ಕಲಿಕಾ ಆಸಕ್ತಿ ಹುಟ್ಟು ಹಾಕುವ ಸೂತ್ರಧಾರನೆ ಶಿಕ್ಷಕ

| Published : Sep 10 2024, 01:33 AM IST

ಸಾರಾಂಶ

ಹುಮನಾಬಾದ್ ಪಟ್ಟಣದ ಲಕ್ಷ್ಮೀ ವೆಂಕಟೇಶ್ವರ ಬಾಲಭಾರತಿ ವಿದ್ಯಾಮಂದಿರ ಶಾಲೆಯಲ್ಲಿ ಆಯೋಜಿಸಿದ ಶಿಕ್ಷಕರ ದಿನಾಚರಣೆಯಲ್ಲಿ ನಿವೃತ್ತ ಶಿಕ್ಷಕ ಪಂಡಿತ ಬಾಳೂರೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹುಮನಾಬಾದ್

ಭರವಸೆ ಹೆಚ್ಚಿಸುವ, ಕನಸನ್ನು ಸಾಕಾರಗೊಳಿಸುವ, ಕಲಿಕಾ ಆಸಕ್ತಿ ಹುಟ್ಟು ಹಾಕುವ ಸೂತ್ರಧಾರನೆ ಶಿಕ್ಷಕ ಎಂದರೆ ತಪ್ಪಾಗಲಾರದು ಎಂದು ನಿವೃತ ಶಿಕ್ಷಕ ಪಂಡಿತ ಬಾಳೂರೆ ಹೇಳಿದರು.

ಪಟ್ಟಣದ ಲಕ್ಷ್ಮೀ ವೆಂಕಟೇಶ್ವರ ಬಾಲಭಾರತಿ ವಿದ್ಯಾಮಂದಿರ ಶಾಲೆಯಲ್ಲಿ ವಿದ್ಯಾರ್ಥಿಗಳು ಆಯೋಜಿಸಿದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿಗಳೇ ನಾಳಿನ ನಾಯಕರು, ಶಿಕ್ಷಕರು ಸಂಚಾಲಕರು ಎಂದು ಹೇಳುವ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿದ ಬಾಳೂರ್‌ ಅವರು ವಿದ್ಯಾರ್ಥಿಗಳು ತಮ್ಮ ಜ್ಞಾನ ಸಂಪಾದಿಸುವ ಕರ್ತವ್ಯಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳಬೇಕು ಎಂದರು.

ರಾಷ್ಟ್ರಾಭಿವೃದ್ಧಿಗೆ ತಮ್ಮ ಶಿಕ್ಷಕರೊಂದಿಗೆ ಸಹಭಾಗಿತ್ವದಲ್ಲಿ ಕೆಲಸ ಮಾಡಬೇಕು ಎಂದು ಒತ್ತಿ ಹೇಳಿದ ಅವರು, ಪ್ರತಿ ವ್ಯಕ್ತಿಯೂ ತಮ್ಮ ಜೀವನದಲ್ಲಿ ತಂದೆ-ತಾಯಿಯ ನಂತರದ ಸ್ಥಾನವನ್ನು ಒಬ್ಬ ಗುರುವಿಗೆ ನೀಡುತ್ತಾರೆ. ಉತ್ತಮ ಶಿಕ್ಷಣ ನೀಡುವುದರ ಜೊತೆಗೆ, ಶಿಕ್ಷಣದ ಮೂಲಾರ್ಥವನ್ನು ತಿಳಿಸಿ ಪ್ರತಿ ವ್ಯಕ್ತಿಯ ಬದಕನ್ನು ಬೆಳಗುವವರು ಗುರುಗಳು ಎಂದು ಹೇಳಿದರು.

ಮುಖ್ಯ ಅತಿಥಿಯಾದ ಬಿ.ಆರ್.ಸಿ ಅಧಿಕಾರಿ ಗೀತಾ ಜಾಜಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕು ಎಂದರೆ ಅವನ ಹಿಂದೆ ಪ್ರಮುಖ ಪಾತ್ರ ವಹಿಸುವುದು ಒಬ್ಬ ಗುರು. ಪ್ರತಿಯೊಬ್ಬರಿಗೂ ಶಿಕ್ಷಣ ಹೇಗೆ ಮುಖ್ಯವೋ, ಹಾಗೆಯೆ ಆ ಶಿಕ್ಷಣ ನೀಡುವ ಗುರುವು ಅಷ್ಟೇ ಮುಖ್ಯ. ಗುರುವಿಲ್ಲದೆ ಗುರಿ ತಲುಪುವುದು ಬಹಳ ಕಷ್ಟ ಎಂದರು.

ಲಕ್ಷ್ಮೀ ವೆಂಕಟೇಶ್ವರ ಶಾಲೆಯ ಕಾರ್ಯದರ್ಶಿ ಶಿವಶಂಕರ ತರನಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ತಂದೆ-ತಾಯಿಯಷ್ಟೇ ಪವಿತ್ರ ಸ್ಥಾನ ಗುರುವಿಗೂ ಇದೆ. ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು ಎಂದ ಅವರು, ಒಂದು ಅಕ್ಷರ ಕಲಿಸಿಕೊಟ್ಟವರೂ ಗುರುಗಳೇ ಎಂಬರ್ಥ ಇಲ್ಲಿನದ್ದು. ಅಂದರೆ, ಬದುಕು ಎಂಬುದೇ ಕಲಿಕೆ. ಜೀವನದ ಪ್ರತಿಯೊಂದು ಹಂತದಲ್ಲೂ ನಮಗೆ ಕಲಿಯುವುದಕ್ಕೆ ಸಿಗುತ್ತದೆ. ಹೀಗೆ ಒಳ್ಳೆಯ ವಿಚಾರಗಳನ್ನು ಕಲಿಯುತ್ತಾ ಮುನ್ನಡೆದಾಗ ಬದುಕು ಇನ್ನಷ್ಟು ಸುಂದರವಾಗಿ ಗೋಚರಿಸುತ್ತಾ ಸಾಗುತ್ತದೆ ಎಂದು ತಿಳಿಸಿದರು.

ಸಂಸ್ಥೆಯ ಸದಸ್ಯ ನಾರಾಯಣ ಚಿದ್ರಿ, ಹಿರಿಯ ಶಿಕ್ಷಕ ಮಲ್ಲಿಕಾರ್ಜುನ ಭಂಗೂರೆ, ಪ್ರೌಢಶಾಲಾ ಮುಖ್ಯಗುರು ಇಂದುಮತಿ ಮಠ, ಪ್ರಾಥಮಿಕ ಮುಖ್ಯಗುರು ವಿದ್ಯಾವತಿ ಭಂಗೂರೆ, ಶರಣಪ್ಪಾ ಹುಲಸೂರೆ, ದಿಲೀಪ ಗಾಯಕವಾಡ, ನಿಜಲಿಂಗಪ್ಪ ಜಕ್ಕಾ, ಶ್ರೀಶೈಲ್ ಬೈನೂರ, ಪಾರ್ವತಿ ಮೈಲಾರೆ, ಸತ್ಯದೇವಿ ಮರಗೂಡ, ಶಿವಕಾಂತಾ ನಾವದಗಿ, ರೋಪಾವತಿ ಸಜ್ಜನಶಟ್ಟಿ, ಸಂಗೀತಾ ಬೈನೂರ, ಸನಾ ಅಂಜುಮ್, ರಾಜಕುಮಾರ ಹೊಸಮನಿ, ಶಾಂತಕುಮಾರ ದೇವಿಂದ್ರಪ್ಪ, ವೀರಶಟ್ಟಿ ಜಿರಗಿ, ಸರಸ್ವತಿ ಪಟವಾದಿ, ರಾಮರಾವ ಕುಲ್ಕರ್ಣಿ, ಜನಾಬಾಯಿ, ಇಂದುಮತಿ, ಶಿವಲಿಲಾ ಸೇರಿದಂತೆ ಅನೇಕರಿದ್ದರು.