ಭಾರತದಲ್ಲಿ ವಿವಿಧ ಭಾಷೆ, ಸಂಸ್ಕೃತಿ, ಉಡುಪು ಮತ್ತು ಆಹಾರ ಪದ್ಧತಿಗಳಿವೆ. ವಿವಿಧ ಜಾತಿ ಮತ್ತು ಧರ್ಮಗಳ ಜನರು ಇಲ್ಲಿ ವಾಸಿಸುತ್ತಿದ್ದಾರೆ. ಆದರೆ ನಾವೆಲ್ಲರೂ ಭಾರತೀಯರು ಎಂಬ ಭಾವನೆ ನಮ್ಮಲ್ಲಿರಬೇಕು. ವಿದೇಶಗಳಿಗೆ ಹೋದಾಗ ನಮ್ಮನ್ನು ಮೊದಲು ಭಾರತೀಯರೆಂದೇ ಗುರುತಿಸುತ್ತಾರೆ. ನಂತರವೇ ನಮ್ಮ ರಾಜ್ಯ, ಊರು ಮತ್ತು ಇತರ ವಿವರಗಳನ್ನು ಕೇಳುತ್ತಾರೆ. ಈ ಕಾರಣದಿಂದ ರಾಷ್ಟ್ರೀಯ ಏಕತೆಯ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು.

ಕನ್ನಡಪ್ರಭ ವಾರ್ತೆ, ತುಮಕೂರು

ವಿವಿಧತೆಯಲ್ಲಿ ಏಕತೆ ಸಾರುವ ಮನೋಭಾವ ಯುವಜನರಲ್ಲಿ ಮೂಡಬೇಕು ಎಂದು ಉಪ ಮುಖ್ಯಮಂತ್ರಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ: ಜಿ. ಪರಮೇಶ್ವರ ಅವರು ಯುವ ಸಮುದಾಯಕ್ಕೆ ಕರೆ ನೀಡಿದರು.

ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ನಗರದ ಗಾಜಿನ ಮನೆಯಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯುವ ಜನತೆಯು ಸಮಾಜವನ್ನು ಒಡೆಯುವ ಶಕ್ತಿಗಳನ್ನು ಮೆಟ್ಟಿ ನಿಂತು, ಭಾರತೀಯತೆಯನ್ನು ಉಳಿಸಿ ಬೆಳೆಸುವ ಪ್ರತಿಜ್ಞೆ ಮಾಡಬೇಕು ಎಂದು ಯುವ ಸಮುದಾಯಕ್ಕೆ ಐಕ್ಯತೆಯ ಸಂದೇಶ ನೀಡಿದರು.

ಯುವಕರೇ ದೇಶದ ಶಕ್ತಿ. ದೇಶವನ್ನು ಕಟ್ಟುವ ಮತ್ತು ಮುನ್ನಡೆಸುವ ಸಾಮರ್ಥ್ಯ ಯುವಜನತೆಯಲ್ಲಿದೆ. ಯುವಕರಿಗೆ ಸೂಕ್ತ ಅವಕಾಶಗಳನ್ನು ಕಲ್ಪಿಸಿ, ಅವರಲ್ಲಿ ನಾಯಕತ್ವದ ಗುಣ, ಕೌಶಲ್ಯ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಮೂಲಕ ದೇಶದ ಭವಿಷ್ಯವನ್ನು ರೂಪಿಸಬೇಕಿದೆ ಎಂದು ಹೇಳಿದರು.

ಯುವಜನೋತ್ಸವದಂತಹ ಕಾರ್ಯಕ್ರಮಗಳು ಯುವಕರಿಗೆ ನಾಡಿನ ಇತಿಹಾಸ, ಸಾಹಿತ್ಯ, ಕ್ರೀಡೆ, ಸಂಸ್ಕೃತಿ ಮತ್ತು ಪರಂಪರೆ ಅರಿವು ಮೂಡಿಸುವುದರ ಜೊತೆಗೆ ಅವರಲ್ಲಿ ರಾಷ್ಟ್ರೀಯ ಮನೋಭಾವನೆ, ನಾಯಕತ್ವದ ಗುಣ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಲು ಸಹಕಾರಿಯಾಗುತ್ತವೆ. ಯುವಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಯುವಜನತೆಯಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಡಿಜಿಟಲ್ ಸಾಕ್ಷರತೆ, ಮಾದಕವಸ್ತುಗಳ ದುರುಪಯೋಗ ಕುರಿತು ಅರಿವು ಮೂಡಿಸುವುದು ಇಂದಿನ ಅಗತ್ಯವಾಗಿದೆ. ನಾಯಕತ್ವದ ಗುಣ ಹೊಂದಿರುವ ಯುವಕರಿಗೆ ಅವಕಾಶಗಳನ್ನು ಕಲ್ಪಿಸುವ ಜೊತೆಗೆ ಅವರಲ್ಲಿ ಸಮಾಜದ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ಸಾಮಾಜಿಕ ಗುಣವನ್ನೂ ಬೆಳೆಸಬೇಕು ಎಂದು ಹೇಳಿದರು.

ರಾಷ್ಟ್ರೀಯ ಏಕತೆ ಮತ್ತು ರಾಷ್ಟ್ರೀಯ ಮನೋಭಾವನೆ ಇಂದಿನ ಸಂದರ್ಭದಲ್ಲಿ ಅತ್ಯಂತ ಮುಖ್ಯವಾಗಿದೆ. ದೇಶ ಮತ್ತು ಸಮಾಜವನ್ನು ಒಡೆಯುವ ಶಕ್ತಿಗಳನ್ನು ಮೆಟ್ಟಿ ನಿಂತು ಭಾರತೀಯತೆ ಮತ್ತು ರಾಷ್ಟ್ರೀಯತೆಯನ್ನು ಉಳಿಸಿ ಬೆಳೆಸುವುದು ಯುವಜನತೆಯ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಭಾರತದಲ್ಲಿ ವಿವಿಧ ಭಾಷೆ, ಸಂಸ್ಕೃತಿ, ಉಡುಪು ಮತ್ತು ಆಹಾರ ಪದ್ಧತಿಗಳಿವೆ. ವಿವಿಧ ಜಾತಿ ಮತ್ತು ಧರ್ಮಗಳ ಜನರು ಇಲ್ಲಿ ವಾಸಿಸುತ್ತಿದ್ದಾರೆ. ಆದರೆ ನಾವೆಲ್ಲರೂ ಭಾರತೀಯರು ಎಂಬ ಭಾವನೆ ನಮ್ಮಲ್ಲಿರಬೇಕು. ವಿದೇಶಗಳಿಗೆ ಹೋದಾಗ ನಮ್ಮನ್ನು ಮೊದಲು ಭಾರತೀಯರೆಂದೇ ಗುರುತಿಸುತ್ತಾರೆ. ನಂತರವೇ ನಮ್ಮ ರಾಜ್ಯ, ಊರು ಮತ್ತು ಇತರ ವಿವರಗಳನ್ನು ಕೇಳುತ್ತಾರೆ. ಈ ಕಾರಣದಿಂದ ರಾಷ್ಟ್ರೀಯ ಏಕತೆಯ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ತಿಳಿಸಿದರು. ಸಂವಿಧಾನ ರಚನೆಯ ಸಂದರ್ಭದಲ್ಲಿ ಡಾ: ಬಿ.ಆರ್. ಅಂಬೇಡ್ಕರ್ ಅವರು ಯಾವುದೇ ಒಂದು ಧರ್ಮ ಅಥವಾ ಜಾತಿಯವರಿಗೆ ಮಾತ್ರ ಅವಕಾಶ ನೀಡಬೇಕು ಎಂದು ಹೇಳಲಿಲ್ಲ. ಪ್ರತಿಯೊಬ್ಬರೂ ತಮ್ಮ ನಂಬಿಕೆ ಮತ್ತು ಧರ್ಮವನ್ನು ಆಚರಿಸುವ ಸ್ವಾತಂತ್ರ್ಯ ವನ್ನು ಸಂವಿಧಾನದಲ್ಲಿ ಒದಗಿಸಲಾಗಿದೆ ಎಂಬುದನ್ನು ಸ್ಮರಿಸಿದ ಅವರು, ಇಂತಹ ವೈವಿಧ್ಯತೆಯ ನಡುವೆಯೂ ನಾವೆಲ್ಲರೂ ಒಂದೇ ಎಂಬ ರಾಷ್ಟ್ರೀಯ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.

ತುಮಕೂರು ಜಿಲ್ಲೆಯ ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಜಿಲ್ಲೆಗೆ ಕೈಗಾರಿಕೆಗಳನ್ನು ತರುವ ಸಂಕಲ್ಪ ಮಾಡಿದ್ದೇನೆ. ಈಗಾಗಲೇ ಹಲವು ಕೈಗಾರಿಕೆಗಳು ಜಿಲ್ಲೆಗೆ ಬರಲು ಮುಂದಾಗಿವೆ. ಗ್ರೀನ್ ಹೈಡ್ರೋಜನ್ ಮತ್ತು ಡೇಟಾ ಬ್ಯಾಂಕ್ ಕ್ಷೇತ್ರದಲ್ಲಿ ಸುಮಾರು 35ಸಾವಿರ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಯೋಜನೆ ಇದೆ. ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಉಪಕರಣ, ಮದ್ದುಗುಂಡು ಮತ್ತು ಕ್ಷಿಪಣಿಗಳ ತಯಾರಿಕೆಗೂ ಕೈಗಾರಿಕೆಗಳನ್ನು ಸ್ಥಾಪಿಸುವ ಕುರಿತು ಇತ್ತೀಚೆಗೆ ಮುಖ್ಯಮಂತ್ರಿ ಹಾಗೂ ಕಂಪನಿಯ ಪ್ರತಿನಿಧಿಗಳೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.

ತುಮಕೂರಿಗೆ ಮೆಟ್ರೋ ರೈಲು ತರಬೇಕೆಂಬ ಪ್ರಯತ್ನ ಹಲವು ವರ್ಷಗಳಿಂದ ನಡೆಯುತ್ತಿದೆ. ಈಗಾಗಲೇ ಇದರ ವಿವರವಾದ ಯೋಜನಾ ವರದಿ(ಡಿಪಿಆರ್) ಸಿದ್ಧವಾಗಿದೆ. ಇತ್ತೀಚೆಗೆ ವಿದೇಶಿ ಹೂಡಿಕೆದಾರರು ತುಮಕೂರಿಗೆ ಬಂದು ಬಂಡವಾಳ ಹೂಡಲು ಆಸಕ್ತಿ ತೋರಿದ್ದು, ಈ ಪ್ರಸ್ತಾವನೆಗೆ ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದಾರೆ. ಇದರಿಂದ ಜಿಲ್ಲೆಯ ಅಭಿವೃದ್ಧಿಗೆ ಮತ್ತಷ್ಟು ವೇಗ ದೊರೆಯಲಿದೆ ಎಂದು ಹೇಳಿದರು. ತುಮಕೂರು ಆತಿಥ್ಯಕ್ಕೆ ಹೆಸರಾಗಿರುವ ಜಿಲ್ಲೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಯುವಕರನ್ನು ಜಿಲ್ಲಾಡಳಿತ ಉತ್ತಮವಾಗಿ ನೋಡಿಕೊಳ್ಳಲಿದೆ. ಯುವಕರ ಯೋಗಕ್ಷೇಮ ನಮಗೆ ಬಹಳ ಮುಖ್ಯ. ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಇಲ್ಲಿಂದ ಹೊಸ ಅನುಭವ, ಜ್ಞಾನ ಮತ್ತು ಕಲಿಕೆಯನ್ನು ಪಡೆದುಕೊಂಡು ಹೋಗಬೇಕು ಎಂದು ಹೇಳಿದರು. ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಜಿ.. ಚಂದ್ರಶೇಖರ್, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಂಟಿ ನಿರ್ದೇಶಕ ಸುಭಾಶ್ ಚಂದ್ರ ಕೆ.ಎಲ್., ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ವಿ. ಅಶ್ವಿಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ(ಪ್ರ) ಸಿ. ಗೋಪಾಲ್, ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಶುಭ, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಿ.ಜಿ. ಸಂತೋಷ, ತಹಸೀಲ್ದಾರ್ ರಾಜೇಶ್ವರಿ ಪಿ.ಎಸ್., ಸೇರಿದಂತೆ ಮತ್ತಿತರ ಅಧಿಕಾರಿಗಳು, ಸ್ಪರ್ಧಾಳುಗಳು, ಸಾರ್ವಜನಿಕರು ಉಪಸ್ಥಿತರಿದ್ದರು.