ಸಾರಾಂಶ
ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಕನ್ನಡಪರ ಹೋರಾಟಗಾರರು ರಸ್ತೆತಡೆದು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಚಾಮರಾಜನಗರ ಜಿಲ್ಲಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಗ್ಗೆಯಿಂದಲೇ ಚಾಮರಾಜನಗರ ಸೇರಿದಂತೆ ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಹನೂರು ಭಾಗದಲ್ಲಿ ಬಸ್ ಸಂಚಾರ, ಆಟೋ ಓಡಾಟ, ಹೋಟೆಲ್ ಸೇವೆ ಸೇರಿದಂತೆ ಅಂಗಡಿಗಳು ತೆರೆದಿದ್ದು ಎಂದಿನಂತೆ ಜನ ಜೀವನ ಇರುವುದು ಕಂಡುಬಂದಿತು. ಕಚೇರಿಗೆ ತೆರಳುವವರು, ಕಾಲೇಜು ವಿದ್ಯಾರ್ಥಿಗಳು, ಕಾರ್ಮಿಕರು ಯಾವುದೇ ಬಂದ್ ಬಿಸಿಯಿಲ್ಲದೇ ಸಂಚಾರ ಮಾಡಿದರು.ಕನ್ನಡಪರ ಹೋರಾಟಗಾರರ ಪ್ರತಿಭಟನೆ:
ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಕನ್ನಡಪರ ಹೋರಾಟಗಾರರು ರಸ್ತೆತಡೆದು ಪ್ರತಿಭಟನೆ ನಡೆಸಿದರು. ಎಂಇಎಸ್ ಭಿತ್ತಿಪತ್ರಗಳಿಗೆ ಟೊಮೆಟೊ ಒಡೆದು ಎಂಇಎಸ್ ಸಂಘಟನೆಯನ್ನು ಕೂಡಲೇ ನಿಷೇಧಿಸಬೇಕು, ರಾಜ್ಯದಹಿತ ಕಾಪಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಈ ವೇಳೆ, ಹೋರಾಟಗಾರ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ರಾಜ್ಯ ಸರ್ಕಾರ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಕಿಡಿಕಾರಿದರು.ಮೇಕೆದಾಟು ಪಾದಯಾತ್ರೆಗೆ ಕನ್ನಡಪರ ಹೋರಾಟಗಾರರ ಬೆಂಬಲ ಬೇಕಿತ್ತು, ಈಗ ರಾಜ್ಯ ಬಂದ್ ಗೆ ನಿಮ್ಮ ಬೆಂಬಲವಿಲ್ಲ, ನೀವು ಮಾಡಿದರೇ ಮಾತ್ರ ಹೋರಾಟವಾ, ಅಧಿಕಾರಕ್ಕಾಗಿ ಮಾತ್ರ ಹೋರಾಟ ಮಾಡಿ ಬಳಿಕ ಕಣ್ಣೊರೆಸುವ ತಂತ್ರ ಅನುಸರಿಸಿ ದ್ವಂದ್ವ ನಿಲುವು ತಳೆದಿದ್ದೀರಿ ಎಂದು ಕಿಡಿಕಾರಿದರು.ರಾಜ್ಯದ ಹಿತದ ಬಗ್ಗೆ ಉದಾಸೀನ ಬೇಡ, ರಾಜ್ಯದ ಅಸ್ತಿತ್ವ ಇದ್ದರಷ್ಟೇ ನೀವು ಮುಖ್ಯಮಂತ್ರಿ, ಸಚಿವರು. ರಾಜ್ಯ ಕಳೆದುಕೊಂಡರೇ ನೀವು ಎಲ್ಲಿಗೆ ಸಿಎಂ, ಉಪ ಮುಖ್ಯಮಂತ್ರಿ ಆಗುತ್ತೀರಿ, ಕೂಡಲೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಎಂಇಎಸ್ ನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ನಿಜದ್ಧನಿಗೋವಿಂದರಾಜು, ಆಟೋ ಲಿಂಗರಾಜು, ತಾಂಡವಮೂರ್ತಿ, ರಾಚಪ್ಪ ವೀರಭದ್ರ, ಮುತ್ತಿಗೆಗೋವಿಂದರಾಜು, ನಂಜುಂಡಶೆಟ್ಟಿ ಇತರರು ಭಾಗವಹಿಸಿದ್ದರು.