ಮಂಗಳೂರು : ಎಂಜಿನ್‌ನಲ್ಲಿ ಬೆಂಕಿ ಕಾಣಿಸಿ ಸಂಚರಿಸುವಾಗಲೇ ಸುಟ್ಟು ಭಸ್ಮವಾದ ಐಷಾರಾಮಿ ಬಿಎಂಡಬ್ಲ್ಯೂ ಕಾರು!

| Published : Sep 06 2024, 01:06 AM IST / Updated: Sep 06 2024, 01:21 PM IST

ಮಂಗಳೂರು : ಎಂಜಿನ್‌ನಲ್ಲಿ ಬೆಂಕಿ ಕಾಣಿಸಿ ಸಂಚರಿಸುವಾಗಲೇ ಸುಟ್ಟು ಭಸ್ಮವಾದ ಐಷಾರಾಮಿ ಬಿಎಂಡಬ್ಲ್ಯೂ ಕಾರು!
Share this Article
  • FB
  • TW
  • Linkdin
  • Email

ಸಾರಾಂಶ

ಐಷಾರಾಮಿ ಬಿಎಂಡಬ್ಲ್ಯೂ ಕಾರಿಗೆ ಬೆಂಕಿ ಹತ್ತಿಕೊಳ್ಳಲು ಕಾರಣವೇನು ಎನ್ನುವುದು ಇನ್ನೂ ಗೊತ್ತಾಗಿಲ್ಲ. ಡೀಸೆಲ್‌ ಕಾರು ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ಮಂಗಳೂರು :  ಐಷಾರಾಮಿ ಬಿಎಂಡಬ್ಲ್ಯೂ ಕಾರು ಸಂಚರಿಸುತ್ತಿದ್ದಾಗಲೇ ಹಠಾತ್ತನೇ ಬೆಂಕಿ ಹತ್ತಿಕೊಂಡು ಸುಟ್ಟು ಭಸ್ಮವಾದ ಘಟನೆ ಸುರತ್ಕಲ್‌ ಎನ್‌ಐಟಿಕೆ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.

ಕುಂದಾಪುರದ ದಯಾನಂದ ಶೆಟ್ಟಿ ಎಂಬವರ ಕಾರು ಇದಾಗಿದ್ದು, ಅವರು ಸ್ವತಃ ಉಡುಪಿಯಿಂದ ಮಂಗಳೂರಿಗೆ ಕಾರು ಚಲಾಯಿಸಿಕೊಂಡು ಬರುತ್ತಿದ್ದರು. ಸುರತ್ಕಲ್‌ ಬರುತ್ತಿದ್ದಂತೆ ಕಾರಿನ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಜಾಗೃತರಾದ ದಯಾನಂದ ಶೆಟ್ಟಿ ಹೆದ್ದಾರಿ ಬದಿಯಲ್ಲಿ ಕಾರು ನಿಲ್ಲಿಸಿ ಕೂಡಲೆ ಹೊರಬಂದಿದ್ದಾರೆ. ಅವರ ಕಣ್ಣೆದುರಲ್ಲೇ ಐಷಾರಾಮಿ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಸುತ್ತಮುತ್ತಲಿನ ಜನರೆಲ್ಲ ಆಶ್ಚರ್ಯಚಕಿತರಾಗಿ ನೋಡುತ್ತಿದ್ದರು.

ಸ್ಫೋಟಗೊಂಡ ರೀತಿಯಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಂಡಿತ್ತು. ಈ ವೇಳೆ ಕಾರ್ಯಪ್ರವೃತ್ತರಾದ ಉತ್ತರ ಸಂಚಾರಿ ಠಾಣೆ ಹಾಗೂ ಸುರತ್ಕಲ್‌ ಠಾಣೆ ಪೊಲೀಸರು ಈ ಜಾಗದಲ್ಲಿ ವಾಹನ ಸಂಚಾರ ಬಂದ್‌ ಮಾಡಿ, ಜನರನ್ನು ದೂರ ಚದುರಿಸಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು. ಆದರೆ ಅದಾಗಲೇ ಕಾರು ಸಂಪೂರ್ಣ ಸುಟ್ಟುಹೋಗಿತ್ತು.

ಐಷಾರಾಮಿ ಬಿಎಂಡಬ್ಲ್ಯೂ ಕಾರಿಗೆ ಬೆಂಕಿ ಹತ್ತಿಕೊಳ್ಳಲು ಕಾರಣವೇನು ಎನ್ನುವುದು ಇನ್ನೂ ಗೊತ್ತಾಗಿಲ್ಲ. ಡೀಸೆಲ್‌ ಕಾರು ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸುರತ್ಕಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.