ಕಾಯಕ ಸಂಸ್ಕೃತಿಯಿಂದ ಗುರುತಿಸಿಕೊಂಡ ಗಾಣಿಗ ಸಮುದಾಯ

| Published : Jun 10 2024, 12:47 AM IST

ಸಾರಾಂಶ

ಗಾಣಿಗ ಸಮುದಾಯ ಜಾತಿಯಿಂದ ಗುರುತಿಸಿಕೊಂಡಿಲ್ಲ. ಬದಲಾಗಿ ಕಾಯಕ ಸಂಸ್ಕೃತಿಯಿಂದ ಗುರುತಿಸಿಕೊಂಡಿದೆ.

ಕೂಡ್ಲಿಗಿ: ಗಾಣಿಗ ಸಮುದಾಯ ಜಾತಿಯಿಂದ ಗುರುತಿಸಿಕೊಂಡಿಲ್ಲ. ಬದಲಾಗಿ ಕಾಯಕ ಸಂಸ್ಕೃತಿಯಿಂದ ಗುರುತಿಸಿಕೊಂಡಿದೆ ಎಂದು ವಿಜಯಪುರ ಗಾಣಿಗ ಸಮುದಾಯದ ವನಶ್ರೀ ಸಂಸ್ಥಾನದ ಪೀಠಾಧ್ಯಕ್ಷ ಡಾ.ಜಯಬಸವ ಕುಮಾರ ಸ್ವಾಮೀಜಿ ತಿಳಿಸಿದರು.

ಅವರು ಶನಿವಾರ ತಾಲೂಕಿನ ಕಾನಹೊಸಹಳ್ಳಿಯ ಗಾಣಿಗ ಸಮುದಾಯ ಭವನದಲ್ಲಿ ಅಖಿಲ ಭಾರತ ಗಾಣಿಗರ ಸಂಘದ ಕೂಡ್ಲಿಗಿ ತಾಲೂಕು ಘಟಕದಿಂದ ಆಯೋಜಿಸಿದ್ದ ವನಶ್ರೀ ಸಂಸ್ಥಾನಮಠದ ಶ್ರೀ ಜಯದೇವ ಜಗದ್ಗುರು ಪುಣ್ಯಸ್ಮರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ದುಡಿಯುವ ವ್ಯಕ್ತಿಗಳನ್ನು ದೇವರು ಎಂದು ಕರೆದ ಬಸವಣ್ಣ ನಮಗೆ ದೊಡ್ಡವರಾಗಿ ಕಾಣುತ್ತಾರೆ. ಸಮಾಜದಲ್ಲಿ ದುಡಿಯದೇ ಇರುವವರು ಶ್ರೇಷ್ಠ, ದುಡಿಯುವವರು ಕನಿಷ್ಠ ಎಂಬುದನ್ನು ತೊಡೆದು ಹಾಕಿದವರು ಬಸವಣ್ಣನವರು ಎಂದರು.

ಮನೆಯಲ್ಲಿ ಕೂಡಿ ಬಾಳುವ ಸಂಸ್ಕೃತಿಯಿಂದ ವಿಮುಖರಾಗಿರುವುದು ನಮ್ಮಲ್ಲಿರುವ ಅಜ್ಞಾನವೇ ಕಾರಣ. ತಮ್ಮ ಮಕ್ಕಳಿಗೆ ಆಸಕ್ತಿಯಂತೆ ಶಿಕ್ಷಣ ಕೊಡಿಸಿ, ನಮ್ಮ ಪೂರ್ವಜರು ಉಳಿಸಿಕೊಂಡು ಬಂದಿದ್ದ ಸಂಬಂಧಗಳ ಮೌಲ್ಯಗಳು ಇಂದು ನಾಟಕೀಯವಾಗುತ್ತಿರುವುದು ದುರಂತವೇ ಸರಿ. ಇಂದು ಹಣದ ಹಿಂದೆ ಜಗುತ್ತು ಓಡುತ್ತಿದೆ. ಈ ಮಾಯೆಯಲ್ಲಿ ತಂದೆ, ತಾಯಿ, ಮಕ್ಕಳ ಪ್ರೀತಿ, ಬಾಂಧವ್ಯ ಮರೆಯಾಗುತ್ತಿದೆ. ಇಳಿವಯಸ್ಸಿನಲ್ಲಿ ಮಕ್ಕಳು ಸಹ ಜೊತೆಯಲ್ಲಿ ಇಲ್ಲದಿರುವುದು ಯಾವ ಸಾಧನೆ ಮಾಡಿದಂತೆ? ಇದನ್ನು ಪೋಷಕರು, ಯುವಕರು ಆತ್ಮವಲೋಕನ ಮಾಡಿಕೊಳ್ಳಬೇಕಾದ ಅಗತ್ಯತೆ ಇದೆ ಎಂದರು.

ಕೂಡ್ಲಿಗಿ ತಾಲೂಕು ಗಾಣಿಗರ ಸಂಘದ ಸಹ ಕಾರ್ಯದರ್ಶಿ ಎ.ಎಸ್. ಕೊಟ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ೧೯೯೯ರಲ್ಲಿ ಸಂಘವನ್ನು ಸ್ಥಾಪಿಸಿದ್ದು, ಈವರೆಗೆ ಸಮಾಜದ ಅಭಿವೃದ್ಧಿಗೆ ಶ್ರಮಿಸಲಾಗಿದೆ. ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಿರಂತರವಾಗಿ ನಡೆಸುತ್ತಿದೆ ಎಂದು ತಿಳಿಸಿದರು.

ಗಾಣಿಗ ಸಮುದಾಯದ ಮುಖಂಡರಾದ ಹಾರಕಬಾವಿ ಎಸ್.ಶೇಖರಪ್ಪ, ಮಹದೇವಪುರ ದಿನ್ನೆ ಮಲ್ಲಿಕಾರ್ಜುನ, ಜೆ.ಸಿ. ಧನಂಜಯ, ಚಿತ್ರದುರ್ಗ ಸೈಟ್ ಬಾಬಣ್ಣ, ಟಿ.ರೇಚಣ್ಣ, ಯಜಮಾನಪ್ಪ, ಹುಲಿಕೆರೆ ಮಲ್ಲಪ್ಪ, ಬಣವಿಕಲ್ಲು ಕೆ.ಬಸವರಾಜ, ನಿವೃತ್ತ ಶಿಕ್ಷಕ ಕೊಟ್ರಪ್ಪ, ಚಿರತಗುಂಡು ಈಶ್ವರಪ್ಪ, ಹಾರಕಬಾವಿ ಕೊಟ್ರೇಶ್, ಕೆ.ಸುಭಾಶ್ಚಂದ್ರ, ಆಲೂರು ಕೆ.ಗುರುಮೂರ್ತಿ, ಹರ್ಷ ಮೆಡಿಕಲ್ಸ್ ಮಂಜುನಾಥ ಉಪಸ್ಥಿತರಿದ್ದರು.

ಎಸ್.ಕೆ. ಕೀರ್ತಿ, ಎಸ್.ಕೆ. ಸ್ಫೂರ್ತಿ ಪ್ರಾರ್ಥಿಸಿದರು. ಹಾರಕಬಾವಿ ಎಸ್. ಕೊಟ್ರೇಶ್ ಸ್ವಾಗತಿಸಿದರು.