ಬೆಂಗಳೂರಿನಲ್ಲಿ ರೈತರ ಬೃಹತ್ ಸಮಾವೇಶ

| Published : Feb 10 2024, 01:49 AM IST

ಸಾರಾಂಶ

ಫೆ.16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್‌ನಲ್ಲಿ ರೈತರ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಹೋರಾಟ ನಡೆಸಲಾಗುತ್ತದೆ.

ರಾಯಚೂರು: ರೈತ ಹೋರಾಟಗಳ ಅಗ್ರಗಣ್ಯ ನಾಯಕ ಪ್ರೊ.ನಂಜುಂಡಸ್ವಾಮಿ ಜನ್ಮದಿನದ ಸ್ಮರಣಾರ್ಥ ಫೆ.10ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ರೈತ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಾಜ ಮಾಲಿಪಾಟೀಲ್ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರೊ.ನಂಜುಂಡಸ್ವಾಮಿ ವೈಚಾರಿಕತೆ ಎಂದೆಂದಿಗೂ ಆದರ್ಶ. ಸಮಾವೇಶದಲ್ಲಿ ಅವರ ವಿಚಾರಗಳನ್ನು ತಲುಪಿಸುವ ಉದ್ದೇಶವಿದೆ. 10 ಸಾವಿರಕ್ಕೂ ಅಧಿಕ ರೈತರು ಸಮಾವೇಶದಲ್ಲಿ ಭಾಗಿಯಾಗುವರು. ಫೆ.16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್‌ನಲ್ಲಿ ರೈತರ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಹೋರಾಟ ನಡೆಸಲಾಗುತ್ತದೆ. ರಾಜ್ಯದಲ್ಲಿ ತೀವ್ರ ಬರಗಾಲ ಏರ್ಪಟ್ಟಿದ್ದು, ರೈತರಿಗೆ ಬಜೆಟ್ ಮಂಡನೆಯಲ್ಲಿ ವಿಶೇಷ ಅನುದಾನ ಮೀಸಲಿಡುವಂತೆ ಒತ್ತಾಯಿಸಲಾಗುವುದು ಎಂದರು.

ಬರ ಪರಿಹಾರ ವಿತರಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಕಿತ್ತಾಟದಿಂದ ರೈತರಿಗೆ ಅನ್ಯಾಯವಾಗುತ್ತಿದೆ. ರಾಜ್ಯದಲ್ಲಿ ಕೇಂದ್ರ ಬರ ಅಧ್ಯಯನ ತಂಡ ಬಂದು ತಿಂಗಳಾದರೂ ಬರ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ. ರಾಜ್ಯಕ್ಕೆ ಬರ ಪರಿಹಾರ ವಿತರಿಸುವಲ್ಲಿ ಕೇಂದ್ರ ತಾರತಮ್ಯ ಮಾಡುತ್ತಿರುವುದು ಸರಿಯಲ್ಲ. ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರ ಪ್ರತಿಭಟನೆ ನಡೆಸುತ್ತಿರುವುದು ವಿಷಾದನೀಯ ಎಂದರು.

ರಾಜಕಾರಣ ಚುನಾವಣೆಗೆ ಮಾತ್ರ ಸೀಮಿತವಾಗಿರಬೇಕು. ರೈತರ ಬರ ಪರಿಹಾರ ವಿತರಣೆಯಲ್ಲಿ ರಾಜಕಾರಣ ಮಾಡಬಾರದು. ದೇಶದ ಅಭಿವೃದ್ಧಿಯನ್ನು ವಿಶ್ವಮಟ್ಟದಲ್ಲಿ ಗಮನಿಸಿದ ಪ್ರಧಾನಿ ನರೇಂದ್ರ ಮೋದಿ ಬರ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡದೆ ರಾಜ್ಯದ ರೈತರ ಕಷ್ಟ ಅರಿತು ಪರಿಹಾರ ವಿತರಿಸಬೇಕು. ರೈತರ ಬೆಳೆಗಳನ್ನು ಸಂಕಷ್ಟ ಸಮಯದಲ್ಲಿ ಖರೀದಿಸಲು ಸರ್ಕಾರ ಹೊಸ ಕಾನೂನು ಜಾರಿಗೊಳಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಮುಖಂಡರಾದ ಪ್ರಭಾಕರ ಪಾಟೀಲ್, ಬೂದಯ್ಯಸ್ವಾಮಿ, ಮಲ್ಲಣ್ಣ ದಿನ್ನಿ, ರವಿಕುಮಾರ ಸೇರಿ ಇತರರಿದ್ದರು.