ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಆರ್.ಎಸ್.ಎಸ್. ಇರುವುದು ಚಾರಿತ್ರ್ಯವಂತ ಸ್ವಯಂ ಸೇವಕರನ್ನು ಮಾತ್ರ ತಯಾರು ಮಾಡುತ್ತದೆ. ನಮ್ಮ ಸ್ವಯಂ ಸೇವಕರು ಎಲ್ಲಾ ಕ್ಷೇತ್ರಗಳಲ್ಲೂ ಕಾಲಿಟ್ಟು ಸೇವೆ ಸಲ್ಲಿಸುತ್ತಿದ್ದಾರೆ ಎಂದು ಸಂಘ ಪರಿವಾರದ ವಕ್ತಾರರಾದ ಅರುಣ್ ಕುಮಾರ್ ತಿಳಿಸಿದರು.ನಗರದ ಜಿಲ್ಲಾ ಕ್ರೀಡಾಂಗಣದ ಬಳಿ ಇರುವ ಹಾಕಿ ಕ್ರೀಡಾಂಗಣದಲ್ಲಿ ಭಾನುವಾರ ರಾಷ್ಟ್ರೀಯ ಸ್ವಯಂ ಸೇವಾ ಸಂಘ (ಆರ್.ಎಸ್.ಎಸ್.) ನಗರ ಘಟಕದ ವತಿಯಿಂದ ವಿಜಯದಶಮಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪಥ ಸಂಚಲನ ನಡೆಸಿ ನಂತರ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಸೈನ್ಯ ಪ್ರಾರಂಭವಾಗಿದ್ದೆ ೧೯೨೫ರಲ್ಲಿ. ಅದಕ್ಕಿಂತ ಎರಡು ಮೂರು ವರ್ಷಗಳ ಹಿಂದೆ ಬಹಳ ಜೋರಾಗಿ ಸದ್ದು ಮಾಡಿ ಶುರುವಾದ ಕಮ್ಯೂನಿಸ್ಟ್ ಸಂಘಟನೆಗಳು ನೂರು ವರ್ಷ ಆಗಲಿಲ್ಲ. ೧೨ ವರ್ಷಕ್ಕೆ ತುಂಡುಗಳಾದವು. ಅನೇಕ ರಾಜಕೀಯ ಪಕ್ಷಗಳು ಇರಬಹುದು. ಎಲ್ಲವೂ ಕೂಡ ಛಿದ್ರವಾದವು. ಸಾಮಾಜಿಕ ಸಂಘಟನೆ ಎಂದರೇ ರೈತ ಸಂಘಟನೆ ಇರಬಹುದು, ದಲಿತ ಸಂಘಟನೆ ಇರಬಹುದು, ಈ ರೀತಿ ಅನೇಕ ಹೋರಾಟಗಳು ಕೂಡ ಗುಂಪುಗಳಾಗಿ ಒಡೆದು ಹೋಯಿತು. ಸಂಘ ಒಂದಾಗಿ ಉಳಿದುಕೊಂಡು ಬಂದಿದೆ. ೪೦ ದೇಶಗಳಲ್ಲಿ ಸಂಘದ ಸ್ವರೂಪವಿದೆ. ನಾವು ದೀಪಾವಳಿ, ಗಣೇಶನ ಹಬ್ಬ, ಹೋಳಿ, ವಿಜಯದಶಮಿ ಆಚರಣೆ ಮಾಡುತ್ತೇವೆ. ಇದರಿಂದ ಪ್ರೇರಣೆ ಪಡೆದ ಸ್ವಯಂ ಸೇವಕರು ಸಮಾಜದ ಹಲವು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಯಾವುದನ್ನು ಸಹ ಬಿಡಲಿಲ್ಲ. ನಮ್ಮ ಸಮಾಜದ, ನಮ್ಮ ದೇಶದ ಎಲ್ಲಾ ಕ್ಷೇತ್ರಗಳಲ್ಲೂ ಹೋಗುವ ಪ್ರಯತ್ನ ಮಾಡಿದ್ದಾರೆ ಎಂದರು.
ಜೈಲಿನ ಮಧ್ಯದಲ್ಲೂ ಸಂಘದ ಚಟುವಟಿಕೆ ಇದೆ. ಭಿಕ್ಷುಕರು ಮಾತ್ರ ಈ ಸಂಘ ಬಿಟ್ಟಿರಬಹುದು. ದೇವರ ದಯೆಯಿಂದ ನಾವು ಸ್ವಯಂ ಸೇವಕರಾಗಿದ್ದೇವೆ. ಈ ನೂರನೇ ವರ್ಷದ ಸಮಯದಲ್ಲಿ ನಾವು ಇದ್ದೇವೆ. ಈಗ ಜವಾಬ್ದಾರಿ ಹೆಚ್ಚು ಇದೆ. ಹಾಗೇ ಇದು ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದರು. ವಿಜಯದಶಮಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪಥ ಸಂಚಲನವನ್ನು ವಿಭಿನ್ನವಾಗಿ ಹಮ್ಮಿಕೊಂಡಿದ್ದು, ಒಂದು ಕಡೆ ಪಥ ಸಂಚಲನ ಅರವಿಂದ ಶಾಲೆ ಬಳಿಯಿಂದ ಆರಂಭವಾದರೇ, ಮತ್ತೊಂದು ಕಡೆ ಸಂತೇಪೇಟೆ ಶಾಲೆ ಬಳಿಯಿಂದ ಹೊರಟು ನಗರದ ರಾಜಬೀದಿಗಳಲ್ಲಿ ಸಂಚರಿಸಿ ಅರಳೀಕಟ್ಟೆ ವೃತ್ತದ ಬಳಿ ಸಂಗಮವಾಗಿ ನಡೆದುಕೊಂಡು ಬಂದರು. ಪಥ ಸಂಚಲನದ ವೇಳೆ ನಿವಾಸಿಗಳು ಮನೆ ಮುಂದೆ ರಂಗೋಲಿ ಹಾಕಿ ಸ್ವಾಗತ ಕೋರಿದರಲ್ಲದೆ ಹೂವಿನ ಮಳೆಗರೆದರು.ಇನ್ನು ಬಾಲಕರು ಮತ್ತು ಬಾಲಕಿಯರು ಹೋರಾಟಗಾರರ ವೇಷ ಹಾಕಿ ಗಮನ ಸೆಳೆದರು. ಪಥ ಸಂಚಲನದ ನಂತರ ನಗರದ ಹಾಕಿ ಮೈದಾನದಲ್ಲಿ ಸಭಾ ಕಾರ್ಯಕ್ರಮ ಜರುಗಿತು. ಇನ್ನು ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ ಇತರರು ಕೂಡ ಆರ್.ಎಸ್.ಎಸ್. ಬಟ್ಟೆ ಧರಿಸಿ ಗಮನ ಸೆಳೆದರು. ಇದೆ ವೇಳೆ ಹಿರಿಯ ವಕೀಲರಾದ ಎ. ಹರೀಶ್ ಬಾಬು, ವಿಭಾಗ ಕಾರ್ಯವಾಹ ವಿಜಯಕುಮಾರ್, ಅರವಳಿಕೆ ತಜ್ಞ ಡಾ. ಕೆ.ಎ. ನಾಗೇಶ್, ವಿಭಾಗೀಯ ಪ್ರಚಾರಕ ಮಂಜುನಾಥ್, ಗಿರೀಶ್, ನವೀನ್, ದತ್ತ, ಮೋಹನ್ ಕುಮಾರ್, ಸೇರಿದಂತೆ ಇತರರು ಉಪಸ್ಥಿತರಿದ್ದರು.