ವಿಶ್ವಗುರು ಬಸವ ಜಯಂತಿಯಲ್ಲಿ ವೀರಶೈವ ಸಮಾಜವನ್ನು ಕಡೆಗಣಿಸುತ್ತಿರುವುದನ್ನು ವಿರೋಧಿಸಿ ತಾಲೂಕಿನ ವೀರಶೈವ-ಲಿಂಗಾಯತ ಸಂಘ ಸಂಸ್ಥೆಗಳ ಒಕ್ಕೂಟದ ಕಾರ್ಯಕರ್ತರು ಪಟ್ಟಣದ ಮದ್ದೂರು ತಾಲೂಕು ಕಚೇರಿ ಎದುರು ಸೋಮವಾರ ಬೃಹತ್ ಪ್ರತಿಭಟನೆ.

ಕನ್ನಡಪ್ರಭ ವಾರ್ತೆ ಮದ್ದೂರು

ವಿಶ್ವಗುರು ಬಸವ ಜಯಂತಿಯಲ್ಲಿ ವೀರಶೈವ ಸಮಾಜವನ್ನು ಕಡೆಗಣಿಸುತ್ತಿರುವುದನ್ನು ವಿರೋಧಿಸಿ ತಾಲೂಕಿನ ವೀರಶೈವ-ಲಿಂಗಾಯತ ಸಂಘ ಸಂಸ್ಥೆಗಳ ಒಕ್ಕೂಟದ ಕಾರ್ಯಕರ್ತರು ಪಟ್ಟಣದ ತಾಲೂಕು ಕಚೇರಿ ಎದುರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.

ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಮುದಾಯದ ಜನರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಆವರಣದಲ್ಲಿ ಬಸವಣ್ಣನವರ ಭಾವಚಿತ್ರ ಇಟ್ಟು ಬಸವ ಜಯಂತಿ ಆಚರಿಸುವ ಮೂಲಕ ಅಧಿಕಾರಿಗಳ ಬೇಜವಾಬ್ದಾರಿತನ ಖಂಡಿಸಿದರು.

ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಕೆಲ ಕಾಲ ಧರಣಿ ನಡೆಸಿ ಬಸವ ಜಯಂತಿ ಸಂಬಂಧ ಪೂರ್ವಭಾವಿ ಸಭೆ ಕರೆಯದೆ ಸಮುದಾಯದ ಮುಖಂಡರನ್ನು ಅವಮಾನಿಸಲಾಗಿದೆ ಎಂದು ಅಖಿಲ ಭಾರತ ವೀರಶೈವ-ಲಿಂಗಾಯತ ಅಭಿವೃದ್ಧಿ ಸಂಘದ ಅಧ್ಯಕ್ಷ ಜಿ.ಸಿ.ಗೌರಿಶಂಕರ ಆರೋಪಿಸಿದರು.

ಕೇವಲ ಇಂದು ನಡೆದ ಜಯಂತಿ ಮಾತ್ರವಲ್ಲದೇ, ಈ ಹಿಂದೆ ನಡೆದ ಜಯಂತಿಯ ಪೂರ್ವಭಾವಿ ಸಭೆಗಳಿಗೂ ಸಹ ಸಮುದಾಯದ ಜನರನ್ನು ಸಭೆಗೆ ಆಹ್ವಾನಿಸದೆ ಕರ್ತವ್ಯ ಲೋಪ ಮಾಡಿದ್ದಾರೆ ಎಂದು ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ಹಾಗೂ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ತಾಲೂಕು ಆಡಳಿತದಿಂದ ನಡೆದ ಬಸವ ಜಯಂತಿ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕುವುದಾಗಿ ಎಚ್ಚರಿಕೆ ನೀಡಿದರು.

ನಂತರ ಸ್ಥಳಕ್ಕೆ ಧಾವಿಸಿದ ತಹಸೀಲ್ದಾರ್ ಸತ್ತಿಗೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಧನಂಜಯ ಸೇರಿದಂತೆ ಹಲವು ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದರು.

ಬೇರೆ ಜನಾಂಗದ ಮಹನೀಯರ ಜಯಂತಿ ಆಚರಣೆಗೆ ಹೆಚ್ಚು ಆಸಕ್ತಿ ವಹಿಸುವ ತಾಲೂಕು ಆಡಳಿತ, ಬಸವಣ್ಣನವರ ಜಯಂತಿ ಆಚರಣೆ ಬಗ್ಗೆ ನಿರ್ಲಕ್ಷ್ಯ ಧೋರಣೆ ತಳೆದಿದೆ. ಬಸವಣ್ಣನವರು ಮತ್ತು ವೀರಶೈವ ಜನಾಂಗವನ್ನು ಅವಮಾನಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನಲ್ಲಿ ವೀರಶೈವ ಲಿಂಗಾಯತ ಸಮುದಾಯದವರು 25 ಸಾವಿರ ಜನಸಂಖ್ಯೆ ಇದ್ದಾರೆ. ಆದರೆ, ತಾಲೂಕು ಆಡಳಿತ ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿದರು. ನಂತರ ತಹಸೀಲ್ದಾರ್ ಸತ್ತಿಗೇರಿ ಅವರು ಧರಣಿನಿರತರೊಂದಿಗೆ ಮಾತುಕತೆ ನಡೆಸಿದರು.

ಮುಂದಿನ ವರ್ಷ ಬಸವಣ್ಣನವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು. ಮತ್ತು ಇದೇ ತಿಂಗಳು ಇನ್ನೊಂದು ದಿನಾಂಕದಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ ಮಾಡುವ ಮೂಲಕ ಜಯಂತಿ ಆಚರಣೆ ಮಾಡಲಾಗುವುದು ಎಂದು ಮನವೊಲಿಸಿದ ನಂತರ ಧರಣಿಯನ್ನು ವಾಪಸ್‌ ಪಡೆದು ಬಸವ ಜಯಂತಿಯಲ್ಲಿ ಪಾಲ್ಗೊಂಡರು.

ಈ ವೇಳೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಬಿ.ವಿ.ಮಂಜುನಾಥ್, ವೀರಶೈವ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮಹೇಶ್, ಜಗಜ್ಯೋತಿ ಬಸವೇಶ್ವರ ಪತ್ತಿನ ಸಹಕಾರ ಸಂಘದ ಸಿ.ರಾಜಶೇಖರ್, ಶರಣರ ಸಂಘದ ವೇದಿಕೆ ಕೆ.ಕೆ.ಹಳ್ಳಿ ನಂದೀಶ್, ಮುಖಂಡರಾದ ಎಚ್.ಪಿ.ಸ್ವಾಮಿ, ವೀರಭದ್ರಸ್ವಾಮಿ, ತ್ರಿವೇಣಿ, ಕವಿತಾ, ರಶ್ಮಿ, ಸಿದ್ದಮ್ಮ, ಬಸವರಾಜು, ಮಹದೇವ, ಸ್ವಾಮಿ ಇದ್ದರು.