ಗಣೇಶ್‌ ತಮ್ಮಡಿಹಳ್ಳಿ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕನ್ನಡ ವಿಭಾಗದಲ್ಲಿ ಅಭಿಷೇಕ್‌ 10 ಚಿನ್ನದ ಪದಕಗಳನ್ನು ಪಡೆದು ದಿನವಿಡೀ ಕೂಲಿ ಮಾಡಿ ಮಗನನ್ನು ಓದಿಸಿದ ತಂದೆಯ ಕನಸನ್ನು ಈ ‘ಬಂಗಾರದ ಮಗ’ ನನಸು ಮಾಡಿದ್ದಾರೆ. ಬಡತನ ಸಾಧನೆಗೆ ಅಡ್ಡಿಯಲ್ಲ ಎಂಬುದನ್ನು ಅಭಿಷೇಕ್‌ ಅವರ ಈ ಸಾಧನೆ ಸಾಬೀತುಪಡಿಸಿದೆ.

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕು ಹಿರೇಕಾನವಂಗಲ ಗ್ರಾಮ ಬಡ ಕೂಲಿಕಾರ್ಮಿಕ ಎಚ್‌.ಎಂ.ಮಂಜುನಾಥ ಅವರ ಪುತ್ರ ಎಚ್‌.ಎಂ.ಅಭಿಷೇಕ್‌ ತನ್ನ ಸಾಧನೆಯ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

ಕುವೆಂಪು ವಿವಿಯಲ್ಲಿ ಬುಧವಾರ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹ್ಲೋಟ್‌ ಬಂಗಾರದ ಪದಕ ನೀಡಿ ಪುರಸ್ಕರಿಸಿದರು. ಕೂಲಿಗಾರನ ಮಗ ಅಭಿಷೇಕ್‌ ಘಟಿಕೋತ್ಸವದ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು.


ಕನ್ನಡ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಬರೋಬ್ಬರಿ 10 ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಬೇರೆಯವರ ಹೊಲದಲ್ಲಿ ಬೆವರು ಸುರಿಸುವ ತಂದೆಯ ಶ್ರಮಕ್ಕೆ ಮಗ ಅಕ್ಷರಶಃ ಚಿನ್ನದ ಬೆಳೆ ತಂದುಕೊಟ್ಟಿದ್ದಾರೆ. ರಾಜ್ಯಪಾಲ ಥಾವರಚೆಂದ್ ಗೆಹ್ಲೋಟ್ ಅವರಿಂದ ಪದಕ ಸ್ವೀಕರಿಸುವಾಗ ಅಭಿಷೇಕ್‌ ಪೋಷಕರ ಕಣ್ಣಂಚಿನಲ್ಲಿ ನೀರು ತುಂಬಿತ್ತು.

ಅಪ್ಪನ ಕಷ್ಟವನ್ನು ಮರೆಸಿದ ಮಗನ ಸಾಧನೆ:

ನಾನಂತೂ ಹೆಚ್ಚು ಓದಲು ಸಾಧ್ಯವಾಗಲಿಲ್ಲ. ನನ್ನ ಮಕ್ಕಳಾದರೂ ಚೆನ್ನಾಗಿ ಓದಬೇಕು. ನಾನು ಪಟ್ಟ ಕಷ್ಟ ನನ್ನ ಮಕ್ಕಳು ಅನುಭವಿಸಬಾರದು ಎಂಬ ತಂದೆಯ ಕನಸನ್ನು ಮಗ ನನಸು ಮಾಡಿದ್ದಾನೆ. ಮಗನ ಕೈಯಲ್ಲಿ 10 ಚಿನ್ನದ ಕಂಡು ತಂದೆಯ ಹಮ್ಮೆಪಡುತ್ತಿದ್ದರು. ಘಟಿಕೋತ್ಸವ ಸಮಾರಂಭದಲ್ಲಿ ಎಚ್‌.ಎಂ.ಅಭಿಷೇಕ್‌ 10 ಚಿನ್ನದ ಪದಕ ಪಡೆದ ಬಳಿಕ ಎಲ್ಲರು ಅವನ ಬಗ್ಗೆ ವಿಚಾರಿಸುತ್ತಿದ್ದನ್ನು ಕಂಡ ತಂದೆ ಎಚ್‌.ಎಂ.ಮಂಜಪ್ಪ ಖುಷಿಗೆ ಪಾರವೇ ಇರಲಿಲ್ಲ.

‘ನನಗೆ ಯಾವುದೇ ಆಸ್ತಿ ಇಲ್ಲ ಸರ್‌. ನನ್ನ ಮಕ್ಕಳನ್ನೇ ಆಸ್ತಿ ಎಂದುಕೊಂಡು ಬೆಳೆಸಿದ್ದೇನೆ. ನಾನು ಬೇರೆಯವರ ಜಮೀನಿನಲ್ಲಿ ದುಡಿಯುವುದನ್ನು ಕಂಡು ನನ್ನ ಮಗ ಇಷ್ಟೆಲ್ಲ ಸಾಧನೆ ಮಾಡಿದ್ದಾನೆ. ನನಗೆ ಒಬ್ಬ ಮಗ, ಒಬ್ಬ ಮಗಳು. ಮಗಳು ನರ್ಸ್‌ ಕೆಲಸ ಮಾಡುತ್ತಿದ್ದಾಳೆ. ಈಗ ಮಗ ವಿಶ್ವವಿದ್ಯಾಲಯಕ್ಕೆ ಫಸ್ಟ್‌ ಬಂದಿದ್ದಾನೆ. 10 ಬಂಗಾರದ ಪದಕ ಪಡೆದಿದ್ದಾನೆ. ಇದಕ್ಕಿಂತ ಇನ್ನೇನು ಬೇಕು. ಮಗನ ಸಾಧನೆ ಮುಂದೆ ನನ್ನ ಕಷ್ಟ ಏನೂ ದೊಡ್ಡದಲ್ಲ’ ಎಂದು ಅಭಿಷೇಕ್‌ ತಂದೆ ಮಂಜಪ್ಪ ಮಗನ ಸಾಧನೆ ಕೊಂಡಾಡಿದರು.

ಅಭಿಷೇಕ್‌ ತಾಯಿ ಲಲಿತಮ್ಮ ಪದವಿ ಶಿಕ್ಷಣ ಪಡೆದಿದ್ದು, ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ.

ಸಾಧನೆಯ ಮೂಲಕ ಪೋಷಕರ ಋಣ ತೀರಿಸುತ್ತೇನೆ

ನನಗೆ ಎಸ್ಸೆಸ್ಸೆಯಲ್ಲಿಯೂ ಒಳ್ಳೆ ಅಂಕ ಬಂದಿತ್ತು. ಪಿಯುಸಿಯಲ್ಲಿ ಶೇ.89 ಅಂಕ ಬಂದಿತ್ತು. ಆಗ ಕೆಲವೇ ಅಂಕಗಳ ಕೊರತೆಯಿಂದ ನಾನು ರ್ಯಾಂಕ್‌ ತಪ್ಪಿಸಿಕೊಂಡಿದ್ದೆ. ಡಿಗ್ರಿಯಲ್ಲಿ ಶೇ.90ರಷ್ಟು ಅಂಕ ಪಡೆದಿದ್ದೆ. ನನಗೆ ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿ ಇದ್ದರಿಂದ ಸ್ನಾತಕೋತ್ತರ ಪದವಿಯಲ್ಲಿ ಕನ್ನಡ ವಿಭಾಗವನ್ನು ಆಯ್ಕೆ ಮಾಡಿದ್ದೆ. ನನಗೆ ಗೋಲ್ಡ್ ಮೆಡಲ್ ಬಂದಿರುವುದಕ್ಕೆ ಖುಷಿಯಾಗಿದೆ. ಈಗ ಬಿಇಡಿ ಮಾಡುತ್ತಿದ್ದು, ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯುತ್ತಿದ್ದೇನೆ. ನಾನು ಬಡ ಕುಟುಂಬದಿಂದ ಬೆಳೆದು ಬಂದವನಾಗಿದ್ದು, ಪೋಷಕರ ಕಷ್ಟವನ್ನು ಅರಿತ್ತಿದ್ದೇನೆ. ಅವರು ನನ್ನ ಓದಿಗೆ ಹೆಚ್ಚು ಶ್ರಮವಹಿಸಿದ್ದಾರೆ. ನನ್ನ ತಂದೆ-ತಾಯಿ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೆ, ಸಾಧನೆಯ ಮೂಲಕ ಅವರ ಋಣ ತೀರಿಸಬೇಕಾಗಿದೆ. ಹೀಗಾಗಿ ಯಾವುದಾದರೊಂದು ಸರ್ಕಾರಿ ಹುದ್ದೆ ಪಡೆದು ಕುಟುಂಬಕ್ಕೆ ನೆರವಾಗಬೇಕು ಎಂಬುದು ನನ್ನ ಬಯಕೆ ಎಂದು 10 ಚಿನ್ನದ ಪಡೆದ ಪಡೆದಿರುವ ಎಚ್‌.ಎಂ.ಅಭಿಷೇಕ್‌ ಅಭಿಪ್ರಾಯ ಹಂಚಿಕೊಂಡರು.

ಚಿನ್ನದ ಪದಕವನ್ನು ನಿರೀಕ್ಷೆ ಮಾಡಿರಲಿಲ್ಲ. ಚಿಕ್ಕಂದಿನಿಂದಲೂ ಪರಿಸರ ಬಗ್ಗೆ ಹೆಚ್ಚು ಆಸಕ್ತಿ ಇದ್ದುದ್ದರಿಂದ ಪರಿಸರ ವಿಜ್ಞಾನ ವಿಭಾಗಕ್ಕೆ ಸೇರಿಕೊಂಡೆ. ಕಷ್ಟಪಟ್ಟು ಓದುವ ಬದಲು ಇಷ್ಟ ಪಟ್ಟು ಓದಿದ್ದೇನೆ. ನನ್ನ ಈ ಸಾಧನೆ ಹಿಂದೆ ಪ್ರಾಧ್ಯಾಪಕರ ಸಹಕಾರ ಹೆಚ್ಚಿದೆ. ಏಳು ಚಿನ್ನದ ಪದಕ ಬಂದಿರೋದು ಖುಷಿ ಹೆಚ್ಚಿಸಿದೆ.

ರಕ್ಷಾ 7 ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ.

ನನ್ನ ತಂದೆ ಆಸ್ಪತ್ರೆಯೊಂದರಲ್ಲಿ ಲ್ಯಾಬ್‌ ಟೆಕ್ನಿಷಿಯನ್‌, ತಾಯಿ ಶಿಕ್ಷಕಿ. ಬಾಲ್ಯದಿಂದಲೇ ನನಗೆ ಉತ್ತಮ ಶಿಕ್ಷಣವನ್ನು ಕೊಡಿಸಿದ್ದಾರೆ. ಪಿಜಿಯಲ್ಲಿ ಜೈವಿಕ ತಂತ್ರಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡಿದ್ದೆ. ನಾನೆಂದು ಚಿನ್ನದ ಪದಕವನ್ನು ಗುರಿಯಾಗಿಟ್ಟುಕೊಂಡು ಓದಿದವಳಲ್ಲ. ಓದುವುದನ್ನೇ ಶ್ರದ್ದೆಯಿಂದ ಓದಿದೆ. ನನಗೆ 6 ಚಿನ್ನದ ಪದಕ ಲಭಿಸಿರುವುದು ಖುಷಿ ಹೆಚ್ಚಿಸಿದೆ. ಸದ್ಯ ನಾನು ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಇದರಲ್ಲೇ ಮುಂದುವರಿಯುವ ಇಚ್ಛೆ ಇದೆ.

ಆರ್‌.ಸೃಷ್ಟಿ 6 ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ.

ಉತ್ತಮ ಅಂಕ ಪಡೆದು ಒಳ್ಳೆಯ ಹುದ್ದೆ ಗಿಟ್ಟಿಕೊಳ್ಳಬೇಕು ಎಂಬ ಆಸೆ ಇತ್ತು. ಆರಂಭದಿಂದಲೇ ನಿರಂತರವಾಗಿ ಓದಿಕೊಳ್ಳುತ್ತಿದ್ದೆ. 5 ಚಿನ್ನದ ಪದಕ ಬಂದಿರುವುದು ಖುಷಿ ತಂದಿದೆ. ನನ್ನ ಈ ಸಾಧನೆಗೆ ಉಪನ್ಯಾಸಕರ ಕೊಡುಗೆಯು ತುಂಬಾ ಇದೆ. ತಂದೆ ಸ್ಟೀಲ್‌ ಅಂಗಡಿ ಇಟ್ಟುಕೊಂಡಿದ್ದಾರೆ. ತಾಯಿ ಗೃಹಿಣಿ. ಸದ್ಯ ಖಾಸಗಿ ಕಂಪನಿಯಲ್ಲಿ ಎಚ್‌ಆರ್‌ ಆಗಿ ಕೆಲಸ ಮಾಡುತ್ತಿದ್ದೇನೆ.

ಸಹನಾ ಗಣೇಶ್‌ ಶೇಟ್‌ 5 ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ.