ಸಾರಾಂಶ
ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ ಕನಕದಾಸರು ಸಮಾನತೆಯ ಸಂದೇಶವನ್ನು ಜಗತ್ತಿಗೆ ಸಾರುವ ಮೂಲಕ ದಾಸ ಶ್ರೇಷ್ಠರಾಗಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್. ದೇವರಾಜ ಶೆಟ್ಟಿ ಅವರು ಹೇಳಿದರು.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ ಕನಕದಾಸರು ಸಮಾನತೆಯ ಸಂದೇಶವನ್ನು ಜಗತ್ತಿಗೆ ಸಾರುವ ಮೂಲಕ ದಾಸ ಶ್ರೇಷ್ಠರಾಗಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್. ದೇವರಾಜ ಶೆಟ್ಟಿ ಅವರು ಹೇಳಿದರು.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ದಾಸಶ್ರೇಷ್ಟ ಭಕ್ತ ಕನಕದಾಸರ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಜಾತಿ ವ್ಯವಸ್ಥೆ ತಾಂಡವಾಡುತ್ತಿದ್ದ ಸಂದರ್ಭದಲ್ಲಿ ಜನ್ಮ ತಾಳಿದ್ದ ಕನಕದಾಸರು ಸಮಾಜದಲ್ಲಿ ನೆಲೆಸಿರುವ ಜಾತಿ ವ್ಯವಸ್ಥೆ ವಿರುದ್ಧ ದೊಡ್ಡ ಹೋರಾಟ ನಡೆಸಿದರಲ್ಲದೆ ಜಾತಿ ಮುಕ್ತ ಸಮಾನತೆ ಸಂದೇಶ ಸಾರುವ ಮೂಲಕ ದಾಸ ಶ್ರೇಷ್ಟರಾಗಿದ್ದಾರೆ ಎಂದರು. ಪಕ್ಷದ ಹಿರಿಯ ಮುಖಂಡ ಹಂಪಾಪುರ ಎಚ್.ಎಸ್. ಪುಟ್ಟೇಗೌಡ ಮಾತನಾಡಿ, ಕನಕದಾಸರು ಶ್ರೀಮಂತಿಕೆ ತ್ಯಾಗ ಮಾಡುವ ಮೂಲಕ ಸಮಾಜದ ಅನಿಷ್ಟ ಪದ್ಧತಿಗಳನ್ನು ತೊಲಗಿಸಲು ಬದುಕು ಮೀಸಲಿಟ್ಟಿದ್ದರು. ದೈವ ಭಕ್ತರಾಗಿದ್ದ ಕನಕದಾಸರು ದೇವರನ್ನೇ ಒಲಿಸಿಕೊಂಡರು. ಅವರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಸುಧಾರಣೆಗೆ ಹೋರಾಟ ನಡೆಸಿದ್ದಾರೆ. ಅವರ ಮಾರ್ಗದಲ್ಲಿ ನಡೆಯಬೇಕು ಎಂದು ಸಲಹೆ ನೀಡಿದರು.ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ ಮಾತನಾಡಿ, ಸಮಾಜ ಸುಧಾರಕರನ್ನು ಆಯಾ ಜಾತಿಗೆ ಸೀಮಿತಗೊಳಿಸುವ ಮೂಲಕ ದೊಡ್ಡ ಅಪಮಾನವನ್ನು ಮಾಡುವ ಕಾರ್ಯ ನಡೆದಿದೆ. ಸಮಾಜ ಸುಧಾರಕರ ಜಯಂತಿ ಮತ್ತಿತರ ಕಾರ್ಯಕ್ರಮಗಳಲ್ಲಿ ಎಲ್ಲಾ ಜಾತಿಯವರು ಭಾಗವಹಿಸುವ ಮೂಲಕ ಅವರ ಸಂದೇಶ, ಸಿದ್ಧಾಂತಗಳನ್ನು ತಮ್ಮ ಬದುಕಿನಲ್ಲಿ ಅನುಷ್ಠಾನಕ್ಕೆ ತಂದುಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದರು.ಈ ವೇಳೆ ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆ.ಎಸ್. ಪುಷ್ಪರಾಜ್ ಅಧ್ಯಕ್ಷತೆ ವಹಿಸಿದ್ದರು. ನಗರ ಮಂಡಲ ಪ್ರಧಾನ ಕೌಶಿಕ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.