ಸಾರಾಂಶ
ಜಾತ್ರೆಯಲ್ಲಿ ಸೇರುವ ಸಮೂಹ ಸನ್ನಿಯನ್ನೇ ಸನ್ಮಾರ್ಗದ ಕಡೆಗೆ ಕರೆದೊಯ್ಯಲು ಗವಿಸಿದ್ದೇಶ್ವರ ಶ್ರೀಗಳು ಪ್ರತಿ ವರ್ಷವೂ ಒಂದಿಲ್ಲೊಂದು ಸಮಾಜಮುಖಿ ಕಾರ್ಯಕ್ಕೆ ಮುನ್ನುಡಿ ಬರೆಯುತ್ತಿದ್ದಾರೆ. ಈ ಬಾರಿ ಯುವಕರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಕಾಯಕ ದೇವೋಭವ ಜಾಗೃತಿ ಹಮ್ಮಿಕೊಂಡಿದ್ದಾರೆ.
ಸೋಮರಡ್ಡಿ ಅಳವಂಡಿ
ಕೊಪ್ಪಳ: ಜಾತ್ರೆಯಲ್ಲಿ ಸೇರುವ ಸಮೂಹ ಸನ್ನಿಯನ್ನೇ ಸನ್ಮಾರ್ಗದ ಕಡೆಗೆ ಕರೆದೊಯ್ಯಲು ಗವಿಸಿದ್ದೇಶ್ವರ ಶ್ರೀಗಳು ಪ್ರತಿ ವರ್ಷವೂ ಒಂದಿಲ್ಲೊಂದು ಸಮಾಜಮುಖಿ ಕಾರ್ಯಕ್ಕೆ ಮುನ್ನುಡಿ ಬರೆಯುತ್ತಿದ್ದಾರೆ. ಈ ಬಾರಿ ಯುವಕರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಕಾಯಕ ದೇವೋಭವ ಜಾಗೃತಿ ಹಮ್ಮಿಕೊಂಡಿದ್ದಾರೆ. ರಾಜ್ಯದ ವಿವಿಧೆಡೆ ಗೆದ್ದ ನೂರು ಸಾಧಕರಿಂದ ಸ್ವಾವಲಂಬನೆಯ ಪಾಠ ಮಾಡುವುದರ ಜೊತೆ ಪ್ರಾತ್ಯಕ್ಷಿಕೆ ಸಮೇತ ಮಾರ್ಗದರ್ಶನ ಮಾಡಲು ಮುಂದಾಗಿದ್ದಾರೆ.
ಓದಿದರೂ ಸರ್ಕಾರಿ ನೌಕರಿ ಇಲ್ಲ ಎಂದು ಕೊರಗುವುದಕ್ಕಿಂತ ಮತ್ತು ನಾನು ಓದಲಿಲ್ಲ ಎಂದು ಜಿಗುಪ್ಸೆಗೆ ಒಳಗಾಗುವುದಕ್ಕಿಂತ ಓದಿ ಮತ್ತು ಓದದೇ ಗೆದ್ದವರೇ ಹೆಚ್ಚು. ಅಂಥ ಪ್ರತಿಭೆಗಳು ಜಾತ್ರೆಯಲ್ಲಿ ಪಾಠ ಹೇಳಿಕೊಡಲು ಬರುತ್ತಿದ್ದಾರೆ.ಓದದೇ ಬರೆಯದೇ ಕೇವಲ ಕೌದಿ ಹೊಲಿಯುತ್ತಲೇ ದೇಶ-ವಿದೇಶಕ್ಕೂ ರಫ್ತು ಮಾಡುವ ಮೂಲಕ ಕೋಟ್ಯಂತರ ರುಪಾಯಿ ಆದಾಯ ಹೊಂದಿರುವ ಮಹಿಳಾ ಸಂಘ, ಓದಿದ ಮೇಲೇ ಸರ್ಕಾರಿ ನೌಕರಿ ಬೆನ್ಹತ್ತುವ ಬದಲು ತಾನೇ ಕಂಪನಿ ಸ್ಥಾಪಿಸಿ, ಗೆದ್ದು ಯಶಸ್ವಿಯಾಗಿ ನೂರಾರು ಜನರಿಗೆ ಉದ್ಯೋಗದಾತರಾದವರು ಉಪದೇಶ ನೀಡಲಿದ್ದಾರೆ.
ಜಾತ್ರೆ ಎಂದರೆ ಮೋಜು ಮಸ್ತಿ ಮಾಡಿ, ಪಿಪಿ, ಬಲೂನ್ ಖರೀದಿ ಮಾಡಿಕೊಂಡು ಹೋಗುವುದಲ್ಲ, ಬದುಕಿಗೆ ದಾರಿ ಕಂಡುಕೊಳ್ಳುವಂತಾಗಬೇಕು. ಗೆದ್ದವರ ಕತೆಯನ್ನು ಕಣ್ಣಾರೆ ಕಂಡು, ಕೇಳಿ, ಯುವಕರು ಪ್ರೇರಣೆಯಾಗಬೇಕು ಎನ್ನುವ ಚಿಂತನೆಯ ಮೇಲೆ ರಾಜ್ಯದ ವಿವಿಧೆಡೆ ಗೆದ್ದ ಸುಮಾರು 100 ಸ್ವಾವಲಂಬಿ ಸಾಧಕರು ತಮ್ಮ ಸಾಧನೆಯ ಕುರಿತೇ ಮಳಿಗೆಗಳನ್ನು ತೆರೆಯಲಿದ್ದಾರೆ.
ಮಳಿಗೆಗಳಿಗೆ ಸುತ್ತಾಡಿದರೆ ಸಾಕು ನಿಮಗೆ ನೂರು ಸಾಧಕರು ಗೆದ್ದ ದರ್ಶನ ನೀಡಲಾಗುತ್ತದೆ. ಹೀಗೆ ದರ್ಶನವಾದ ಮೇಲೆ ಇದರಿಂದ ಪ್ರೇರಣೆಯಾಗಿ, ಅವರು ತಮ್ಮ ಬದುಕಿನಲ್ಲಿ ಸ್ವಾವಲಂಬನೆಯ ಬದುಕಿನತ್ತ ಸಾಗಬೇಕು ಎನ್ನುವುದೇ ಈಗ ಕಾಯಕ ದೇವೋಭವದ ಮಹಾ ಉದ್ದೇಶವಾಗಿದೆ.
ಗೆದ್ದವರು ಕೇವಲ ತಮ್ಮ ಉಪದೇಶವನ್ನು ಹೇಳುವುದಿಲ್ಲ, ಗೆದ್ದ ಮಾರ್ಗದ ದರ್ಶನವನ್ನೇ ನೀಡುತ್ತಾರೆ. ಮಳಿಗೆಯಲ್ಲಿ ಇದೆಲ್ಲವೂ ಅನಾವರಣ ಆಗುವುದರಿಂದ ಯುವಕರಲ್ಲಿ ಹೆಚ್ಚು ಪ್ರೇರಣೆಯಾಗುತ್ತದೆ.ಜಿಲ್ಲಾಡಳಿತ, ಕೌಶಲಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಜಂಟಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಕೇವಲ ಸಾಧಕರ ಗೆಲುವಿನ ಪಾಠ ಮಾಡುವುದು ಅಷ್ಟೇ ಅಲ್ಲ, ಸ್ವಾವಲಂಬಿ ಬದುಕಿಗೆ ಸರ್ಕಾರದಲ್ಲಿ ಇರುವ ಮಾರ್ಗಗಳು, ಸಹಾಯಧನಗಳು, ಬ್ಯಾಂಕ್ ಸಾಲಗಳು ದೊರೆಯುವ ಮಾರ್ಗಗಳು ಸೇರಿದಂತೆ ಅನೇಕ ರೀತಿಯಲ್ಲಿ ಪಾಠ ಮಾಡಲಾಗುತ್ತದೆ; ಮಾಹಿತಿ ನೀಡಲಾಗುತ್ತದೆ. ಈ ಮೂಲಕ ಜಾತ್ರೆಗೆ ಬಂದವರು ಪ್ರೇರಣೆಯಾಗಲಿ ಎನ್ನುವ ಮಹದಾಸೆ ಇದೆ.ಮಳಿಗೆಗಳು ಸಂಪೂರ್ಣ ಗೆದ್ದವರ ಯಶೋಗಾಥೆಯ ಕುರಿತದ್ದು. ಇಲ್ಲಿ ಗೆದ್ದವರು ತಮ್ಮ ಗೆಲುವಿನ ಕುರಿತ ಮಾಹಿತಿ ನೀಡುತ್ತಾರೆ.
ಮಳಿಗೆ ಎದುರು ಸಾಗಿ ಬಂದರೆ ಸಾಕು ಸಾಧಕರ ಬದುಕು ಅನಾವರಣವಾಗುತ್ತದೆ.ಪ್ರತಿ ಮಳಿಗೆಯಲ್ಲೂ ಸ್ವಾವಲಂಬನೆ, ಸ್ವಾಭಿಮಾನ, ಸ್ವ ಸಾಮರ್ಥ್ಯದ ಜಯದ ಕತೆ ಇರುತ್ತದೆ. ಒಂದರಂತೆ ಮತ್ತೊಂದು ಇರುವುದಿಲ್ಲ. ಉಪ್ಪಿನಕಾಯಿ ಮಾಡಿ ಗೆದ್ದವರ ಕುರಿತು ಒಂದೇ ಸ್ಟಾಲ್ ಇರುತ್ತದೆ. ಕೌದಿಯ ಕತೆ ಹೇಳುವ ಮತ್ತೊಂದು ಸ್ಟಾಲ್... ಹೀಗೆ ವಿಭಿನ್ನ ನೂರು ಮಳಿಗೆಗಳಿರುತ್ತವೆ.
ಈ ವರ್ಷದ ಜಾತ್ರೆಯ ಸಂಕಲ್ಪವೇ ಸ್ವಾವಲಂಬಿ ಬದುಕು ಎನ್ನುವುದು. ಈ ಕುರಿತು ಜಾಗೃತಿ ಮೂಡಿಸುವುದು. ಯುವಕರಲ್ಲಿ ಪ್ರೇರಣೆ ಮೂಡಿಸುವುದು. ಓದಿಯೂ ಗೆಲ್ಲಬಹುದು ಮತ್ತು ಓದದೆಯೂ ಗೆದ್ದವರು ಇದ್ದಾರೆ ಎನ್ನುವುದನ್ನು ತೋರಿಸಿಕೊಡುವುದು. ಉದ್ಯೋಗಕ್ಕಾಗಿ ಸರ್ಕಾರದ ದುಂಬಾಲು ಬೀಳುವುದಕ್ಕಿಂತ ಸ್ವ ಉದ್ಯೋಗದಿಂದ ಮತ್ತೆ ಅನೇಕರಿಗೆ ಉದ್ಯೋಗ ನೀಡಬಹುದು ಎನ್ನುವುದನ್ನು ಮನವರಿಕೆ ಮಾಡಿಕೊಡುವುದು ಎನ್ನುತ್ತಾರೆ ಗವಿಸಿದ್ದೇಶ್ವರ ಶ್ರೀ.