ಸಾರಾಂಶ
ರಾಣಿಬೆನ್ನೂರು: ಇಲ್ಲಿನ ವಂದೇ ಮಾತರಂ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ರಾಣಿಬೆನ್ನೂರು ಕಾ ರಾಜಾ ಗಣಪತಿಯ (ಶತಮಾನದ ಸಂಘ ಸೂರ್ಯ ಮಾದರಿ) ಶೋಭಾಯಾತ್ರೆ ಶನಿವಾರ ನಗರದಲ್ಲಿ ವೈಭವಪೂರಿತವಾಗಿ ಜರುಗಿತು. ಸ್ಥಳೀಯ ನಗರಸಭಾ ಕ್ರೀಡಾಂಗಣದ ಬಳಿ ಬೆಳಗ್ಗೆ 11.30 ಸುಮಾರಿಗೆ ಶೋಭಾಯಾತ್ರೆ ಪ್ರಾರಂಭವಾಯಿತು. ನಂತರ ಹಳೇ ಪಿ.ಬಿ. ರಸ್ತೆ, ಸಾಲೇಶ್ವರ ದೇವಸ್ಥಾನ, ಸಿದ್ದೇಶ್ವರ ದೇವಸ್ಥಾನ, ಕುರುಬಗೇರಿ ಕ್ರಾಸ್, ದುರ್ಗಾ ಸರ್ಕಲ್, ಎಂ.ಜಿ. ರಸ್ತೆ, ಚತುರ್ಮುಖಿ ದೇವಸ್ಥಾನ, ದೊಡ್ಡಪೇಟೆ ರಸ್ತೆ, ಸುಭಾಸ ಚೌಕ್, ಬಸವೇಶ್ವರ ದೇವಸ್ಥಾನ, ಕುಂಬಾರ ಓಣಿ, ಓಂ ಸರ್ಕಲ್, ಸಂಗಮ್ ಸರ್ಕಲ್, ಪೋಸ್ಟ್ ಸರ್ಕಲ್, ಮೆಡ್ಲೇರಿ ಕ್ರಾಸ್, ಬಸ್ ನಿಲ್ದಾಣ ಮಾರ್ಗವಾಗಿ ಹರಿಹರ ರಸ್ತೆಯ ಎನ್.ವಿ. ಹೊಟೇಲ್‌ವರೆಗೆ ಸಾಗಿ ಶೋಭಾಯಾತ್ರೆ ಕೊನೆಗೊಂಡಿತು. ಅಲ್ಲಿಂದ ಮೂರ್ತಿಯನ್ನು ಹರಿಹರದ ತುಂಗಭದ್ರಾ ನದಿಗೆ ತೆಗೆದುಕೊಂಡು ಹೋಗಿ ವಿಸರ್ಜಿಸಲಾಯಿತು. ಶೋಭಾಯಾತ್ರೆಯಲ್ಲಿ ರಾಜ್ಯದ ವಿವಿಧ ಜನಪದ ಕಲಾ ತಂಡಳಾದ ಪುರುಷರ ಡೊಳ್ಳು ಕುಣಿತ, ಮಹಿಳಾ ಡೊಳ್ಳು ಕುಣಿತ, ಸಮಾಳ, ಹಲಗೆಮೇಳ, ನಾಸಿಕ ಡೋಲ್, ನಂದಿಕಂಬ, ಭಜನೆ ಜಾಂಜ್, ಅಣಕು ಗೊಂಬೆಗಳು, ಹುಲಿ ಕುಣಿತ, ಪೂಜಾ ಕುಣಿತ, ಛಂಡಿ ಮದ್ದಳೆ, ದೊಡ್ಡ ಹಲಗೆ, ವೀರಗಾಸೆ ಹಾಗೂ ಮಹಿಳೆಯರು ಮತ್ತು ಪುರುಷರ ನೃತ್ಯಕ್ಕಾಗಿ ಆಯೋಜಿಸಲಾಗಿದ್ದ ಡಿಜೆ ಸಂಗೀತ ಶೋಭಾಯಾತ್ರೆಯ ವಿಶೇಷ ಆಕರ್ಷಣೆಯಾಗಿದ್ದವು. ದಾರಿಯುದ್ದಕ್ಕೂ ಯುವ ಜನಾಂಗ ಡಿಜೆ ಸಂಗೀತಕ್ಕೆ ಹೆಜ್ಜೆ ಹಾಕುವ ಮೂಲಕ ಎಲ್ಲರ ಗಮನ ಸೆಳೆದರು. ವಂದೇ ಮಾತರಂ ಸ್ವಯಂ ಸಂಘದ ಅಧ್ಯಕ್ಷ ಪ್ರಕಾಶ ಬುರಡಿಕಟ್ಟಿ, ನಗರಸಭೆ ಸದಸ್ಯರಾದ ಹನುಮಂತಪ್ಪ ಹೆದ್ದೇರಿ, ಪ್ರಕಾಶ ಪೂಜಾರ, ಶೇಖಪ್ಪ ಹೊಸಗೌಡ್ರ, ನಾಗರಾಜ ಅಡ್ಮನಿ, ಮಾಜಿ ಸದಸ್ಯ ರಾಘವೇಂದ್ರ ಚಿನ್ನಿಕಟ್ಟಿ, ವೀರೇಶ ಹೆದ್ದೇರಿ, ಸಚಿನ್ ಬ್ಯಾಡಗಿ, ನಾಗರಾಜ ಕೋರವರ, ಮಂಜುನಾಥ ಬುರಡಿಕಟ್ಟಿ, ಶಿವಕುಮಾರ ಗೌಡಶಿವಣ್ಣನವರ, ಅಜಯ್ ಮಠದ, ನಾಗರಾಜ ತಳವಾರ, ವಿನಯಗೌಡ ಬಾಳನಗೌಡ, ಅನಿಲ ದಾವಣಗೆರೆ, ಜಗದೀಶ ಗೌಡಶಿವಣ್ಣನವರ, ಪ್ರಮೋದ ಯಳವಟ್ಟಿ ಸೇರಿದಂತೆ ಸಹಸ್ರಾರು ಜನರು ಪಾಲ್ಗೊಂಡಿದ್ದರು.