಗಾತ್ರದಲ್ಲಿ ನರೇಂದ್ರ ಮೋದಿ ಚಿತ್ರ ಮೂಡಿಸಿ ಸೈ ಎನಿಸಿದ್ದಾರೆ. ಗಮ್‌ನ್ನು ಸೂಜಿಯಿಂದ ತೆಗೆದು ಅತ್ಯಂತ ಸೂಕ್ಷ್ಮವಾಗಿ ಅಕ್ಕಿಕಾಳು ಗಾತ್ರದಲ್ಲಿ ವಾಟರ್ ಕಲರ್ ಬಳಸಿ ಬಿಳಿ ಧಿರಿಸಿನ ಮೇಲೆ ಕೋಟು ಹಾಕಿದ ಮೋದಿಯನ್ನು ಚಿತ್ರಿಸಿದ್ದಾರೆ. ಇದನ್ನು ಒಂದೇ ದಿನದಲ್ಲಿ ಮಾಡಿದ್ದಾರೆ.ಸಾಸಿವೆ ಕಾಳಿಗಿಂತ ಸಣ್ಣ ಭಾರತ ತಿವರ್ಣ ಧ್ವಜ ರಚನೆ, ಹತ್ತು ಮಿಲಿ ಚಿನ್ನದಲ್ಲಿ ಸ್ವಚ್ಛ ಭಾರತ್ ಲಾಂಛನ, ಒಂದು ಅಕ್ಕಿ ಕಾಳಿನಲ್ಲಿ 36 ಅಕ್ಷರ, ಒಂದು ಪೋಸ್ಟ್ ಕಾರ್ಡ್‌ನಲ್ಲಿ 6,524 ಬಾರಿ ಓಂ ನಮಃ ಶಿವಾಯ, ಬೆಂಕಿ ಕಡ್ಡಿ ತುದಿಯಲ್ಲಿ ಶಬರಿಮಲೆ ಸನ್ನಿಧಾನ, ಹೀಗೆ ಹಲವಾರು ಸಾಧನೆಯ ಸರದಾರ ವೆಂಕಟೇಶ್ ಆಚಾರ್ಯ.
ಸಮಾಜಮುಖಿ ಕಾರ್ಯ:2015 ರಲ್ಲಿ ಹಿಂದೂಸ್ತಾನ್ ವಾಟ್ಸಾಪ್ ಗ್ರೂಪ್‌ನ್ನು ಸ್ಥಾಪಿಸಿ, ಅದರ ಮೂಲಕ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಸಾಧನೆ ಕಂಡು ಕೇರಳ ವಿಧಾನಸಭೆಯಲ್ಲಿ ಮಂಜೇಶ್ವರ ಶಾಸಕರು ಉಲ್ಲೇಖ ಮಾಡಿರುವುದು ಇವರ ಹೆಗ್ಗಳಿಕೆ. ಹಲವಾರು ಸಂಘ ಸಂಸ್ಥೆ ಮಠ ಮಂದಿರ ಇವರನ್ನು ಗೌರವಿಸಿದೆ. ಇವರ ಸಾಧನೆಯನ್ನು ಗುರುತಿಸಿ ಕನ್ನಡ, ತುಳು, ಮಲೆಯಾಳ, ಇಂಗ್ಲಿಷ್, ಹಿಂದಿ ಪತ್ರಿಕಾ ಹಾಗೂ ದೃಶ್ಯ ಮಾಧ್ಯಮದ ಮೂಲಕ ಇವರ ಕಲಾ ವಿಸ್ಮಯತೆ ಬಗ್ಗೆ ವಿಶೇಷ ಸಂದರ್ಶನ ಮಾಡಿವೆ.
ಒಂದು ಅಕ್ಕಿಕಾಳಿನ ಗಾತ್ರದ ವಸ್ತುವಿನಿಂದ ಪ್ರಾರಂಭಗೊಂಡು ಬೇರೆ ಬೇರೆ ಪರಿಕರಗಳನ್ನು ಉಪಯೋಗಿಸಿ ಕಲೆಯಿಂದ ಏನಾದರೂ ಸಾಧಿಸಿ ಸಮಾಜಕ್ಕೆ ಅರ್ಪಿಸಬೇಕು ಎಂದು ಕನಸು ಹೊತ್ತು ಸಾಗುತ್ತಿರುವ ಸೂಕ್ಷ್ಮ ವಸ್ತುಗಳ ಮೈಕ್ರೋ ಆರ್ಟಿಸ್ಟ್ ಎಂದೇ ಚಿರಪರಚಿತ ವೆಂಕಟೇಶ್ ಆಚಾರ್ಯ.