ಶಿವಕುಮಾರ ಕುಷ್ಟಗಿ

ಗದಗ: ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಜಿಲ್ಲೆಯಲ್ಲಿ ವಿನೂತನ ಪ್ರಯತ್ನವೆಂದೇ ಕರೆಯಲ್ಪಟ್ಟಿದ್ದ ಪ್ರಭುವಿನೆಡೆಗೆ ಪ್ರಭುತ್ವ ಕಾರ್ಯಕ್ರಮದಡಿ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲಾಗಿರುವ ಎಸ್ಒಎಸ್ (Save Our Souls) ಸಾಧನಗಳ ಮೂಲಕ ಜನರು ತಮ್ಮ ಸಮಸ್ಯೆಗಳನ್ನು ನೇರವಾಗಿ ಆಡಳಿತದ ಗಮನಕ್ಕೆ ತರುವ ಉತ್ತಮ ಮತ್ತು ಸರಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ವರ್ಷ ಕಳೆಯುತ್ತಾ ಬಂದರೂ ಈ ಯೋಜನೆಗೆ ಅವಳಿ ನಗರದ ಜನರಿಂದ ಅತ್ಯಂತ ನೀರಸ ಪ್ರತಿಕ್ರಿಯೆ ದೊರೆತಿದೆ.

2025ರ ಆಗಸ್ಟನಲ್ಲಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಜಿಲ್ಲಾ ಕ್ರೀಡಾಂಗಣ, ಜವಳಗಲ್ಲಿ, ಟಿ- ಬಜಾರ್, ಹೊಸ ಬಸ್ ನಿಲ್ದಾಣ, ಮುಳಗುಂದ ನಾಕಾ ಹಾಗೂ ಕಿಮ್ಸ್ ಆಸ್ಪತ್ರೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಅಳವಡಿಸಿರುವ ಎಸ್ಒಎಸ್ ಸಾಧನಗಳ ಮೂಲಕ ನಾಗರಿಕರು ರಸ್ತೆ, ಕುಡಿಯುವ ನೀರು, ಬೀದಿದೀಪ, ಚರಂಡಿ, ಮನೆ ಮಂಜೂರು, ಆರೋಗ್ಯ, ಶಿಕ್ಷಣ ಹಾಗೂ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳನ್ನು ದಾಖಲಿಸಲು ಈ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಇಲ್ಲಿ ದಾಖಲಾಗುವ ದೂರು, ದೂರುದಾರ ಫೋಟೋ, ಮೊಬೈಲ್ ನಂಬರ್ ಸಮೇತ ಸಂಬಂಧಿಸಿದ ಇಲಾಖೆಗೆ ವರ್ಗಾವಣೆಯಾಗಿ ಸಾರ್ವಜನಿಕರಿಗೆ ಅಲೆದಾಟ ತಪ್ಪಿಸಲು ಇದನ್ನು ರೂಪಿಸಲಾಗಿತ್ತು.

ಕೇವಲ 66 ದೂರು ದಾಖಲು: 2025ರ ಆಗಸ್ಟನಲ್ಲಿ ಪ್ರಾರಂಭಿಸಲಾಗಿರುವ ಈ ಯೋಜನೆಯಡಿ 2026ರ ಮೇ ತಿಂಗಳಾಂತ್ಯದವರೆಗೆ ಕೇವಲ 66 ದೂರುಗಳು ದಾಖಲಾಗಿದ್ದು, ಅವುಗಳಲ್ಲಿ 55 ಪ್ರಕರಣಗಳಿಗೆ ಪರಿಹಾರ ಕಲ್ಪಿಸಲಾಗಿದ್ದು, 11 ದೂರುಗಳು ಇನ್ನೂ ಬಾಕಿ ಉಳಿದಿವೆ ಎಂದು ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ದಾಖಲಾದ ಬಹುತೇಕ ದೂರುಗಳಲ್ಲಿ ರಸ್ತೆ ದುರಸ್ತಿ, ಚರಂಡಿ ಕಾಮಗಾರಿ, ಕುಡಿಯುವ ನೀರಿನ ವ್ಯವಸ್ಥೆ, ಬೀದಿದೀಪಗಳ ದುರಸ್ತಿ, ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ, ಬಸ್ ನಿಲ್ದಾಣ ನಿರ್ಮಾಣ, ಪಿಂಚಣಿ ಹಾಗೂ ವಿವಿಧ ಸರ್ಕಾರಿ ಯೋಜನೆಗಳ ಸೌಲಭ್ಯ ಕಲ್ಪಿಸುವ ಬೇಡಿಕೆಗಳು ಪ್ರಮುಖವಾಗಿವೆ.

ತೀವ್ರ ನಿರಾಸಕ್ತಿ: ಈ ಹಿಂದೆ ರಾಜರ ಕಾಲದಲ್ಲಿ ನ್ಯಾಯದ ಗಂಟೆ ಇರುತ್ತಿತ್ತು. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಯಾವಾಗಬೇಕಾದರೂ ಆ ಗಂಟೆ ಬಡಿಯುವ ಮೂಲಕ ಹೇಳಿಕೊಳ್ಳಬಹುದಾಗಿತ್ತು. ಅದೇ ಮಾದರಿಯಲ್ಲಿ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಅವಳಿ ನಗರದ ಪ್ರಮುಖ ಸ್ಥಳಗಳಲ್ಲಿ ಕ್ಯಾಮೆರಾ ಸಮೇತ ಇರುವ ಕಂಬದ ಆಕಾರ ಯಂತ್ರವನ್ನು ನಿರ್ಮಾಣ ಮಾಡಿದ್ದು, ಅದರ ಮುಂದೆ ನಿಂತು ಸಮಸ್ಯೆಗಳನ್ನು ಹೇಳಿಕೊಂಡರೆ ಅದು ಸಂಬಂಧಿಸಿದ ಇಲಾಖೆ ಹೋಗಿ ತಕ್ಷಣವೇ ಸಮಸ್ಯೆ ಸರಿಯಾಗುತ್ತದೆ ಎನ್ನುವುದು ಈ ಯೋಜನೆಯ ಉದ್ದೇಶವಾಗಿದೆ. ಆದರೆ ಗದಗ- ಬೆಟಗೇರಿ ಅವಳಿ ನಗರದಲ್ಲಿನ ಜನತೆ ಮಾತ್ರ ಅದೇಕೋ ಈ ಯೋಜನೆಯ ಬಗ್ಗೆ ಆಸಕ್ತಿಯನ್ನೇ ತೋರುತ್ತಿಲ್ಲ. ಇದರ ಸದ್ಬಳಕೆಗೆ ಗಮನವನ್ನೇ ಹರಿಸುತ್ತಿಲ್ಲ. ಅವಳಿ ನಗರದಲ್ಲಿ ಸ್ಥಾಪಿಸಲಾಗಿರುವ ಎಸ್ಒಎಸ್ ಯಂತ್ರಗಳಲ್ಲಿ ಅತಿ ಹೆಚ್ಚು 35 ದೂರುಗಳು ಜಿಲ್ಲಾ ಕ್ರೀಡಾಂಗಣದಲ್ಲೇ ದಾಖಲಾಗಿದ್ದು, 31 ಪರಿಹಾರಗೊಂಡಿವೆ. ಜವಳಗಲ್ಲಿಯ 14 ದೂರುಗಳಲ್ಲಿ 13 ಪರಿಹಾರವಾಗಿವೆ. ಟಿ- ಬಜಾರ್‌ನಲ್ಲಿನ 3 ದೂರುಗಳಲ್ಲಿ ಒಂದು ಮಾತ್ರ ಪರಿಹಾರಗೊಂಡಿದೆ. ಮುಳಗುಂದ ನಾಕಾದಲ್ಲಿ ದಾಖಲಾದ 8 ದೂರುಗಳಲ್ಲಿ 4 ಪ್ರಕರಣಗಳು ಇನ್ನೂ ಬಾಕಿ ಉಳಿದಿವೆ.


ತಾಲೂಕಿಗೂ ವಿಸ್ತರಣೆ ಚಿಂತನೆ: ಈ ಯೋಜನೆ ಜನರ ಹಿತಕ್ಕಾಗಿ ಮತ್ತು ಅವರಿಗೆ ತ್ವರಿತ ಸೇವೆ ನೀಡುವುದಕ್ಕಾಗಿಯೇ ರೂಪಿಸಲಾಗಿದೆ. ಕಳೆದು ಹೋಗಿರುವ ಮಗು ತಕ್ಷಣವೇ ಸಿಕ್ಕಿರುವುದು, ವಾಹನಗಳು ಮರಳಿ ದೊರೆತಿವೆ. ದೂರುಗಳು ಕಡಿಮೆ ಬಂದಿರಬಹುದು. ಆದರೆ ಫಲಿತಾಂಶ ಮಾತ್ರ ಉತ್ತಮವಾಗಿದೆ. ಇದನ್ನು ತಾಲೂಕು ಕೇಂದ್ರಗಳಿಗೂ ವಿಸ್ತರಿಸುವ ಚಿಂತನೆ ಇದೆ ಎಂದು ಎಸ್ಪಿ ರೋಹನ್ ಜಗದೀಶ ತಿಳಿಸಿದರು.