ಕುಂಜಾರುಗಿರಿಯಲ್ಲಿ ಬೋನಿಗೆ ಬಿತ್ತು ಚಿರತೆ !

| Published : Jul 25 2024, 01:25 AM IST

ಕುಂಜಾರುಗಿರಿಯಲ್ಲಿ ಬೋನಿಗೆ ಬಿತ್ತು ಚಿರತೆ !
Share this Article
  • FB
  • TW
  • Linkdin
  • Email

ಸಾರಾಂಶ

ಕೆಲವು ದಿನಗಳಿಂದ ಈ ಪ್ರದೇಶಗಳಲ್ಲಿ ಚಿರತೆಗಳ ಸಂಚಾರವನ್ನು ಸ್ಥಳೀಯರು ಗಮನಿಸಿದ್ದರು. ಈಗಾಗಲೇ ಹಲವಾರು ಮನೆಗಳ ನಾಯಿಗಳು ಚಿರತೆಗೆ ಆಹಾರವಾಗಿವೆ. ಈ ಭಾಗದಲ್ಲಿ ಮೂರು ಚಿರತೆಗಳನ್ನು ಸ್ಥಳೀಯರು ಗುರುತಿಸಿದ್ದು, ಜನರು ಭಯಭೀತರಾಗಿದ್ದರು.

ಕನ್ನಡಪ್ರಭ ವಾರ್ತೆ ಕಾಪು

ಇಲ್ಲಿನ ಪಡುಬೆಳ್ಳೆ, ಕುರ್ಕಾಲು, ಕುಂಜಾರುಗಿರಿ ಪ್ರದೇಶಗಳಲ್ಲಿ ಸಂಚರಿಸುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆ ಬುಧವಾರ ಬೋನಿಗೆ ಹಾಕುವಲ್ಲಿ ಯಶಸ್ವಿಯಾಗಿದೆ.

ಕೆಲವು ದಿನಗಳಿಂದ ಈ ಪ್ರದೇಶಗಳಲ್ಲಿ ಚಿರತೆಗಳ ಸಂಚಾರವನ್ನು ಸ್ಥಳೀಯರು ಗಮನಿಸಿದ್ದರು. ಈಗಾಗಲೇ ಹಲವಾರು ಮನೆಗಳ ನಾಯಿಗಳು ಚಿರತೆಗೆ ಆಹಾರವಾಗಿವೆ. ಈ ಭಾಗದಲ್ಲಿ ಮೂರು ಚಿರತೆಗಳನ್ನು ಸ್ಥಳೀಯರು ಗುರುತಿಸಿದ್ದು, ಜನರು ಭಯಭೀತರಾಗಿದ್ದಾರೆ. ಗಿರಿನಗರ ಅಂಗನವಾಡಿ ಶಿಕ್ಷಕಿ ಸುಶೀಲಾ ಅವರ ಸಹೋದರ ಸುದರ್ಶನ್ ಮತ್ತು ಆನಂದ್ ಎಂಬವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಅರಣ್ಯ ಇಲಾಖೆಯವರು ಮಂಗಳವಾರ ಬೆಳ್ಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಜಕ ಕ್ಷೇತ್ರ ಹಾಗೂ ಕುರ್ಕಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಿರಿನಗರ ಸಂಗಮ ಕೇಂದ್ರದಲ್ಲಿ ಚಿರತೆಯನ್ನು ಸೆರೆ ಹಿಡಿಯಲು ಬೋನು ಇಟ್ಟಿದ್ದರು.

ಬುಧವಾರ ಬೆಳಗ್ಗೆ ೧೦ ಗಂಟೆ ಸುಮಾರಿಗೆ ಒಂದು ಚಿರತೆ ಬೋನಿನಲ್ಲಿ ಸೆರೆಯಾಗಿದೆ. ನಂತರ ಅರಣ್ಯ ಇಲಾಖೆಯವರು ಬಂದು ಸ್ಥಳೀಯರ ಸಹಕಾರದಲ್ಲಿ ಚಿರತೆಯನ್ನು ಅಲ್ಲಿಂದ ಸ್ಥಳಾಂತರಿಸಿದ್ದಾರೆ.

ಅರಣ್ಯ ಇಲಾಖೆಯ ಡಿಎಫ್‌ಒ ವಾರೀಜಾಕ್ಷಿ, ಡಿಎಫ್‌ಆರ್‌ಒ ಜೀವನ್ ಶೆಟ್ಟಿ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಕುರ್ಕಾಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಉಪಾಧ್ಯಕ್ಷೆ ಸತಾಲಿಯಾ ಮಾರ್ಟಿಸ್, ಸ್ಥಳೀಯ ಸದಸ್ಯ ಮಹೇಶ್ ಶೆಟ್ಟಿ ಉಪಸ್ಥಿತರಿದ್ದರು.

ಈ ಕಾರ್ಯಕ್ಕೆ ಕಾಪು ತಾಲೂಕು ತಹಸೀಲ್ದಾರ್ ಪ್ರತಿಭಾ ಆರ್. ಅವರು ಅರಣ್ಯ ಇಲಾಖೆಯ ತಂಡವನ್ನೂ ಸ್ಥಳೀಯರನ್ನೂ ಅಭಿನಂದಿಸಿದ್ದಾರೆ. ಸ್ವತಃ ಭೇಟಿ ನೀಡಿ ಚಿರತೆಯನ್ನು ಅಭಯಾರಣ್ಯಕ್ಕೆ ಸುರಕ್ಷಿತವಾಗಿ ಬಿಡಲು ನಿರ್ದೇಶನ ನೀಡಿದ್ದಾರೆ.