ಸಾರಾಂಶ
ಕನ್ನಡಪ್ರಭ ವಾರ್ತೆ ತುರುವೇಕೆರೆ
ರೈತರ ಸಮಸ್ಯೆಗಳನ್ನು ರಾಜ್ಯ ಸರ್ಕಾರ ಕೂಡಲೇ ಈಡೇರಿಸುವಂತೆ ಒತ್ತಾಯಿಸಿ ಫೆ.೧೦ ರಂದು ಬೆಂಗಳೂರಿನಲ್ಲಿ ಬೃಹತ್ ರೈತ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಗೋವಿಂದರಾಜು ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಫೆ.೧೦ ರಂದು ಪ್ರೊ. ನಂಜುಂಡಸ್ವಾಮಿಯರ ಜನ್ಮ ದಿನಾಚರಣೆಯಾಗಿದೆ. ಅಂದು ನಂಜುಂಡಸ್ವಾಮಿ ಅವರ ಶಿಷ್ಯರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಸಹ ಆಹ್ವಾನಿಸಲಾಗಿದೆ. ರಾಜ್ಯದ ರೈತರ ಎಲ್ಲ ಸಮಸ್ಯೆಗಳನ್ನು ಬಗ್ಗೆ ಹರಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ರಾಜ್ಯದಲ್ಲಿ ಬರಗಾಲ ಆವರಿಸಿದೆ. ಈಗಾಗಲೇ ಜಿಲ್ಲೆಯ ಎಲ್ಲ ೧೦ ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ. ಆದರೂ ಇದುವರೆವಿಗೂ ಸರ್ಕಾರ ರೈತರಿಗೆ ಯಾವುದೇ ಪರಿಹಾರವನ್ನು ನೀಡಿಲ್ಲ. ಒಂದು ಕುಟುಂಬಕ್ಕೆ ೨ ಸಾವಿರ ರು. ಬರ ಪರಿಹಾರ ಹಣ ನೀಡುವ ಭರವಸೆ ನೀಡಿದೆ. ರೈತ ಬೇಸಾಯಕ್ಕಾಗಿ ಹತ್ತಾರು ಸಾವಿರ ರು. ಗಳನ್ನು ಖರ್ಚು ಮಾಡಿದ್ದಾನೆ. ಆದರೆ ರೈತರಿಗೆ ಕೇವಲ ೨ ಸಾವಿರ ಹಣ ನೀಡಿದರೆ ಯಾವುದಕ್ಕೂ ಸಾಲುವುದಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಒಂದು ಕುಟುಂಬಕ್ಕೆ ೧೦ ಸಾವಿರ ಬೆಳೆ ಪರಿಹಾರ ಹಣ ನೀಡಬೇಕು ಎಂದು ಗೋವಿಂದರಾಜು ಒತ್ತಾಯ ಮಾಡಿದರು.ಜಿಲ್ಲೆಯ ರೈತರ ಜೀವನಾಡಿ ಕೊಬ್ಬರಿ ಬೆಲೆ ೨೦ ಸಾವಿರಕ್ಕೆ ಹೆಚ್ಚಿಸುವಂತೆ ಈಗಾಗಲೇ ಹಲವು ಹೋರಾಟ ಮಾಡಲಾಗಿದೆ. ಆದರೆ ಕೇಂದ್ರ ಸರ್ಕಾರ ಕ್ವಿಂಟಲ್‌ಗೆ ಹೆಚ್ಚುವರಿಯಾಗಿ ಕೇವಲ ೨೫೦ ರು. ಗಳನ್ನು ಮತ್ತು ರಾಜ್ಯ ಸರ್ಕಾರ ೧೫೦೦ ಬೆಂಬಲ ಬೆಲೆ ಘೋಷಿಸಿದೆ. ಕೊಬ್ಬರಿ ಉತ್ಪಾದನೆ ಮಾಡಲು ವೈಜ್ಞಾನಿಕವಾಗೇ ೧೬ ಸಾವಿರ ರು. ವೆಚ್ಚವಾಗಲಿದೆ ಎಂಬ ವರದಿಯನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ನೀಡಲಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ೧೫ ಸಾವಿರ ರು. ರಾಜ್ಯ ಸರ್ಕಾರ ೫ ಸಾವಿರ ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ವಿದ್ಯುತ್ ಕಣ್ಣಾ ಮುಚ್ಚಾಲೆಯಾಗುತ್ತಿದೆ. ಪ್ರತಿದಿನ ರೈತರಿಗೆ ೭ ಗಂಟೆಗಳ ಕಾಲ ನಿರಂತರ 3ಪೇಸ್ ವಿದ್ಯುತ್ ನೀಡುವ ಭರವಸೆಯನ್ನು ಸರ್ಕಾರ ನೀಡಿದೆ. ಆದರೆ ಅದು ಈಡೇರಿಲ್ಲ. ಅಕ್ರಮ ಸಕ್ರಮದಲ್ಲಿ ೨೫ ಸಾವಿರ ಹಣ ಕಟ್ಟಿದರೆ ಕಂಬ, ತಂತಿ, ಟಿಸಿ ನೀಡಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿತ್ತು. ಅದನ್ನು ರಾಜ್ಯ ಸರ್ಕಾರ ರದ್ದು ಮಾಡಿದ್ದರು ರೈತರು ಹಣ ಕಟ್ಟುವಂತೆ ಆದೇಶ ಮಾಡಲಾಗಿದೆ. ಇದರಿಂದ ರೈತರಿಗೆ ಬಹಳ ಅನ್ಯಾಯವಾಗುತ್ತಿದೆ. ಈ ಆದೇಶವನ್ನು ವಾಪಸ್ಸು ಪಡೆಯಬೇಕು. ಕೇಂದ್ರ ಸರ್ಕಾರ ವಿದ್ಯುತ್ ಖಾಸಗಿಕರಣ ಮಾಡಿ ರೈತರಿಗೆ ಸ್ಮಾರ್ಟ್ ಮೀಟರ್ ಅಳವಡಿಸಲು ಮುಂದಾಗಿದೆ. ಕೇಂದ್ರ ಸರ್ಕಾರ ಈ ನಿರ್ಧಾರವನ್ನು ಕೂಡಲೇ ವಾಪಸ್ ಪಡೆಯಬೇಕು. ರಾಜ್ಯ ಸರ್ಕಾರವು ಸಹ ತಿರಸ್ಕರಿಸಬೇಕು ಎಂದರು.ಕಿರುಕುಳ: ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀನಿವಾಸ್ ಗೌಡ ಮಾತನಾಡಿ, ತಾಲೂಕಿನಲ್ಲಿ ಬರಗಾಲ ಆವರಿಸಿದ್ದರೂ ಸಹ ಬ್ಯಾಂಕ್‌ಗಳು ಸಾಲ ವಸೂಲಾತಿ ನೆಪದಲ್ಲಿ ರೈತರಿಗೆ ಕಿರುಕುಳ ನೀಡುತ್ತಿವೆ. ಬರಗಾಲದಲ್ಲಿ ರೈತರು ಜೀವನ ನಡೆಸುವುದೇ ಕಷ್ಟವಾಗಿದೆ. ಆದ್ದರಿಂದ ತಹಶೀಲ್ದಾರ್ ಮತ್ತು ಲೀಡ್ ಬ್ಯಾಂಕ್ ಮ್ಯಾನೇಜರ್ ಕೂಡಲೇ ಬ್ಯಾಂಕ್ ಮ್ಯಾನೇಜರ್ ಹಾಗೂ ರೈತ ಮುಖಂಡರ ಸಭೆ ನಡೆಸಿ ಸಾಲ ವಸೂಲಾತಿ ಕ್ರಮವನ್ನು ನಿಲ್ಲಿಸಬೇಕು. ಇಲ್ಲವಾದರೆ ಬ್ಯಾಂಕ್‌ಗಳ ವಿರುದ್ಧ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ತಾಲೂಕು ರೈತ ಸಂಘದ ಗೌರವಾಧ್ಯಕ್ಷ ಅಸ್ಲಾಂ ಪಾಷ, ಸಿಐಟಿಯು ಸತೀಶ್, ಮುಖಂಡರಾದ ರಹಮತ್, ಲೋಕೇಶ್, ಗಿರಿಯಪ್ಪ, ಅಶೋಕ್, ಗೋವಿಂದಾರಾಜು, ರವಿಕೀರ್ತಿ, ಪುರುಷೋತ್ತಮ್, ಶಿವಣ್ಣ, ಶ್ರೀನಿವಾಸ್, ಜಯರಾಮ್, ನಟರಾಜು, ಶೇಖರ್, ಸಿದ್ದರಾಮಣ್ಣ ಸೇರಿದಂತೆ ಹಲವು ರೈತ ಮುಖಂಡರು ಇದ್ದರು.