ಸಾರಾಂಶ
ಕನ್ನಡಪ್ರಭ ವಾರ್ತೆ ಆಲಮಟ್ಟಿ: ಆಲಮಟ್ಟಿ ಅಣೆಕಟ್ಟು ಕೆಳಭಾಗದ ಮೊಘಲ್ ಉದ್ಯಾನದ ಬಳಿ ತಡರಾತ್ರಿ ಕಾಣಿಸಿದ ಮೊಸಳೆಯನ್ನು ನಾಲ್ಕು ಗಂಟೆ ಕಾರ್ಯಾಚರಣೆ ನಡೆಸಿ ಅರಣ್ಯ ಇಲಾಖೆಯ ಸಿಬ್ಬಂದಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸೋಮವಾರ ತಡರಾತ್ರಿ 12.30ರ ಸುಮಾರಿನಲ್ಲಿ ಮೊಘಲ್ ಉದ್ಯಾನದಲ್ಲಿ ಮೊಸಳೆ ಇರುವುದನ್ನು ರಾತ್ರಿ ಕಾವಲು ಕಾಯುತ್ತಿದ್ದ ಕೆಎಸ್‌ಐಸ್‌ಎಫ್ ಪೊಲೀಸರ ಗಮನಕ್ಕೆ ಬಂದಿದೆ.
ಕನ್ನಡಪ್ರಭ ವಾರ್ತೆ ಆಲಮಟ್ಟಿ:
ಆಲಮಟ್ಟಿ ಅಣೆಕಟ್ಟು ಕೆಳಭಾಗದ ಮೊಘಲ್ ಉದ್ಯಾನದ ಬಳಿ ತಡರಾತ್ರಿ ಕಾಣಿಸಿದ ಮೊಸಳೆಯನ್ನು ನಾಲ್ಕು ಗಂಟೆ ಕಾರ್ಯಾಚರಣೆ ನಡೆಸಿ ಅರಣ್ಯ ಇಲಾಖೆಯ ಸಿಬ್ಬಂದಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸೋಮವಾರ ತಡರಾತ್ರಿ 12.30ರ ಸುಮಾರಿನಲ್ಲಿ ಮೊಘಲ್ ಉದ್ಯಾನದಲ್ಲಿ ಮೊಸಳೆ ಇರುವುದನ್ನು ರಾತ್ರಿ ಕಾವಲು ಕಾಯುತ್ತಿದ್ದ ಕೆಎಸ್‌ಐಸ್‌ಎಫ್ ಪೊಲೀಸರ ಗಮನಕ್ಕೆ ಬಂದಿದೆ. ರಾತ್ರಿಯೇ ಆಲಮಟ್ಟಿಯ ಕೆಬಿಜೆಎನ್‌ಎಲ್ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಮಂಗಳವಾರ ನಸುಕಿನ ಜಾವ 5.30 ಕ್ಕೆ ಮುದ್ದೇಬಿಹಾಳದ ಅರಣ್ಯ ಇಲಾಖೆಯ ಸಿಬ್ಬಂದಿ ಆಲಮಟ್ಟಿಗೆ ಆಗಮಿಸಿ, ಕೆಬಿಜೆಎನ್ ಎಲ್ ಅರಣ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ.10 ಅಡಿ ಉದ್ದದ ಸುಮಾರು 2.5 ಕ್ವಿಂಟಲ್ ಹೆಚ್ಚು ತೂಕ ಹೊಂದಿರುವ ಬೃಹತ್ ಮೊಸಳೆಯನ್ನು ಹಿಡಿಯಲು ಸುಮಾರು ನಾಲ್ಕು ಗಂಟೆ ಕಾರ್ಯಚರಣೆ ನಡೆಲಾಗಿದೆ. ಮೊಸಳೆ ಭಾರಿ ಪ್ರತಿರೋಧ ತೋರಿತು. ಸುಮಾರು ಒಂದೂವರೆ ಗಂಟೆಗಳ ಕಾಲ ಪ್ರತಿರೋಧ ತೋರಿದ ನಂತರ ಸ್ವಲ್ಪ ಕಡಿಮೆಯಾದ ಬಳಿಕ, ಅದಕ್ಕೆ ಉರುಲು ಹಗ್ಗ ಹಾಕಿ ಸೆರೆಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟರು.ನಂತರ, ಮೊಸಳೆಯನ್ನು ಟ್ರ್ಯಾಕ್ಟರ್‌ನಲ್ಲಿ ತೆಗೆದುಕೊಂಡು ಹೋಗಿ ಆಲಮಟ್ಟಿ ಜಲಾಶಯದ ಬಾಗಿನ ಬಿಡುವ ಸ್ಥಳದ ಹತ್ತಿರ ಮೊಸಳೆಯನ್ನು ಸುರಕ್ಷಿತವಾಗಿ ಕೃಷ್ಣಾ ನದಿಯಲ್ಲಿ ಬಿಡಲಾಗಿದೆ. ಕಾರ್ಯಾಚರಣೆಯಲ್ಲಿ ಮೊಸಳೆ ಹಿಡಿಯುವುದರಲ್ಲಿ ನಿಪುಣರಾಗಿರುವ ನಾಗೇಶ ವಡ್ಡರ, ಎಆರ್‌ಎಫ್‌ಒಗಳಾದ ಸತೀಶ ಗಲಗಲಿ, ಬಸವರಾಜ ಕೊಣ್ಣೂರ, ಈಶ್ವರ, ಪ್ರವೀಣ ಹಚ್ಯಾಳಕರ, ವಿಜಲಯಲಕ್ಷ್ಮೀ ರೆಡ್ಡಿ, ವಿರೂಪಾಕ್ಷಿ ಮಾದರ, ಕೆಎಸ್ ಐಎಸ್ ಎಫ್ ಪೊಲೀಸ್ ಸಿಬ್ಬಂದಿ ಸೇರಿದಂತೆ ಹಲವರು ಇದ್ದರು.