ನೆಲ್ಯಹುದಿಕೇರಿ: ಒತ್ತುವರಿಯಾದ ಹಿಂದೂ ಸ್ಮಶಾನ ಜಾಗ ತೆರವಿಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

| Published : Oct 29 2024, 12:53 AM IST

ನೆಲ್ಯಹುದಿಕೇರಿ: ಒತ್ತುವರಿಯಾದ ಹಿಂದೂ ಸ್ಮಶಾನ ಜಾಗ ತೆರವಿಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ನೆಲ್ಯಹುದಿಕೇರಿ ಗ್ರಾ.ಪಂ. ಎದುರು ಪ್ರತಿಭಟನೆ ನಡೆಯಿತು. ಗ್ರಾ.ಪಂ. ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ವಿವಿಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ನೆಲ್ಯಹುದಿಕೇರಿಯಲ್ಲಿ ಒತ್ತುವರಿಯಾಗಿರುವ ಹಿಂದುಗಳ ಸ್ಮಶಾನ ಜಾಗವನ್ನು ಒತ್ತುವರಿದಾರರಿಂದ ಬಿಡಿಸಿಕೊಡಬೇಕು ಇಲ್ಲದಿದ್ದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸಿ ಸ್ಮಶಾನ ಹೋರಾಟ ಸಮಿತಿ ವತಿಯಿಂದ ನೆಲ್ಯಹುದಿಕೇರಿ ಗ್ರಾ.ಪಂ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು. ಗ್ರಾ.ಪಂ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ವಿವಿಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಸ್ಮಶಾನ ಹೋರಾಟ ಸಮಿತಿ ಪ್ರಮುಖ ಪಿ ಆರ್ ಭರತ್, ನೆಲ್ಯಹುದಿಕೇರಿ ಗ್ರಾಮದಲ್ಲಿ ಬಹುಸಂಖ್ಯಾತ ಹಿಂದುಗಳಿಗೆ ಸ್ಮಶಾನ ಜಾಗವಿಲ್ಲದೇ ಕಾವೇರಿ ನದಿ ದಡದಲ್ಲಿನ ಅಂಗೈಯಗಲದ ಜಾಗದಲ್ಲೇ ಶವಸಂಸ್ಕಾರ ಮಾಡಬೇಕಾದ ಪರಿಸ್ಥಿತಿ ಒದಗಿದೆ. ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ, ಪಂಗಡದವರು ಸೇರಿದಂತೆ ತುಂಡು‌ಭೂಮಿಯಲ್ಲಿ ಮನೆ ನಿರ್ಮಿಸಿ ವಾಸಮಾಡುವವರೇ ಹೆಚ್ಚಾಗಿದ್ದು ಅವರ ಕುಟುಂಬಗಳಲ್ಲಿ ಸಾವು ಸಂಭವಿಸಿದರೆ ಕಾವೇರಿ ನದಿದಡವನ್ನು ಶವಸಂಸ್ಕಾರಕ್ಕೆ‌ ಬಳಸಿಕೊಳ್ಳುವ ಅನಿವಾರ್ಯತೆ ಒದಗಿದೆ. ಮನುಷ್ಯನಿಗೆ ಬದುಕುವ ಹಕ್ಕು ಎಷ್ಟು ಮುಖ್ಯವೋ ಅದೇ ರೀತಿ ಸಾಯುವ ಸಂಧರ್ಭದಲ್ಲಿ ಶವಸಂಸ್ಕಾರವು ಅಷ್ಟೇ ಮುಖ್ಯವಾಗಿದೆ. ಆದರೆ ನೆಲ್ಯಹುದಿಕೇರಿ ಗ್ರಾಮದಲ್ಲಿ ಬಡ ಹಿಂದುಗಳ ಕುಟುಂಬಗಳಲ್ಲಿ ಮರಣ ಸಂಭವಿಸಿದರೆ ಅವರ ಅಂತ್ಯ ಕ್ರಿಯೆ ಮಾಡಬೇಕಾದರೆ ಈ ಹಿಂದೆ ಶವಸಂಸ್ಕಾರ ಮಾಡಿದ ಮೃತದೇಹದ ಮೇಲೆ ಅಂತ್ಯಕ್ರಿಯೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ನೆಲ್ಯಹುದಿಕೇರಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಸುಮಾರು 1.08 ಎಕರೆ ಸ್ಮಶಾನ ಜಾಗ‌ ಖಾಸಗಿ ವ್ಯಕ್ತಿಗಳ ವಶದಲ್ಲಿದೆ. ಹಿಂದುಗಳಿಗೆ ಸ್ಮಶಾನ ಇಲ್ಲದೆ ಪರದಾಡುತ್ತಿರುವ ಸಂದರ್ಭದಲ್ಲಿ ಸ್ಮಶಾನ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಸ್ಮಶಾನ ಜಾಗ ಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಹೋರಾಟ ನಡೆಸಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಮೌನವಹಿಸಿರುವುದು ವಿಪರ್ಯಾಸ. ಈ ನಡುವೆ ದೇವಸ್ಥಾನದ ಹೆಸರಿನಲ್ಲಿ ಹೋರಾಟದ ದಾರಿ ತಪ್ಪಿಸುವ ಹುನ್ನಾರ ನಡೆಯುತ್ತಿದೆ. ನಮ್ಮ ಹೋರಾಟ ಸ್ಮಶಾನ ಜಾಗಕ್ಕಾಗಿ ಮಾತ್ರ ಹೊರತು ಯಾವುದೇ ವ್ಯಕ್ತಿ ಅಥವಾ ದೇವಸ್ಥಾನದ ವಿರುದ್ಧ ಅಲ್ಲ ಎಂದು ಸ್ಪಷ್ಟ ಪಡಿಸಿದರು. ಪರ್ಯಾಯ ವ್ಯವಸ್ಥೆ ಮಾಡಬೇಕು ಇಲ್ಲದಿದ್ದಲ್ಲಿ ಒತ್ತುವರಿಯಾಗಿರುವ ಸ್ಮಶಾನ ಜಾಗವನ್ನು ನೀಡಬೇಕೆಂದು ಒತ್ತಾಯಿಸಿದರು. ತಾಲೂಕು ತಹಸೀಲ್ದಾರ್ ಮೂರು ತಿಂಗಳ ಕಾಲವಕಾಶ ಕೇಳಿದ್ದಾರೆ, ಆದರೆ ಹೋರಾಟ ಸಮಿತಿಯು ಒಂದುವರೆ ತಿಂಗಳುಗಳ ಕಾಲವಕಾಶ ನೀಡಿದ್ದು, ಸಮಸ್ಯೆ ಬಗೆಹರಿಯದಿದ್ದಲ್ಲಿ ದಾಖಲೆ ಇರುವ ಜಾಗದಲ್ಲೇ ಶವಸಂಸ್ಕಾರಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದರು ಹಾಗೂ ಸ್ಥಳಕ್ಕೆ ಕುಶಾಲನಗರ ತಾಲೂಕು ತಹಸೀಲ್ದಾರ್ ಭೇಟಿ‌ ನೀಡಿ ಸಮಸ್ಯೆ ಬಗೆಹರಿಸಬೇಕೆಂದು ಪಟ್ಟು ಹಿಡಿದರು.

ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡುವವರೆಗೂ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದು ಎಚ್ಚರಿಸಿದ ಹಿನ್ನೆಲೆಯಲ್ಲಿ ಕುಶಾಲನಗರ ತಾಲೂಕು ತಹಸೀಲ್ದಾರ್ ಕಿರಣ್ ಗೌರಯ್ಯ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಸ್ಮಶಾನ ಜಾಗಕ್ಕೆ ಒತ್ತಾಯಿಸಿ ಸಾರ್ವಜನಿಕರ ಸಹಿ ಸಂಗ್ರಹಿಸಿದ ಮನವಿ ಪತ್ರವನ್ನು ತಹಸೀಲ್ದಾರ್ ರಿಗೆ ನೀಡಿದರು. ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಗ್ರಾಮಕ್ಕೆ ಸ್ಮಶಾನ ಅತ್ಯಗತ್ಯ ಎಂಬದು ವಾಸ್ತವ. ನೆಲ್ಯಹುದಿಕೇರಿ ಗ್ರಾಮದಲ್ಲಿ ಹಿಂದುಗಳಿಗೆ ಸ್ಮಶಾನ ಅವಶ್ಯಕವಾಗಿದೆ. ಈಗಾಗಲೇ ಸ್ಮಶಾನ ಹೋರಾಟ ಸಮಿತಿಯೊಂದಿಗೆ ಚರ್ಚಿಸಲಾಗಿದೆ. ಮೂರು ತಿಂಗಳುಗಳಲ್ಲಿ ಸಮಸ್ಯೆ ಇತ್ಯರ್ಥವಾಗಲಿದೆ. ಸ್ಮಶಾನ ಜಾಗ ಪತ್ತೆಗೆ ಅಧಿಕಾರಿಗಳು ಮುಂದಾಗಿದ್ದು ಕೂಡಲೇ ಸಮಸ್ಯೆ ಬಗೆಹರಿಯಲಿದೆ ಎಂದು ಆಶ್ವಾಸನೆ ನೀಡಿದ ಬಳಿಕ ಪ್ರತಿಭಟನೆಯನ್ನು ತಾತ್ಕಾಲಿಕ ಹಿಂಪಡೆಯಲಾಯಿತು.

ಈ ಸಂದರ್ಭ ಸ್ಮಶಾನ ಹೋರಾಟ ಸಮಿತಿ ಪ್ರಮುಖರಾದ ಅಪ್ಪುಣಿ, ಮಣಿ, ಆಂತಪ್ಪನ್, ಬೋಜಿ, ಪಿ ಜಿ‌ ಸುರೇಶ್, ಉದಯ, ರಮೇಶ್, ಸುರೇಶ್ ನೆಲ್ಲಿಕಲ್, ಸಂದೀಪ್, ಶಶಿ ಕುಮಾರ್, ಬಿಂದು, ಸರಸು, ಬೇಬಿ, ಶಾಂತ, ಸುಮೇಶ್, ಚಂದ್ರನ್, ಮೋಣಪ್ಪ, ಸೇರಿದಂತೆ ಇನ್ನಿತರರು ಇದ್ದರು.