ಸಾರಾಂಶ
ಸಿಂಧನೂರಿನಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಅಣಕು ಶವಯಾತ್ರೆ ನಡೆಸಿ, ಅದನ್ನು ದಹಿಸುವ ಮೂಲಕ ಪ್ರತಿಭಟಿಸಲಾಯಿತು.
ಕನ್ನಡಪ್ರಭ ವಾರ್ತೆ ಸಿಂಧನೂರು
ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ರೈತ ವಿರೋಧಿ ಕೃಷಿ ಕಾನೂನುಗಳ ರದ್ದತಿ ಹೋರಾಟ ಸಮಿತಿ ಕ್ವಿಟ್ ಇಂಡಿಯಾ ಚಳವಳಿ ನೆನಪಿಗಾಗಿ ಶುಕ್ರವಾರ ಬಹುರಾಷ್ಟ್ರೀಯ ಕಂಪನಿಗಳೇ ದೇಶ ಬಿಟ್ಟು ತೊಲಗಿ ಎಂಬ ಘೋಷವಾಕ್ಯದೊಂದಿಗೆ ಬಹುರಾಷ್ಟ್ರೀಯ ಕಂಪನಿಗಳ ಅಣಕು ಶವಯಾತ್ರೆ ನಡೆಸಿತು.ಸ್ಥಳೀಯ ಪ್ರವಾಸಿ ಮಂದಿರದಿಂದ ಆರಂಭಗೊಂಡ ಶವಯಾತ್ರೆಯು ಮಹಾತ್ಮಗಾಂಧಿ ವೃತ್ತಕ್ಕೆ ಬಂದು ಬಹುರಾಷ್ಟ್ರೀಯ ಕಂಪನಿಗಳ ಅಣಕು ಶವಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ದಹಿಸಿ ಘೋಷಣೆ ಕೂಗಲಾಯಿತು. ಈ ವೇಳೆ ಅಣಕು ಶವವನ್ನು ರಸ್ತೆಯಲ್ಲಿ ಸುಡಲು ಅನುಮತಿ ನೀಡಲು ಪೊಲೀಸರು ನಿರಾಕರಿಸಿದ್ದರಿಂದ ಪ್ರತಿಭಟನಾಕರರು ಮಾತಿನ ಚಕಮಕಿ ನಡೆಸಿದರು.
ಕಾರ್ಪೋರೇಟ್ ಕಂಪನಿಗಳ ಜೊತೆಗೆ ಕೈಜೋಡಿಸಿದ ಕೇಂದ್ರ ಸರ್ಕಾರ ಅವರ ಅಣತೆಯಂತೆ ನೀತಿ-ನಿಯಮ ರೂಪಿಸುತ್ತಿದೆ. ಪ್ರತಿ ವರ್ಷ ಕೇಂದ್ರ ಸರ್ಕಾರ ಮಂಡಿಸುವ ಬಜೆಟ್ ಶ್ರೀಮಂತ ವರ್ಗಕ್ಕೆ ಮೀಸಲಾಗಿದ್ದು, ರೈತರು ಹಾಗೂ ದುಡಿಯುವ ವರ್ಗವನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಅಂಬಾನಿ, ಅದಾನಿಗಳ ಕೈಗೊಂಬೆಗಳಂತೆ ಪ್ರಧಾನಿ ಮೋದಿ ವರ್ತಿಸುತ್ತಿದ್ದು, ರೈತ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡುವ ಮೂಲಕ ಇಡೀ ಕೃಷಿ ವಲಯವನ್ನು ಕಾರ್ಪೋರೇಟಿಕರಣ ಮಾಡಲಾಗುತ್ತಿದೆ ಎಂದು ಆರೋಪಿಸಿದರು.ವಿವಿಧ ಸಂಘಟನೆಗಳ ಮುಖಂಡರಾದ ಅಮೀನ್ಪಾಷಾ ದಿದ್ದಿಗಿ, ಶರಣಪ್ಪ ಮರಳಿ, ಬಿ.ಎನ್.ಯರದಿಹಾಳ, ಬಸವಂತರಾಯಗೌಡ ಕಲ್ಲೂರು ಮಾತನಾಡಿದರು. ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ರವಾನಿಸಲಾಯಿತು. ಮುಖಂಡರಾದ ಬಾಷುಮಿಯಾ, ಚಂದ್ರಶೇಖರ ಗೊರಬಾಳ, ಬಿ.ಲಿಂಗಪ್ಪ, ರಾಮಯ್ಯ ಜವಳಗೇರಾ, ಬಸವರಾಜ ಬಾದರ್ಲಿ, ನಾಗರಾಜ್ ಪೂಜಾರ್, ಬಸವರಾಜ ಕೊಂಡೆ, ಬಸವರಾಜ ಬೆಳಗುರ್ಕಿ, ಬಸವರಾಜ ಹಂಚಿನಾಳ ಇದ್ದರು.