ಕಾಡಾನೆ ತುಳಿತಕ್ಕೆ ವ್ಯಕ್ತಿ ಬಲಿ, ಸಾವಿನ ಸುಳಿವು ನೀಡಿದ ಸಾಕುನಾಯಿ

| Published : Mar 24 2024, 01:35 AM IST

ಕಾಡಾನೆ ತುಳಿತಕ್ಕೆ ವ್ಯಕ್ತಿ ಬಲಿ, ಸಾವಿನ ಸುಳಿವು ನೀಡಿದ ಸಾಕುನಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಮನೆಯಿಂದ ತೋಟಕ್ಕೆ ತೆರಳಿದ ಬೆಳೆಗಾರರೊಬ್ಬರು ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿರುವ ಪ್ರಕರಣ ನಾಲಡಿ ಗ್ರಾಮದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ನಾಪೋಕ್ಲು

ತಮ್ಮ ಮನೆಯಿಂದ ತೋಟಕ್ಕೆ ಹೊರಟಿದ್ದ ಬೆಳೆಗಾರರೊಬ್ಬರು ಕಾಡಾನೆಯ ದಾಳಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿರುವ ಪ್ರಕರಣ, ಕಕ್ಕಬ್ಬೆ ಬಳಿಯ ನಾಲಡಿ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.

ಬೆಳೆಗಾರರು ಮತ್ತು ಸ್ಥಳೀಯರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಗ್ಗುತಪ್ಪ ಸನ್ನಿಧಿಗೆ ಭೇಟಿ ನೀಡಿದ್ದ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರೊಂದಿಗೂ ತಮ್ಮ ಅಳಲು ತೋಡಿಕೊಂಡರು. ಮನೆ ಯಜಮಾನನ್ನು ಕಳೆದುಕೊಂಡ ಕುಟುಂಬ ಶೋಕದಲ್ಲಿ ಮುಳುಗಿದೆ.

ನಾಲಡಿ ಗ್ರಾಮದ, 59ರ ಪ್ರಾಯದ ಬೆಳೆಗಾರ ಕಂಬೆಯಂಡ ರಾಜಾ ದೇವಯ್ಯ ಮೃತ ದುರ್ದೈವಿ. ದೇವಯ್ಯ ಅವರು ಶನಿವಾರ ಮುಂಜಾನೆ ಮನೆಯಿಂದ ಅನತಿ ದೂರದಲ್ಲಿರುವ ತೋಡುಕೆರೆ ಎಂಬಲ್ಲಿ ತಮ್ಮ ಕಾಫಿ ತೋಟಕ್ಕೆ ತೆರಳುತ್ತಿದ್ದರು. ಅವರೊಂದಿಗೆ ಮನೆಯ ಸಾಕುನಾಯಿಯೂ ಇತ್ತು. ಕಾಲ್ನಡಿಗೆಯಲ್ಲೇ ಹೋಗುತ್ತಿದ್ದ ದೇವಯ್ಯ ಅವರ ಮುಂದೆ ಏಕಾಏಕಿ ಕಾಡಾನೆಯೊಂದು ಪ್ರತ್ಯಕ್ಷವಾಗಿದೆ. ಈ ವೇಳೆ ದಿಕ್ಕು ತೋಚದ ದೇವಯ್ಯ, ರಸ್ತೆಯಲ್ಲೇ ಓಡಲು ಪ್ರಯತ್ನಿಸಿದ್ದಾರೆ. ಮತ್ತಷ್ಟು ರೋಷಗೊಂಡಿದ್ದ ಕಾಡಾನೆ ದೇವಯ್ಯ ಅವರನ್ನು ಸುಮಾರು ಅರ್ಧ ಕಿಮೀ ದೂರದವರೆಗೂ ಅಟ್ಟಾಡಿಸಿಕೊಂಡು ಹೋಗಿದೆ. ವೇಗವಾಗಿ ಓಡುತ್ತಿದ್ದ ದೇವಯ್ಯ ಸಮೀಪದ ಕಾಫಿ ತೋಟದೊಳಗೆ ನುಗ್ಗಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆದರೆ, ಅದಾಗಲೇ ಆನೆ ಅವರ ಸಮೀಪಕ್ಕೆ ಬಂದಿತ್ತು. ಕಾಡಾನೆಯು ತೋಟದೊಳಗೆ ದೇವಯ್ಯ ಅವರನ್ನು ಕಾಲಿನಿಂದ ತುಳಿದು ಹಾಕಿದೆ. ಗಂಭೀರ ಗಾಯಗಳಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ದೇವಯ್ಯ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ.

ಸುಳಿವು ನೀಡಿದ ಸಾಕುನಾಯಿ: ದೇವಯ್ಯ ಅವರೊಂದಿಗೆ ಬಂದಿದ್ದ ಸಾಕುನಾಯಿಯು, ಮನೆಗೆ ಮರಳಿ ವಿಚಿತ್ರವಾಗಿ ವರ್ತಿಸತೊಡಗಿತು. ನಾಯಿಯು ತನ್ನಲ್ಲಿ ಏನೋ ಹೇಳಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದರಿತ ದೇವಯ್ಯ ಅವರ ಪತ್ನಿ ನಳಿನಿಗೆ, ತನ್ನ ಗಂಡ ಅಪಾಯದಲ್ಲಿರಬಹುದು ಎಂಬ ಶಂಕೆ ಮೂಡಿತ್ತು. ಕೂಡಲೇ ಅವರು ಪತಿಯ ಮೊಬೈಲ್ಗೆ ಕರೆ ಮಾಡಿದರಾದರೂ, ಅತ್ತಲಿಂದ ಪ್ರತಿಕ್ರಿಯೆ ಇರಲಿಲ್ಲ. ಅನಾಹುತದ ಸುಳಿವರಿತ ನಳಿನಿ ಪತಿಗಾಗಿ ಹುಡುಕುತ್ತಾ ಹೊರಟಾಗ ಮತ್ತೊಮ್ಮೆ ಅದೇ ಆನೆ ಎದುರಾಗಿತ್ತು ಎನ್ನಲಾಗಿದೆ. ಭಯಭೀತಗೊಂಡ ಅವರು ಮರಳಿ ಮನೆಗೆ ಬಂದು ಪುತ್ರ ಮತ್ತು ಸ್ಥಳೀಯರೊಂದಿಗೆ ಪತಿಯ ಶೋಧಕ್ಕೆ ಮುಂದಾದರು. ಈ ವೇಳೆ ತೋಟದ ಮಧ್ಯೆ ಕಾಫಿಗಿಡಗಳ ನಡುವೆ ಮೃತದೇಹ ಪತ್ತೆಯಾಗಿದೆ.

ಕಾಡಾನೆ ಸೆರೆಗೆ ಸ್ಥಳೀಯರ ಪಟ್ಟು: ಮಾಹಿತಿಯರಿತ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಈ ವೇಳೆ ಸ್ಥಳೀಯ ನಾಗರಿಕರು ಅರಣ್ಯ ಇಲಾಖಾಧಿಖಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಪುಂಡಾನೆಗಳನ್ನು ಸೆರೆ ಹಿಡಿಯದಿದ್ದರೆ ಗುಂಡು ಹಾರಿಸದೇ ವಿಧಿಯಿಲ್ಲ ಎಂದು ಆಕ್ರೋಶ ಪ್ರಕಟಿಸಿದರು. ಇಲಾಖೆಯು ಆಸಕ್ತಿ ವಹಿಸಿದರೆ ಪುಂಡಾನೆಗಳ ಸೆರೆ ಕಷ್ಟಸಾಧ್ಯವಿಲ್ಲ. ಆದರೆ, ಉದಾಸೀನ ಇರುವವರೆಗೂ ಜನರ ಪ್ರಾಣಕ್ಕೆ ಬೆಲೆಯೇ ಇಲ್ಲ ಎಂದು ನಾಗರಿಕರು ನೊಂದು ನುಡಿದರು. ಪುಂಡಾನೆಗಳನ್ನು ಬೇರೆಡೆಗೆ ಓಡಿಸಲು ಕ್ರಮ ವಹಿಸುವುದಾಗಿ ಅರಣ್ಯ ಅಧಿಕಾರಿಗಳು ಭರವಸೆ ನೀಡಿದರಾದರೂ, ನಾಗರಿಕರು ಒಪ್ಪಲಿಲ್ಲ. ಅವುಗಳನ್ನು ಸೆರೆ ಹಿಡಿಯಬೇಕು ಎಂದು ಪಟ್ಟುಹಿಡಿದರು.

ಯದುವೀರ್‌ ಭೇಟಿ: ಕಾಡಾನೆ ದಾಳಿಯಿಂದ ಮೃತಪಟ್ಟ ರಾಜಾ ದೇವಯ್ಯ ಅವರ ಮನೆಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ಸಂದರ್ಭ ಮಾಜಿ ಶಾಸಕ ಕೆ. ಜಿ. ಬೋಪಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ನಲ್ಲಚಂಡ ಕಿರಣ್ ಕಾರ್ಯಪ್ಪ, ರೀನಾ ಪ್ರಕಾಶ್, ಚಂಡಿರ ಜಗದೀಶ್, ಬಾರಿಕೆ ನಂದಕುಮಾರ್ ಇನ್ನಿತರರು ಜೊತೆಯಲಿದ್ದರು.

ಶಾಶ್ವತ ಪರಿಹಾರಕ್ಕೆ ಶ್ರಮ: ಕಕ್ಕಬ್ಬೆಯ ಪಾಡಿ ಇಗ್ಗುತಪ್ಪ ಸನ್ನಿಧಿಗೆ ಭೇಟಿ ನೀಡಿದ್ದ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು, ಕಕ್ಕಬ್ಬೆ ಪಟ್ಟಣದಲ್ಲಿ ನಾಗರಿಕರು ತಡೆದರು. ಆನೆ ಹಾವಳಿ, ಜೀವಹಾನಿ ಮತ್ತು ಅರಣ್ಯ ಇಲಾಖೆಯ ನಿರ್ಲಕ್ಷ್ಯ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ನೀಡಲಾಗುವುದು. ಅರಣ್ಯ ಇಲಾಖೆಗೆ ಕಾರ್ಯಾಚರಣೆ ನಡೆಸುವಂತೆ ನಿರ್ದೇಶನ ನೀಡಿದ್ದೇನೆ. ಅರಣ್ಯ ಸಚಿವರ ಜೊತೆ ಮಾತನಾಡಿ ಆನೆ ಸೆರಹಿಡಿಯಲು ತಕ್ಷಣ ಕಾರ್ಯಚಾರಣೆ ಪ್ರಾರಂಭಿಸಲಾಗುವುದು. ಸರ್ಕಾರವು ಆನೆ ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರಕ್ಕಾಗಿ ಶ್ರಮಿಸುತ್ತದೆ ಎಂದು ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.

ಅಪ್ಪ ಪ್ರತಿದಿನ ತೋಟಕ್ಕೆ ಬರುತ್ತಿದ್ದರು. ಇಂದು ಕೂಡ ಎಂದಿನಂತೆ ಬೆಳಗಿನ ಜಾವ ತೋಟಕ್ಕೆ ಬಂದಿದ್ದಾರೆ. ಜೊತೆಯಲ್ಲಿದ್ದ ನಾಯಿ ವಾಪಸ್ ಆಗಿದೆ. ಸ್ವಲ್ಪದರಲ್ಲಿ ತಾಯಿಯು ಜೀವಪಾಯದಿಂದ ಪಾರಾಗಿದ್ದಾರೆ ಎಂದು ಮೃತರ ಮಗ ಅಕ್ಷತ್ ಮುತ್ತಣ್ಣ ಹೇಳಿದರು.

ಪ್ರತಿನಿತ್ಯದಂತೆ ಪತಿ ಬೆಳಗಿನ ಜಾವ ತೋಟಕ್ಕೆ ಬಂದಿದ್ದರು. ಜೊತೆಯಲ್ಲಿದ್ದ ನಾಯಿ ವಾಪಸ್ ಆಗಿದೆ. ನಾನು ತೋಟಕ್ಕೆ ತೆರಳಿದಾಗ ಆನೆ ಕಂಡು ಬೆದರಿ ಹಿಂತಿರುಗಿದ್ದೇನೆ ಎಂದು ಮೃತರ ಪತ್ನಿ ನಳಿನಿ ಹೇಳಿದರು.

ಈ ಹಿಂದೆ ಆನೆ ದಾಳಿಯಿಂದ ನನ್ನ ಕಾಲು ಊನ ಆಗಿದೆ. ಆನೆ ದಾಳಿಯಿಂದ ಪಾರಾಗಿದ್ದೇನೆ. ನನ್ನ ಸಹೋದರ ಈ ದಿನ ಆನೆ ದಾಳಿಯಿಂದ ತಪ್ಪಿಸಿಕೊಳ್ಳಲಾರದೆ ಜೀವ ತೆತ್ತಿದ್ದಾರೆ. ಸರ್ಕಾರ ತಕ್ಷಣ ಪರಿಹಾರ ಕಲ್ಪಿಸಬೇಕು. ಅಮಾಯಕ ಜೀವಗಳು ಬಲಿಯಾಗುವುದನ್ನು ತಪ್ಪಿಸಬೇಕು ಮೃತರ ತಮ್ಮ ಅನು ಸುಬ್ಬಯ್ಯ ಹೇಳಿದರು.

ನಾಲಡಿ ಗ್ರಾಮ ವ್ಯಾಪ್ತಿಯಲ್ಲಿ ಆನೆಗಳ ದಾಂಧಲೆ ಮಿತಿಮೀರುತ್ತಿದ್ದು, ಜನರು ಪ್ರಾಣಾತಂಕದಲ್ಲೇ ದಿನ ಕಳೆಯುವಂತಾಗಿದೆ ಎನ್ನುತ್ತಾರೆ ಸ್ಥಳೀಯರು. ಎರಡು ಮೂರು ಪ್ರಕರಣಗಳಲ್ಲಿ ಕಾಡಾನೆಗಳು ದಾಳಿ ನಡೆಸಿ ಪ್ರಾಣ ಹರಣ ಮಾಡಿವೆ. ಹಲವರು ಗಂಭಿರ ಗಾಯಗೊಂಡಿದ್ದಾರೆ ಎಂದು ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬೊಳಿಯಾಡಿರ ಸಂತುಸುಬ್ರಮಣಿ ಹೇಳಿದರು.

ಇದೇ ವೇಳೆ ಡಿ ಎಫ್ ಓ ಭಾಸ್ಕರ್ , ರೇಂಜರ್ ಟಿ.ಎಂ ರವೀಂದ್ರ, ಫಾರೆಸ್ಟರ್ ಸೋಮಣ್ಣ ಮತ್ತು ಸಿಬ್ಬಂದಿ ದೇವಯ್ಯ ಕುಟುಂಬಕ್ಕೆ 5 ಲಕ್ಷ ರು. ಪರಿಹಾರದ ಚೆಕ್ಕನ್ನು ಹಸ್ತಾಂತರಿಸಿದರು. ನಾಪೋಕ್ಲು ಎಸ್ ಐ ಮಂಜುನಾಥ ಮತ್ತು ಸಿಬ್ಬಂದಿ ಭೇಟಿ ನೀಡಿ ಕೇಸು ದಾಖಲಿಸಿ ಕಾನೂನಿನ ಕ್ರಮ ಕೈಗೊಂಡಿದ್ದಾರೆ.

ಈ ಸಂದರ್ಭ ಪಂಚಾಯ್ತಿ ಅಧ್ಯಕ್ಷೆ ಶಿಲ್ಪ ಲೋಕೇಶ್, ಮಾಜಿ ಅಧ್ಯಕ್ಷ ಸಂಪನ್ ಅಯ್ಯಪ್ಪ, ಕಲಿಯಂಡ ಸಂಪನ್ ಅಯ್ಯಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೋಯಮಾದಂಡ ಹರೀಶ್ ಅಣ್ಣಪ್ಪ, ಕೋಡಿಮಣಿಯಂಡ ಬೋಪಣ್ಣ, ಕುಡಿಯರ ಭರತ್ ಉದಿಯಂಡ ಸುರಾನಾಣಯ್ಯ, ಬಾಚಮಂಡ ಪೂವಣ್ಣ, ಪೊನ್ನಲ್ತಂಡ ಸೋಮಣ್ಣ ಸೇರಿದಂತೆ ಗ್ರಾಮಸ್ಥರು ಇದ್ದರು.