ಸಾರಾಂಶ
ತತ್ತ್ವಜ್ಞಾನಿಗಳ ದಿನಾಚರಣೆ - ಧಾರ್ಮಿಕ ಪ್ರವಚನ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಶ್ರೀ ಶಂಕರಾಚಾರ್ಯರು ತಮ್ಮ 32 ವರ್ಷಗಳ ಜೀವಿತಾವಧಿಯಲ್ಲಿ ರಚಿಸಿದ ಕೃತಿಗಳನ್ನು ಸುಮ್ಮನೆ ಅಧ್ಯಯನ ಮಾಡುತ್ತೇವೆಂದರೂ ನಮ್ಮ ಇಡೀ ಜೀವಮಾನವೇ ಸಾಲದೇನೋ ಎಂದು ಗಾಯಕ ಮೈಸೂರಿನ ಎಂ.ಆರ್.ಶ್ರೀಹರ್ಷ ಹೇಳಿದರು.
ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾ ಹಾಗೂ ಶೃಂಗೇರಿ ಶ್ರೀ ಶಂಕರಮಠದ ಆಶ್ರಯದಲ್ಲಿ ನಗರದ ಬ್ರಹ್ಮಸಮುದ್ರ ಶ್ರೀ ರಂಗಣ್ಣ ನವರ ಕಲ್ಯಾಣ ಮಂಟಪದಲ್ಲಿ ಶ್ರೀ ಶಂಕರಾಚಾರ್ಯ ಹಾಗೂ ಶ್ರೀ ರಾಮಾನುಜಾಚಾರ್ಯರ ಜಯಂತಿ ಪ್ರಯುಕ್ತ ಆಯೋಜಿಸಿದ್ದ ತತ್ತ್ವಜ್ಞಾನಿಗಳ ದಿನಾಚರಣೆ ಮತ್ತು ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಭಕ್ತಿಗೀತೆಗಳನ್ನು ಪ್ರಸ್ತುತ ಪಡಿಸಿ ಮಾತನಾಡಿದರು.ಶಂಕರಾಚಾರ್ಯರು ಭಗವಾನ್ ಸಾಕ್ಷಾತ್ ಶಂಕರನ ಅವತಾರವೇ ಆಗಿದ್ದಾರೆ. 1200- 1300ಕ್ಕೂ ಹೆಚ್ಚು ವರ್ಷಗಳು ಕಳೆದರೂ ಅವರು ರಚಿಸಿರುವ ಶ್ಲೋಕಗಳು, ಸ್ತೋತ್ರಗಳು ಇಂದಿಗೂ ನಮ್ಮ ಬದುಕಿಗೆ ಪ್ರಸ್ತುತವಾಗಿವೆ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಶ್ರೀ ಶಂಕರಾಚಾರ್ಯರ ಕುರಿತು ಉಪನ್ಯಾಸ ನೀಡಿದ ಪತ್ರಕರ್ತ ಸಂದೇಶ ತಲಕಾಲಕೊಪ್ಪ, ಶ್ರೀ ಶಂಕರಾಚಾರ್ಯರು ಆವಿರ್ಭಸಿದ ಕಾಲಘಟ್ಟದಲ್ಲಿ ಭಾರತ ಕತ್ತಲಲ್ಲಿತ್ತು. ಯಜ್ಞ ಯಾಗಾದಿಗಳು, ಹೋಮ ಹವನಾದಿ ಗಳನ್ನು ಅನುಸರಿಸುವುದು ತಪ್ಪುಎಂದೇ ಬಿಂಬಿಸಲಾಗುತ್ತಿತ್ತು. ಆದರೆ, ಶಂಕರಾಚಾರ್ಯರು ಜ್ಞಾನ ಭಾಸ್ಕರರಾಗಿ ಭಾರತ ದಲ್ಲಿ ಉದಯಿಸಿ ಬೆಳಗುತ್ತಾರೆ. ಅವರು ತಮ್ಮ ಜೀವಿತಾವಧಿಯಲ್ಲಿ ದೇಶಾದ್ಯಂತ ಮಠ ಮಂದಿರಗಳನ್ನು, ದೇವಾಲಯ ಗಳನ್ನು ಸ್ಥಾಪಿಸಿದರು. ಆ ಮೂಲಕ ಸನಾತನ ಭಾರತೀಯ ಸಂಸ್ಕೃತಿಗೆ ಶಕ್ತಿ ಕೇಂದ್ರಗಳನ್ನು ಒದಗಿಸಿದ್ದಾರೆ ಎಂದರು.
ಅಖಂಡ ಭಾರತದ ಕಲ್ಪನೆ ಭಾರತೀಯರಿಗೆ ಇರಲಿಲ್ಲ. ಬ್ರಿಟಿಷರ ಆಳ್ವಿಕೆ ಬಂದ ನಂತರ ಆ ಕಲ್ಪನೆ ಬಂತು ಎನ್ನುವ ಮಾತಿದೆ. ಆದರೆ, ಶ್ರೀ ಶಂಕರಾಚಾರ್ಯರ ಪಂಚಾಯತನ ಪೂಜಾ ಹಾಗೂ ಅವರ ಪರ್ಯಟನೆ ಗಮನಿಸಿದರೆ ಅಖಂಡ ಭಾರತದ ಪರಿಕಲ್ಪನೆ ಇರುವುದು ಸ್ಪಷ್ಟವಾಗುತ್ತದೆ. ಅವರು ಜನ ಬಲ, ಬಾಹು ಬಲ, ಧನ ಬಲ, ರಾಜಾಶ್ರಯ ಇಲ್ಲದೆ ಅಂತಃ ಶಕ್ತಿಯಿಂದ ಸನಾತನ ಧರ್ಮವನ್ನು ಪುನರ್ ಪ್ರತಿಷ್ಠಾಪಿಸಿದವರು. ಭಾರತವನ್ನು ಮೂರು ಬಾರಿ ಪರಿಕ್ರಮಿಸಿ, ಆ ಮೂಲಕ ಧಾರ್ಮಿಕ, ಸಾಂಸ್ಕೃತಿಕವಾಗಿ ದೇಶವನ್ನು ಒಗ್ಗೂಡಿಸಿದ್ದಾರೆ ಎಂದರು. ಶ್ರೀರಾಮಾನುಜಾಚಾರ್ಯರ ಕುರಿತು ಉಪನ್ಯಾಸ ನೀಡಿದ ಹಿರೇಮಗಳೂರು ಶ್ರೀ ಕೋದಂಡರಾಮಚಂದ್ರ ಸ್ವಾಮಿ ದೇವಾಲಯ ಅರ್ಚಕ ಹಾಗೂ ವಾಗ್ಮಿ ವೈಷ್ಣವಸಿಂಹ, ವಿಶಿಷ್ಟಾದ್ವೈತ, ಅದ್ವೈತ, ದ್ವೈತ ಸಿದ್ಧಾಂತ ತಾತ್ತ್ವಿಕತೆಯ ವಿಚಾರಗಳು. ಆದರೆ ನಾವ್ಯಾರೂ ಆ ತಾತ್ತ್ವಿಕ ಸಂಗತಿಗಳ ಮಟ್ಟದಲ್ಲಿ ವೈಮನಸ್ಸನ್ನು ಇಟ್ಟುಕೊಂಡಿಲ್ಲ. ಆದರೆ ನಾವು ಆಚರಣೆ ಮಟ್ಟದಲ್ಲಿ ವೈಮನಸ್ಸನ್ನುಇಟ್ಟುಕೊಂಡಿದ್ದೇವೆ. ಇದು ವಿಪರ್ಯಾಸ ಎಂದು ಹೇಳಿದರು.ಬಿಎಂಎಸ್ ಸಂಘಟನಾ ಕಾರ್ಯದರ್ಶಿ ಜಿ.ಎಂ.ಸತ್ಯನಾರಾಯಣ ಸ್ವಾಮಿ ನೇತೃತ್ವದಲ್ಲಿ ಏರ್ಪಡಿಸಿದ್ದ ರಸಪ್ರಶ್ನೆ ಸ್ಪರ್ಧೆ ಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಬಾಲಶಂಕರರಾಗಿ ಮೆರವಣಿಗೆಯಲ್ಲಿ ಗಮನ ಸೆಳೆದ ಸಮರ್ಥ, ಶ್ರೀಹಾನ್, ಪೃಥ್ವಿ ಹಾಗೂ ಪ್ರಣಮ್ಯ ಅವರಿಗೆ ನೆನಪಿನ ಕಾಣಿಕೆ ನೀಡಲಾಯಿತು. ಅಧ್ಯಕ್ಷತೆ ವಹಿಸಿದ್ದ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಪಿ.ಮಂಜುನಾಥ ಜೋಷಿ ಮಾತನಾಡಿದರು. ದಾನಿಗಳಾದ ರಾಮಚಂದ್ರ ಹಾಸ್ಯಗಾರ್, ಯೋಗ ಶಿಕ್ಷಕ ದಿವಾಕರಭಟ್, ದಾಸ ಸಾಹಿತ್ಯ ಪ್ರಚಾರಕ ಉದಯಸಿಂಹ, ಹಿರೇಮಗಳೂರು ಪುಟ್ಟಸ್ವಾಮಿ, ಬ್ರಾಹ್ಮಣ ಮಹಾಸಭಾದ ಖಜಾಂಚಿ ಶ್ಯಾಮಲಾ ಎಂ.ರಾವ್ ವೇದಿಕೆಯಲ್ಲಿದ್ದರು. ಬಿಎಂಎಸ್ ಕಾರ್ಯದರ್ಶಿ ಎನ್.ಕೆ.ಅಶ್ವಿನ್ ಮಾತನಾಡಿದರು. ಬಿಎಂಎಸ್ ನಿರ್ದೇಶಕಿ ಸುಮಾ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಬಿಎಂಎಸ್ ನಿರ್ದೇಶಕಿ ಎಸ್.ಶಾಂತಕುಮಾರಿ ವಂದಿಸಿದರು. ಇದಕ್ಕೂ ಮೊದಲು ಮಂಗಳವಾದ್ಯದೊಂದಿಗೆ ಆಚಾರ್ಯತ್ರಯರ ಭಾವಚಿತ್ರಗಳನ್ನು ಒಳಗೊಂಡ ಮೆರವಣಿಗೆ ನಗರದ ಶೃಂಗೇರಿ ಶ್ರೀ ಶಂಕರಮಠದಿಂದ ಹೊರಟು ಹನುಮಂತಪ್ಪ ವೃತ್ತ ಹಾದು ಶ್ರೀ ರಂಗಣ್ಣನವರ ಕಲ್ಯಾಣ ಮಂಟಪ ತಲುಪಿತು. ಈ ಸಂದರ್ಭದಲ್ಲಿ ದಾಸ ಸಾಹಿತ್ಯ ಪ್ರಚಾರಕ ಉದಯಸಿಂಹ ಅವರ ನೇತೃತ್ವದಲ್ಲಿ ಭಜನಾ ಮಂಡಳಿ ಮಹಿಳಾ ತಂಡಗಳು ಮೆರವಣಿಗೆಯಲ್ಲಿ ಗಮನ ಸೆಳೆದವು.ಪೋಟೋ ಫೈಲ್ ನೇಮ್ 13 ಕೆಸಿಕೆಎಂ 1ಚಿಕ್ಕಮಗಳೂರಿನ ಶ್ರೀ ರಂಗಣ್ಣನವರ ಛತ್ರದಲ್ಲಿ ಶ್ರೀ ಶಂಕರಾಚಾರ್ಯರು ಹಾಗೂ ಶ್ರೀ ರಾಮಾನುಜಾಚಾರ್ಯರ ಜಯಂತಿ ಪ್ರಯುಕ್ತ ಆಯೋಜಿಸಿದ್ದ ತತ್ತ್ವಜ್ಞಾನಿಗಳ ದಿನಾಚರಣೆ, ಧಾರ್ಮಿಕ ಪ್ರವಚನವನ್ನು ಪತ್ರಕರ್ತ ಸಂದೇಶ ತಲಕಾಲಕೊಪ್ಪ ಉದ್ಘಾಟಿಸಿದರು. ಹರ್ಷ, ಉದಯಸಿಂಹ, ದಿವಾಕರಭಟ್, ಹಿರೇಮಗಳೂರು ಪುಟ್ಟಸ್ವಾಮಿ, ಮಂಜುನಾಥ ಜೋಷಿ, ಎನ್.ಕೆ.ಅಶ್ವಿನ್ ಇದ್ದರು.