ತನ್ನ ಪ್ರೀತಿಗೆ ಮುಳ್ಳಾದಳೆಂದು ಪಿಜಿಗೆ ನುಗ್ಗಿ ಯುವತಿಯ ಇರಿದು ಕೊಂದ ಪಾಗಲ್‌ ಪ್ರೇಮಿ

| Published : Jul 27 2024, 01:49 AM IST / Updated: Jul 27 2024, 06:49 AM IST

ಸಾರಾಂಶ

ತನ್ನ ಪ್ರೀತಿಗೆ ಮುಳ್ಳಾದಳು ಎಂದು ತನ್ನ ಪ್ರಿಯಮತೆಯ ಸ್ನೇಹಿತೆಯನ್ನು ಪಿಜಿಗೆ ನುಗ್ಗಿ ಕೊಲೆ ಮಾಡಿರುವುದು.

 ಬೆಂಗಳೂರು :  ಮೂರು ದಿನಗಳ ಹಿಂದೆ ಕೋರಮಂಗಲದ ಪಿಜಿಯಲ್ಲಿ ನಡೆದಿದ್ದ ಯುವತಿಯ ಕೊಲೆಗೆ ಕಾರಣ ಪ್ರೇಮ ಪ್ರಕರಣ ಎಂದು ತಿಳಿದುಬಂದಿದೆ. ತನ್ನ ಪ್ರೀತಿಗೆ ಮುಳ್ಳಾದಳು ಎಂದು ತನ್ನ ಪ್ರಿಯಮತೆಯ ಸ್ನೇಹಿತೆಯನ್ನು ಪಿಜಿಗೆ ನುಗ್ಗಿ ಪಾಗಲ್‌ ಪ್ರೇಮಿ ಕೊಲೆ ಮಾಡಿದ್ದಾನೆ.

ಮೃತ ಕೃತಿ ಹಾಗೂ ಆರೋಪಿಯ ಪ್ರಿಯತಮೆ ಸ್ನೇಹಿತೆಯರಾಗಿದ್ದು, ಒಂದೇ ಕಂಪನಿಯಲ್ಲಿ ಈ ಗೆಳತಿಯರು ಕೆಲಸ ಮಾಡುತ್ತಿದ್ದರು. ಹೀಗಾಗಿ ಪಿಜಿಗೆ ಆಗಾಗ್ಗೆ ತನ್ನ ಪ್ರಿಯತಮೆ ಭೇಟಿಗೆ ಹೋದಾಗ ಆತನಿಗೆ ಕೃತಿ ಪರಿಚಯವಾಗಿದ್ದಳು. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಅಭಿಷೇಕ್ ನೆಲೆಸಿದ್ದಾನೆ. 

ಇತ್ತೀಚಿಗೆ ವೈಯಕ್ತಿಕ ಕಾರಣಕ್ಕೆ ಪ್ರೇಮಿಗಳ ಮಧ್ಯೆ ಮನಸ್ತಾಪವಾಗಿತ್ತು. ನಿರುದ್ಯೋಗಿಯಾಗಿ ಅಲೆಯುತ್ತಿದ್ದ ಇನಿಯನಿಗೆ ಕೆಲಸಕ್ಕೆ ಸೇರುವಂತೆ ಕೃತಿ ಸ್ನೇಹಿತೆ ಬುದ್ಧಿ ಮಾತು ಹೇಳಿದ್ದಳು. ಆದರೆ ತನಗೆ ಕೆಲಸ ಸಿಕ್ಕಿದೆ ಎಂದು ಆತ ಸುಳ್ಳು ಹೇಳಿದ್ದ ವಿಚಾರವು ಅಭಿಷೇಕ್‌ ಪ್ರಿಯತಮೆಗೆ ಗೊತ್ತಾಯಿತು.ಇದರಿಂದ ಬೇಸರಗೊಂಡ ಆಕೆ, ಅಭಿಷೇಕ್‌ನಿಂದ ಅಂತರ ಕಾಯ್ದುಕೊಳ್ಳಲು ಯತ್ನಿಸಿದ್ದಳು. 

ಈ ಬೆಳ‍ವಣಿಗೆಯಿಂದ ಕೋಪಗೊಂಡ ಅಭಿಷೇಕ್‌, ಪ್ರಿಯತಮೆ ಪಿಜಿ ಬಳಿ ತೆರಳಿ ಗಲಾಟೆ ಮಾಡುತ್ತಿದ್ದ. ಕೊನೆಗೆ ಹತ್ಯೆಗೂ ಎರಡು ದಿನಗಳ ಹಿಂದೆ ನಗರಕ್ಕೆ ಬಂದಿದ್ದ ಅಭಿಷೇಕ್‌, ತನ್ನ ಪ್ರಿಯತಮೆಯನ್ನು ಭೇಟಿಯಾಗಿ ಮನವೊಲೈಕೆ ಯತ್ನಿಸಿ ವಿಫಲವಾಗಿದ್ದ. ಪ್ರಿಯತಮೆಯನ್ನು ಬಾಡಿಗೆ ಮನೆಯಲ್ಲಿ ಇರಿಸಿದ್ದ. ಈ ಸಂಕಷ್ಟದ ಸಮಯದಲ್ಲಿ ಗೆಳತಿಗೆ ಕೃತಿ ನೆರವಾಗಿದ್ದು ಅಭಿಷೇಕ್‌ನನ್ನು ಕೆರಳಿಸಿತ್ತು ಎನ್ನಲಾಗಿದೆ.

ಮನೆಯಲ್ಲಿದ್ದ ಸ್ನೇಹಿತೆಯನ್ನು ಪಿಜಿಗೆ ಕರೆತಂದು ಕೃತಿ ಸಂತೈಸಿದ್ದಳು. ತನ್ನ ಪ್ರೀತಿಗೆ ಕೃತಿ ಮುಳ್ಳಾಗಿದ್ದಾಳೆ ಎಂದು ಕೋಪಗೊಂಡ ಅಭಿಷೇಕ್‌, ಕೃತಿ ಕೊಲೆಗೆ ನಿರ್ಧಿರಿಸಿದ್ದಾನೆ. ಆಗ ಪಿಜಿಗೆ ಮಂಗಳವಾರ ರಾತ್ರಿ ಸೆಕ್ಯುರಿಟಿ ಗಾರ್ಡ್‌ ಇಲ್ಲದನ್ನು ಕಂಡು ಏಕಾಏಕಿ ಒಳ ನುಗ್ಗಿ ಕೃತಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಕೊಂದು ಆತ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ವಿಡಿಯೋ ವೈರಲ್‌:

ಖಾಸಗಿ ಕಂಪನಿ ಉದ್ಯೋಗಿ ಕೃತಿ ಕುಮಾರಿ ಹತ್ಯೆ ಕೃತ್ಯದ ಸಿಸಿಟಿವಿ ಕ್ಯಾಮೆರಾದ ವಿಡಿಯೋ ಬಹಿರಂಗವಾಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ವಿ.ಆರ್‌.ಲೇಔಟ್‌ನ ಭಾರ್ಗವಿ ಸ್ಟೇಯಿಂಗ್ ಹೋಂ ಫಾರ್ ವುಮನ್ಸ್‌ನಲ್ಲಿ ಮಂಗಳವಾರ ರಾತ್ರಿ ಬಿಹಾರ ಮೂಲದ ಕೃತಿ ಕುಮಾರಿ ಅವರನ್ನು ಆಕೆಯ ಸ್ನೇಹಿತ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಪಿಜಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಹತ್ಯೆ ಕೃತ್ಯದ ಎರಡೂವರೆ ನಿಮಿಷಗಳ ವಿಡಿಯೋ ಬಹಿರಂಗವಾಗಿ ವೈರಲ್ ಆಗಿದೆ. ಈ ದೃಶ್ಯಾವಳಿ ಆಧರಿಸಿ ತಲೆಮರೆಸಿಕೊಂಡಿರುವ ಆರೋಪಿ ಅಭಿಷೇಕ್ ಪತ್ತೆಗೆ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿದ್ದಾರೆ. 

ರಕ್ಷಣೆಗೆ ಧಾವಿಸದ ಸ್ನೇಹಿತೆಯರು:

ಪಿಜಿಗೆ ರಾತ್ರಿ 11.14ರ ವೇಳೆ ಪ್ರವೇಶಿಸುವ ಅಭಿಷೇಕ್, ಸೀದಾ ಮೂರನೇ ಮಹಡಿಯಲ್ಲಿದ್ದ ಕೃತಿ ಕೋಣೆಗೆ ತೆರಳಿ ಬಾಗಿಲು ಬಡಿದ್ದಾನೆ. ತನ್ನ ಕೋಣೆಗೆ ಆತನ ಅನಿರೀಕ್ಷಿತ ಆಗಮನ ಕಂಡು ಆತಂಕಗೊಂಡ ಕೃತಿ, ಬಾಗಿಲು ತೆರೆದ ಕೂಡಲೇ ಅಭಿಷೇಕ್‌ಗೆ ಅಲ್ಲಿಂದ ಹೋಗುವಂತೆ ಹೇಳಿ ಬಾಗಿಲು ಹಾಕಿಕೊಳ್ಳಲು ಮುಂದಾಗಿದ್ದಾಳೆ. ಈ ಹಂತದಲ್ಲಿ ಏಕಾಏಕಿ ಆಕೆಗೆ ಚಾಕುವಿನಿಂದ ಅಭಿಷೇಕ್ ಮನಬಂದಂತೆ ಇರಿದಿದ್ದಾನೆ. ಚೀರಾಟ ಕೇಳಿ ಪಿಜಿಯ ಇತರೆ ಕೋಣೆಗಳಿಂದ ಹೊರಬಂದ ಯುವತಿಯರು, ಭೀತಿಯಿಂದ ಕೃತಿ ರಕ್ಷಣೆಗೆ ಧಾವಿಸಿಲ್ಲ. ಕೇವಲ ಎರಡೂವರೆ ನಿಮಿಷದಲ್ಲಿ ಕೃತ್ಯ ಎಸಗಿ ಆತ ಪರಾರಿಯಾಗಿದ್ದಾನೆ ಎಂದು ಮೂಲಗಳು ಹೇಳಿವೆ.

ಭೋಪಾಲ್‌ನಲ್ಲಿ ಆರೋಪಿ ವಶಕ್ಕೆ?

ಹತ್ಯೆ ಕೃತ್ಯ ಎಸಗಿದ ಬಳಿಕ ಮಧ್ಯಪ್ರದೇಶದ ಭೋಪಾಲ್‌ಗೆ ಪರಾರಿಯಾಗಿದ್ದ ಅಭಿಷೇಕ್‌ನನ್ನು ಪತ್ತೆ ಹಚ್ಚಿ ಕೋರಮಂಗಲ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಆದರೆ ಆರೋಪಿಯನ್ನು ವಶಕ್ಕೆ ಪಡೆದಿರುವುದನ್ನು ನಿರಾಕರಿಸಿರುವ ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಅವರು, ಆರೋಪಿ ಪತ್ತೆಗೆ ತನಿಖೆ ನಡೆದಿದೆ ಎಂದಿದ್ದಾರೆ.