ಸಾರಾಂಶ
ಸಮೀಪದ ಹನಮನಾಳ ಹೋಬಳಿಯ ಮಾಲಗಿತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಲಗಿತ್ತಿಯ ಮಠದ ಹತ್ತಿರ ಇರುವ ಆರೋಗ್ಯ ಕೇಂದ್ರದ ಸುತ್ತಮುತ್ತ ಗಿಡಗಂಟಿಗಳು ಬೆಳೆದು ಅನೈರ್ಮಲ್ಯ ತಾಂಡವಾಡುತ್ತಿದೆ. ಗ್ರಾಪಂ ಸದಸ್ಯ, ಅಧಿಕಾರಿಗಳು ನರೇಗಾ ಯೋಜನೆ ಮೂಲಕ ಈ ಆರೋಗ್ಯ ಕೇಂದ್ರದ ಸುತ್ತಮುತ್ತ ಸ್ವಚ್ಛತೆ ಕೈಗೊಳ್ಳದೇ ನಿರ್ಲಕ್ಷ್ಯವಹಿಸಿರುವುದಕ್ಕೆ ಈ ಅವಾಂತರ ಸೃಷ್ಟಿಯಾಗಿದೆ.
ಕನ್ನಡಪ್ರಭ ವಾರ್ತೆ ಹನಮಸಾಗರ
ಸಮೀಪದ ಹನಮನಾಳ ಹೋಬಳಿಯ ಮಾಲಗಿತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಲಗಿತ್ತಿಯ ಮಠದ ಹತ್ತಿರ ಇರುವ ಆರೋಗ್ಯ ಕೇಂದ್ರದ ಸುತ್ತಮುತ್ತ ಗಿಡಗಂಟಿಗಳು ಬೆಳೆದು ಅನೈರ್ಮಲ್ಯ ತಾಂಡವಾಡುತ್ತಿದೆ. ಗ್ರಾಪಂ ಸದಸ್ಯ, ಅಧಿಕಾರಿಗಳು ನರೇಗಾ ಯೋಜನೆ ಮೂಲಕ ಈ ಆರೋಗ್ಯ ಕೇಂದ್ರದ ಸುತ್ತಮುತ್ತ ಸ್ವಚ್ಛತೆ ಕೈಗೊಳ್ಳದೇ ನಿರ್ಲಕ್ಷ್ಯವಹಿಸಿರುವುದಕ್ಕೆ ಈ ಅವಾಂತರ ಸೃಷ್ಟಿಯಾಗಿದೆ. ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯ: ಈ ಆರೋಗ್ಯ ಕೇಂದ್ರಕ್ಕೆ ಗರ್ಭಿಣಿಯರು, ಬಾಣಂತಿಯರು ಭೇಟಿ ನೀಡುತ್ತಾರೆ. ಕೇಂದ್ರದ ಸುತ್ತಮುತ್ತ ಹಾವು, ಚೇಲು ಓಡಾಡುತ್ತವೆ. ಇದರಿಂದ ಗರ್ಭಿಣಿಯರು, ಬಾಣಂತಿಯರ ಮೇಲೆ ದುಷ್ಪರಿಣಾಮ ಬೀರುತ್ತದೆ. ಕೆಲವರು ಕೇಂದ್ರದ ಸುತ್ತಮುತ್ತ ಮಲ, ಮೂತ್ರ ವಿಸರ್ಜನೆ ಮಾಡುತ್ತಾರೆ. ಕಾಯಿಲೆ ವಾಸಿಮಾಡಿಸಿಕೊಳ್ಳಲು ರೋಗಿಗಳು ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುವುದು ಸಹಜ. ಆದರೆ ಈ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದರೆ ಮತ್ತಷ್ಟು ಕಾಯಿಲೆಗಳು ಬರುತ್ತವೆ.ಪಾಲನೆಯಾಗದ ಸ್ವಚ್ಛ ಭಾರತ ಯೋಜನೆ: ಸ್ವಚ್ಛ ಭಾರತ ಎಂಬ ಕೇಂದ್ರ ಸರ್ಕಾರದ ಯೋಜನೆ ಪಾಲನೆಯಾಗುತ್ತಿಲ್ಲ. ನೈರ್ಮಲ್ಯ ಕಾಪಾಡುವಲ್ಲಿ ನಿರ್ಲಕ್ಷ್ಯ ವಹಿಸಿರುವ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಮೂಲ ಸೌಕರ್ಯದ ಕೊರತೆಗೆ ಪಂಚಾಯ್ತಿಯೇ ನೇರ ಹೊಣೆ.ಗ್ರಾಮದಲ್ಲಿ ಎರಡು ಶುದ್ಧ ನೀರಿನ ಘಟಕಗಳಿದ್ದು ಅವುಗಳಲ್ಲಿ ಒಂದು ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಇನ್ನೊಂದು ಘಟಕ ಸುಮಾರು ವರ್ಷಗಳಿಂದ ಹದಗೆಟ್ಟು ಹೋಗಿವೆ. ಚರಂಡಿಗಳು ಅಲ್ಲಲ್ಲಿ ಕಲುಷಿತಗೊಂಡಿದ್ದು, ಅನೇಕ ರೋಗ ರುಜಿನಗಳ ಹೆಚ್ಚಲು ಕಾರಣವಾಗುತ್ತಿದೆ. ಸುಮಾರು ದಿನಗಳಾದರೂ ಜನ ಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಇತ್ತ ಕಡೆ ಗಮನ ಹರಿಸುತ್ತಿಲ್ಲ. ಕೂಡಲೇ ಆರೋಗ್ಯ ಕೇಂದ್ರ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ನಿರ್ಮಲ ಗ್ರಾಮ ನಿರ್ಮಾಣಕ್ಕೆ ಪೂರಕವಾದ ಯೋಜನೆಗಳನ್ನು ನೀಡಿದರೂ ಮೂಲ ಸಮಸ್ಯೆಗಳಿಗೆ ಪರಿಹಾರ ದೊರಕಿಸುವಲ್ಲಿ ಗ್ರಾಮ ಪಂಚಾಯ್ತಿಗಳು ವಿಫಲವಾಗುತ್ತಿರುವುದು ವಿಪರ್ಯಾಸ ಸಂಗತಿ.