ಗದಗ: ಸಮಾಜಮುಖಿ ಸೇವೆಯ ಮೂಲಕ ಶಾಸಕರಾಗಿ, ಮಂತ್ರಿಗಳಾಗಿ ಎಸ್.ಎಸ್. ಪಾಟೀಲರು ಜನಪರ ಕಾರ್ಯವನ್ನು ಮಾಡಿದ್ದಾರೆ. ಹಿಂದುಳಿದ ಪ್ರದೇಶವಾದ ಮುಂಡರಗಿಯನ್ನು ಪ್ರಗತಿಪಥದತ್ತ ಕೊಂಡೊಯ್ಯವ ದಿಸೆಯಲ್ಲಿ ಮಾಡಿದ ಪ್ರಯತ್ನ ಮಾದರಿಯಾದುದು. ಅವರ ನಡೆ, ನುಡಿ ಮತ್ತು ರೈತರ ಬಗ್ಗೆ ಹೊಂದಿರುವ ಪ್ರೀತಿ ಇಂದಿನ ಪೀಳಿಗೆಗೆ ಆದರ್ಶಪ್ರಾಯವಾಗಿದೆ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ತಿಳಿಸಿದರು.

ನಗರದ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ದಾವಣಗೆರೆಯ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದ ವತಿಯಿಂದ ರಾಜ್ಯಮಟ್ಟದ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪನವರ ಪ್ರಶಸ್ತಿಯನ್ನು ಮಾಜಿ ಸಚಿವರಾದ ಎಸ್.ಎಸ್.ಪಾಟೀಲ ಅವರಿಗೆ ಪ್ರದಾನ ಮಾಡಿ ಮಾತನಾಡಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಸ್.ಎಸ್. ಪಾಟೀಲರು, ಶರಣರ ಚಿಂತನೆಗಳನ್ನು ಅಳವಡಿಸಿಕೊಂಡರೆ ಸಮಾಜ ಸರ್ವಾಂಗ ಸುಂದರವಾಗುತ್ತದೆ. ಅಣ್ಣ ಮುದುಕನಗೌಡರ ಪ್ರೇರಣೆ ಸಮಾಜಮುಖಿ ವ್ಯಕ್ತಿಯಾಗಿ ನನ್ನನ್ನು ರೂಪಿಸಿತು. ಹಿರಿಯರು ಕಂಡ ಕನಸನ್ನು ನನಸು ಮಾಡುವ ದಿಸೆಯಲ್ಲಿ ನನಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಕಾರ್ಯ ಮಾಡಿದ್ದೇನೆ. ಆದರೆ, ಮಾಗನೂರು ಬಸಪ್ಪನವರ ಸೇವೆ ಅದ್ವೀತಿಯವಾದುದು ಎಂದರು.

ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದ ಅಧ್ಯಕ್ಷ ಮಾಗನೂರು ಸಂಗಮೇಶಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ಅರ್ಪಿಸಿದಾಗ ಸಂತೃಪ್ತಭಾವ ನೆಲೆಗೊಳ್ಳಲು ಸಾಧ್ಯವಾಗುತ್ತದೆ. ಹಿರಿಯರ ಜೀವನಪಥ ನಮಗೆ ದಾರಿದೀಪವಾಗಿದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಅಭಿನಂದನಾ ನುಡಿಗಳನ್ನಾಡಿ, ಹುಲಿಗುಡ್ಡ ಏತ ನೀರಾವರಿ ಯೋಜನೆ, ಸಕ್ಕರೆ ಕಾರ್ಖಾನೆ ಸ್ಥಾಪನೆ, ಶೈಕ್ಷಣಿಕ ರಂಗದ ಏಳ್ಗೆ, ಪರಿಸರ ಕಾಳಜಿ, ಮೂಲಭೂತ ಸೌಕರ್ಯಗಳ ನಿರ್ಮಾಣ, ಸಾಹಿತ್ಯ ಸಂಸ್ಕೃತಿ ಬಗೆಗಿನ ಒಲವು, ಮಹಿಳೆಯರ ಬಗೆಗಿನ ಗೌರವ ಹೀಗೆ ಎಸ್.ಎಸ್. ಪಾಟೀಲರ ವಿವಿಧ ಆಯಾಮಗಳನ್ನು ಪರಿಚಯಿಸಿದರು.


ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಎಚ್.ಕೆ. ಲಿಂಗರಾಜು ಅವರು ಶರಣ ಮಾಗನೂರು ಬಸಪ್ಪ ಅವರ ವ್ಯಕ್ತಿತ್ವ ಕುರಿತು ಮಾತನಾಡಿದರು.

ಮುದುಕೇಶ್ವರ ಶಿವಾಚಾರ್ಯ ಸ್ವಾಮಿಗಳು, ಅಭಿನವ ಮುದುಕೇಶ್ವರ ಶಿವಾಚಾರ್ಯ ಸ್ವಾಮಿಗಳು ವಿರೂಪಾಪುರ, ಕಲಕೇರಿ, ಸಿದ್ಧರಾಮಸ್ವಾಮಿಗಳು ವಿರೂಪಾಪುರ, ಕಲಕೇರಿ, ಸಿದ್ಧರಾಮೇಶ್ವರಮಠ ಕಿತ್ತಲಿ, ಎಸ್.ಎಸ್. ಪಾಟೀಲ ಹಿರೇಕೇರೂರು, ಮಂಜುನಾಥಗೌಡ ಹಾವೇರಿ, ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದ ಉಪಾಧ್ಯಕ್ಷೆ ಎಂ.ಎಸ್. ಸುನಂದಾದೇವಿ ಮಾಗನೂರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ಆಡಳಿತಾಧಿಕಾರಿ ಎಚ್.ವಿ. ವಾಮದೇವಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನ್ನಪೂರ್ಣ ಎಚ್.ಎಂ. ಹಾಗೂ ಲೀಲಾವತಿ ಟಿ.ಜಿ. ನಿರೂಪಿಸಿದರು. ಡಾ. ಉಮೇಶ ಪುರದ ಸ್ವಾಗತಿಸಿದರು.

ಉಷಾ ಕಾರಂತ, ಮರಿದೇವರಮಠ ಅವರಿಂದ ಸಂಗೀತ ಸೇವೆ ಜರುಗಿತು. ಯುಕ್ತಾ ಮಾಗನೂರ ಭರತನಾಟ್ಯ ಪ್ರದರ್ಶಿಸಿದರು. ರಮೇಶ ಕಲ್ಲನಗೌಡರ ವಂದಿಸಿದರು.