ಸಾರಾಂಶ
ಅನಿಲ್ ಬಿರಾದರ್
ಕನ್ನಡಪ್ರಭ ವಾರ್ತೆ ಕೊಡೇಕಲ್ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಸಮೀಪದ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಸರಪಳಿ ಕಡಿದು ಬಿದ್ದು ಅಪಾರ ಪ್ರಮಾಣದ ನೀರು ಪೋಲಾದ ಘಟನೆ ಮಾದರಿಯಲ್ಲೇ 2006ರಲ್ಲಿ ಬಸವಸಾಗರ ಜಲಾಶಯದ ಕ್ರಸ್ಟ್ ಗೇಟ್‌ವೊಂದು ಕಿತ್ತುಹೋಗಿ ಆತಂಕ ಸೃಷ್ಟಿಸಿತ್ತು.
ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬಸವಸಾಗರ ಜಲಾಶಯದ ಗೇಟ್(ಐದನೇ ಗೇಟ್) ಕಿತ್ತು ಹೋಗಿದ್ದರಿಂದ 20 ಟಿಎಂಸಿಗೂ ಅಧಿಕ ನೀರು ಪೋಲಾಗಿ ಕೃಷ್ಣಾ ತೀರದ ಕೆಲ ಗ್ರಾಮಗಳಲ್ಲಿ ಪ್ರವಾಹ ಉಂಟಾಗಿತ್ತು. ಆ ವರ್ಷ ಬೆಳೆಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗಿರಲಿಲ್ಲ. ನಿಗಮದ ಎಂಜಿನಿಯರ್‌ಗಳು ಹಾಗೂ ಅಧಿಕಾರಿಗಳು ನಿರಂತರ ಶ್ರಮವಹಿಸಿ ಎರಡು ದಿನದಲ್ಲೇ ನೀರಿನ ಪೋಲು ತಡೆದಿದ್ದರು.ಸ್ಟಾಪ್ ಲಾಕ್ ಸಿಸ್ಟಂನಿಂದ ಅನುಕೂಲ: ಬಸವಸಾಗರ ಜಲಾಶಯಕ್ಕೆ ಸ್ಟಾಪ್ ಲಾಕ್ ಸಿಸ್ಟಮ್ ಅಳವಡಿಸಿದ್ದು, ಇದು ಗೇಟ್‌ಕೈಕೊಟ್ಟ ಸಂದರ್ಭದಲ್ಲಿ ನೀರು ಪೋಲಾಗುವಿಕೆ ತಡೆಯಲು ನೆರವು ನೀಡುತ್ತದೆ. ಜಲಾಶಯದ ಮೇಲೆ 50 ಟನ್ ಸಾಮರ್ಥ್ಯದ ಹೊಸ ಹಳಿಯನ್ನೇ ಕ್ರೇನ್ ಮುಖಾಂತರ ನಿರ್ಮಿಸಿ ನೂತನ ಕ್ರಸ್ಟ್‌ಗೇಟ್ ಅಳವಡಿಸುವ ಮೂಲಕ 2 ದಿನಗಳಲ್ಲೇ ನೀರಿನ ಪೋಲಾಗುವಿಕೆ ತಡೆಯಲಾಗಿತ್ತು. ಆ ಸಂದರ್ಭದಲ್ಲಿ ಕೆಲಕಾಲ ಕ್ರೇನ್ ಕೈಕೊಟ್ಟಿದ್ದರಿಂದ ನೀರು ಪೂರ್ಣ ಪೋಲಾಗುವ ಆತಂಕದ ನಡುವೆಯೂ ಅಧಿಕಾರಿಗಳು ಹಗಲಿರುಳು ದುಡಿದು ಹೊಸಗೇಟ್ ಅಳವಡಿಸಿದ್ದರು. ಆಗ ಅಣೆಕಟ್ಟು ವಿಭಾಗದ ಅಧಿಕಾರಿಯಾಗಿದ್ದವರು ಪ್ರಸ್ತುತ ಸಹಾಯಕ ಎಂಜಿನಿಯರ್ ಆಗಿರುವ ಆರ್.ಎಲ್. ಹಳ್ಳೂರ ಅವರು. ಖರ್ಗೆ ನೀರಾವರಿ ಮಂತ್ರಿ: ಜಲಾಶಯದ ಕ್ರಸ್ಟ್‌ಗೇಟ್ ಸಂಖ್ಯೆ 5 ಕಿತ್ತುಹೋದ್ದರಿಂದ ಆಗ ನೀರಾವರಿ ಮಂತ್ರಿಯಾಗಿದ್ದ ಮಲ್ಲಿಕಾರ್ಜುನ ಖರ್ಗೆ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಜಲಾಶಯದ ಗೇಟ್ ಸಿದ್ಧಪಡಿಸಲು ಕನಿಷ್ಠ ನಾಲ್ಕು ದಿನವಾದರೂ ಸಮಯ ಬೇಕು ಎಂದು ಅಧಿಕಾರಿಗಳು ಹೇಳಿದ್ದರು. ಆದರೆ ಅಧಿಕಾರಿಗಳಿಗೆ ಆದಷ್ಟು ಬೇಗ ಗೇಟ್ ಸರಿಪಡಿಸಿ ಎಂದು ಸೂಚಿಸಿ ಗೇಟ್ ರಿಪೇರಿ ಆಗುವವರೆಗೂ ಖರ್ಗೆ ಅಲ್ಲೇ ವಾಸ್ತವ್ಯ ಹೂಡಿದ್ದರು. ಇದರಿಂದಾಗಿ ನಾಲ್ಕು ದಿನಗಳಲ್ಲಿ ಆಗುವ ಕೆಲಸ 2 ದಿನದಲ್ಲೇ ಪೂರ್ಣಗೊಂಡಿತ್ತು.