ಸಾರಾಂಶ
- ಸರ್ಕಾರ ವಾರದೊಳಗೆ ಸ್ಪಂದಿಸದಿದ್ದರೆ ಮತ್ತೆ ಹೋರಾಟ
- - -ದಾವಣಗೆರೆ: ಮೆಕ್ಕೆಜೋಳ ಬೆಲೆ ನಿಗದಿ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ನಡೆಸಿದ ಸಭೆಯಲ್ಲಿ ರಾಜ್ಯ ಸರ್ಕಾರ ಅಡ್ಡಗೋಲೆ ದೀಪ ಇಟ್ಟಂತೆ ನಿರ್ಣಯಗಳನ್ನು ಕೈ ಗೊಂಡಿದೆ ಎಂದು ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಆರೋಪಿಸಿದ್ದಾರೆ.
ಖರೀದಿ ಕೇಂದ್ರ ಸ್ಥಾಪಿಸಿ, ರಾಜ್ಯ ಸರ್ಕಾರ ಬೋನಸ್ ರೂಪದಲ್ಲಿ ₹1 ಸಾವಿರ ನೀಡಬೇಕು. ಅಲ್ಲಿಗೆ ಕೇಂದ್ರ ಸರ್ಕಾರದ ₹2400 ಸೇರಿಸಿ, ₹3400 ನೀಡಬೇಕು ಎನ್ನುವುದು ನಮ್ಮ ಹೋರಾಟದ ಪ್ರಮುಖ ಉದ್ದೇಶವಾಗಿದೆ. ಆದರೆ ಇಂದಿನ ಸಭೆಯಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾಪ ನಡೆಸಿಲ್ಲ ಎಂದಿದ್ದಾರೆ.ಖರೀದಿ ಕೇಂದ್ರ ಸ್ಥಾಪಿಸಲು ನೆಫೆಡ್ ಸೇರಿದಂತೆ 2 ಸಂಸ್ಥೆಗಳು ಕೇಂದ್ರ ಸರ್ಕಾರದ ಅಧೀನದಲ್ಲಿದ್ದು, ಅವು ಸಂಪೂರ್ಣ ನಿಷ್ಕ್ರಿಯವಾಗಿವೆ. ಹಾಗಾಗಿ, ಖರೀದಿ ಕೇಂದ್ರ ಆರಂಭವಾಗಿಲ್ಲ. ಅವುಗಳು ಕೂಡಲೇ ಖರೀದಿ ಕೇಂದ್ರ ಆರಂಭಿಸಲು ಸೂಚಿಸಿದ್ದಾರೆ. ಇದರ ಜವಾಬ್ದಾರಿ ಮಾರಾಟ ಮಹಾಮಂಡಳ ನೋಡಿಕೊಳ್ಳಬೇಕೆಂದು ಸಿಎಂ ಹೇಳಿದ್ದಾರೆ. 8.5 ಲಕ್ಷ ಮೆಟ್ರಿಕ್ ಟನ್ ಗುರಿ ನಿಗದಿಪಡಿಸಿದ್ದಾರೆ. ಅಷ್ಟು ಖರೀದಿಸಿ, ಸಂಗ್ರಹಿಸಿದರೆ ₹2400 ಕೇಂದ್ರ ಸರ್ಕಾರ, ₹1 ಸಾವಿರ ರಾಜ್ಯ ಸರ್ಕಾರದ ಬೋನಸ್ ಸೇರಿ ಎರಡೂ ಕಡೆಯಿಂದ ಒಟ್ಟು ₹3400 ಬರಬೇಕು. ಕೆಎಂಎಫ್‌ನಿಂದ ಖರೀದಿಸುವಾಗ ₹2400 ಗಿಂತ ಕಡಿಮೆಗೆ ಖರೀದಿಸುವಂತಿಲ್ಲ ಎಂಬ ಬೇಡಿಕೆಯೊಂದಿಗೆ 1 ವಾರ ಕಾಲಾವಕಾಶ ನೀಡಿದ್ದೇವೆ. ಆದರೆ, ರಾಜ್ಯ ಸರ್ಕಾರ ಸಭೆಯಲ್ಲಿ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ವರ್ತಿಸಿದೆ. ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಮತ್ತೆ ಹೋರಾಟ ಮುಂದುವರಿಸಲಾಗುವುದು ಎಂದು ಹುಚ್ಚವ್ವನಹಳ್ಳಿ ಮಂಜುನಾಥ ಹೇಳಿದ್ದಾರೆ.
ಮೂರನೇ ದಿನದ ಧರಣಿ ವೇಳೇ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಾ.ಗಂಗಾಧರ ಸ್ವಾಮಿ, ಇನ್ನು ಒಂದು ವಾರದೊಳಗೆ ನಫೆಡ್‌ನಿಂದ ಮೆಕ್ಕೆಜೋಳ ಖರೀದಿಗೆ ಕ್ರಮ ಕೈಗೊಳ್ಳುವುದಾಗಿ ಹೇಳಿ ನಮ್ಮ ಮೇಲೆ ಭರವಸೆ ಇಟ್ಟು ಧರಣಿ ವಾಪಾಸು ಪಡೆಯುವಂತೆ ಮಾಡಿದ್ದಾರೆ. ಅವರ ಮನವಿ ಹಿನ್ನೆಲೆ ಒಂದು ವಾರ ಮಾತ್ರ ಧರಣಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಹುಚ್ಚವ್ವನಹಳ್ಳಿ ಮಂಜುನಾಥ ಹೇಳಿದರು.ಧರಣಿಯಲ್ಲಿ ರೈತ ಮುಖಂಡ ತೇಜಸ್ವಿ ಪಟೇಲ್, ಮರಿಯಮ್ಮನಹಳ್ಳಿ ಪರಶುರಾಂ, ಬೊಮ್ಮಘಟ್ಟ ರಮೇಶ್, ದೇವೇಂದ್ರ, ಹೂವಿನ ಮಡು ನಾಗರಾಜ್, ಹುಚ್ಚವ್ವನಹಳ್ಳಿ ಪ್ರಕಾಶ್, ಎಲೋದಹಳ್ಳಿ ರವಿಕುಮಾರ, ಗಂಡುಗಲಿ, ಗಾಣಾಪುರ ಮಂಜುನಾಥ್ ಇತರರು ಉಪಸ್ಥಿತರಿದ್ದರು.
- - --21ಕೆಡಿವಿಜಿ41:
ದಾವಣಗೆರೆಯಲ್ಲಿ ನಡೆದ ರೈತ ಸಂಘದ ಮೂರನೇ ದಿನದ ಧರಣಿ ಸ್ಥಳಕ್ಕೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಭೇಟಿ ನೀಡಿ, ರೈತರ ಮನವಿ ಸ್ವೀಕರಿಸಿದರು.