ಸಾರಾಂಶ
ಗೋಪಾಲ್ ಯಡಗೆರೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗಅದು ಯಾವುದೇ ಖಾಸಗಿ ಪ್ಲೇ ಹೋಂಗಾಗಲಿ, ನರ್ಸರಿಗಾಗಲಿ, ಕಿಂಡರ್ ಗಾರ್ಡನ್‌ಗಾಗಲಿ, ಮಾಂಟೆಸ್ಸರಿಗಾಗಲಿ ಕಮ್ಮಿ ಇಲ್ಲ. ಭವಿಷ್ಯದ ಕುಡಿಗಳು ಹೊಸ ತಲೆಮಾರಿನ ಶಿಕ್ಷಣಕ್ಕೆ ಅಣಿಯಾಗುವಂತೆ ರೂಪುಗೊಂಡ ಆ ಕಟ್ಟಡವನ್ನು ನೋಡಿದಾಗ ಅಚ್ಚರಿ ಮೂಡಿಸುವಂತೆ ಮಾಡುತ್ತದೆ. ಇದು ಸರ್ಕಾರಿ ಕಟ್ಟಡವಾ? ಹೀಗೆಲ್ಲ ಸಾಧ್ಯವಾ? ಎಂಬೆಲ್ಲ ಉದ್ಘಾರಗಳು ಸಹಜವಾಗಿಯೇ ಮೂಡುತ್ತದೆ. ನಿಜ, ಇದು ಸರ್ಕಾರಿ ಅಂಗನವಾಡಿ ಕಟ್ಟಡಗಳು!
ಆಧುನಿಕ ಸ್ಪರ್ಶಕ್ಕೆ ತೆರೆದುಕೊಂಡು, ಖಾಸಗಿ ನರ್ಸರಿಗೂ ಸಡ್ಡು ಹೊಡೆಯುವಂತೆ ರೂಪುಗೊಂಡ ಈ ಸರ್ಕಾರಿ ಅಂಗನವಾಡಿ ಕಟ್ಟಡಗಳು ಮನ ಸೆಳೆಯುತ್ತಿದೆ. ಹೊರ ನೋಟದಿಂದ ಹಿಡಿದು, ಒಳಕೋಣೆಗಳವರೆಗೆ, ಅಡುಗೆ ಮನೆಯಿಂದ ಹಿಡಿದು ಟಾಯ್ಲೆಟ್‌ವರೆಗೆ ಎಲ್ಲವೂ ಆಧುನಿಕವಾಗಿ ನಿರ್ಮಾಣಗೊಂಡು ಮಕ್ಕಳನ್ನು ಕೈ ಬೀಸಿ ಕರೆಯುತ್ತಿದೆ.ಇದು ಜಿಲ್ಲೆಯಲ್ಲಿ ಸರ್ಕಾರದ ಯೋಜನೆಯಂತೆ ಹೊಸದಾಗಿ ನಿರ್ಮಾಣಗೊಂಡ ಮತ್ತು ನಿರ್ಮಾಣಗೊಳ್ಳುತ್ತಿರುವ ಸರ್ಕಾರಿ ಅಂಗನವಾಡಿ ಕಟ್ಟಡಗಳ ನೋಟ.
ಪ್ರಾಥಮಿಕ ಶಾಲೆಗೆ ಸೇರುವ ಮೊದಲು ನರ್ಸರಿ ಶಾಲೆ ಕಡ್ಡಾಯ ಎಂಬ ಖಾಸಗಿ ಶಾಲೆಗಳ ಅಘೋಷಿತ ನೀತಿಯಿಂದಾಗಿ ನಗರದಲ್ಲಿ ಖಾಸಗಿ ನರ್ಸರಿಗಳು ಮಕ್ಕಳನ್ನು ಸೆಳೆಯುತ್ತಿದೆ. ಇಲ್ಲಿ ಕೂಡ ಸಾವಿರ ಮತ್ತು ಲಕ್ಷಗಳ ಲೆಕ್ಕದಲ್ಲಿಯೇ ಶುಲ್ಕ ಕಟ್ಟಿ ದಾಖಲಿಸಬೇಕು. ಇಲ್ಲಿ ಕಲಿಕೆ ಮುಗಿದರೆ ಮಾತ್ರ ಖಾಸಗಿ ಶಾಲೆಗಳಲ್ಲಿ ಪ್ರಾಥಮಿಕ ತರಗತಿಗೆ ಅವಕಾಶ.ಸರ್ಕಾರ ಕೂಡ ಅಂಗನವಾಡಿ ಹೆಸರಿನಲ್ಲಿ ತೆರೆದ ನರ್ಸರಿ, ಬಾಲವಾಡಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ತೀರಾ ಕಡಿಮೆಯಿತ್ತು. ಗ್ರಾಮೀಣ ಭಾಗದ ಕಡು ಬಡವರು ಮಾತ್ರ ಇಲ್ಲಿನ ಫಲಾನುಭವಿಗಳು. ಬೇರೆಯವರು ಬಾರದಿರುವುದಕ್ಕೆ ಕಾರಣ ಎಂದರೆ ಅಲ್ಲಿನ ವ್ಯವಸ್ಥೆ ಮತ್ತು ಮೂಲಭೂತ ಸೌಲಭ್ಯಗಳ ಕೊರತೆ, ಅರ್ಹ ಶಿಕ್ಷಕರ ಅಲಭ್ಯತೆ. ಸೋರುವ ಕಟ್ಟಡ, ಕಿತ್ತು ಬಂದ ಸಿಮೆಂಟ್ ಗೋಡೆಗಳು, ಮುರಿದ ಬೆಂಚುಗಳು, ಕೊಳಕಾಗಿರುವ ಟಾಯ್ಲೆಟ್ ಅಥವಾ ಬಯಲು ಶೌಚಾಲಯ. ಇಂತಹ ಪರಿಸ್ಥಿತಿಯ ದುರ್ಲಾಭ ಪಡೆಯುವ ಖಾಸಗಿ ವಲಯದ ನರ್ಸರಿ ಶಾಲೆಗಳು ಆಧುನಿಕ ಸೌಲಭ್ಯದ ಕಟ್ಟಡ ಮತ್ತು ವ್ಯವಸ್ಥೆ ಇಲ್ಲದಿದ್ದರೂ ಇರುವ ಕಟ್ಟಡಕ್ಕೆ ನವ ನವೀನ ರೀತಿಯಲ್ಲಿ ಪೇಂಟಿಂಗ್, ಆಕರ್ಷಕ ಬೆಂಚುಗಳು, ಇಂಗ್ಲೀಷ್‌ನಲ್ಲಿಯೇ ಮಾತನಾಡುವ ಟೀಚರ್‌ಗಳು ಸಹಜವಾಗಿಯೇ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಆಕರ್ಷಣೆಯ ಕೇಂದ್ರವಾಗಿದ್ದವು.
ಸುಸಜ್ಜಿತ ಅಂಗನವಾಡಿ ಕಟ್ಟಡ:ಇದನ್ನು ಮನಗಂಡ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಂಗನವಾಡಿ ಕಟ್ಟಡದ ಸ್ವರೂಪವನ್ನು ಬದಲಿಸಲು ನಿರ್ಧರಿಸಿದ್ದು, ಅದಕ್ಕಾಗಿ ರಾಜ್ಯಕ್ಕೆ ಅನ್ವಯ ವಾಗುವಂತೆ ಒಂದು ಮಾದರಿ ಕಟ್ಟಡದ ನಕ್ಷೆಯನ್ನು ಸಿದ್ಧಪಡಿಸಿದೆ.
ಸರ್ಕಾರ ರೂಪಿಸಿರುವ ನಕ್ಷೆ ಪ್ರಕಾರ ಜಿಲ್ಲೆಯಲ್ಲಿ ನಿರ್ಮಿತಿ ಕೇಂದ್ರದ ವತಿಯಿಂದ ನಿರ್ಮಾಣಗೊಂಡಿರುವ ಸರ್ಕಾರಿ ಅಂಗನವಾಡಿ ಕಟ್ಟಡಗಳು ಸುಸಜ್ಜಿತವಾಗಿವೆ, ಮಾತ್ರವಲ್ಲ ಆಕರ್ಷಕವಾಗಿವೆ.2023-24ನೇ ಸಾಲಿನ ಮಾರ್ಚ್ ಅಂತ್ಯಕ್ಕೆ ಮಂಜೂರಾಗಿದ್ದ 20 ಅಂಗನವಾಡಿ ಕಟ್ಟಡಗಳ ಪೈಕಿ 19 ಅಂಗನವಾಡಿ ಕಟ್ಟಡದ ಕೆಲಸವನ್ನು ತಲಾ 20 ಲಕ್ಷ ರು. ವೆಚ್ಚದಲ್ಲಿ ನಿರ್ಮಿತಿ ಕೇಂದ್ರ ಪೂರ್ಣಗೊಳಿಸಿದೆ.
ಕೆಲವೆಡೆ ಶಿಥಿಲಾವಸ್ಥೆಯಲ್ಲಿದ್ದ ಹಳೆಯ ಅಂಗನವಾಡಿ ಕಟ್ಟಡವನ್ನು ತೆರವುಗೊಳಿಸಿ ಅಲ್ಲಿ ಹೊಸದಾಗಿ ನಿರ್ಮಿಸಲಾಗಿದೆ. ಇನ್ನು ಕೆಲವೆಡೆ ಹೊಸದಾಗಿ ಮಂಜೂರಾದ, ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದ ಜಾಗದಲ್ಲಿ ಸ್ವಂತ ಸ್ಥಳದಲ್ಲಿ ಅಂಗನವಾಡಿಯನ್ನು ನಿರ್ಮಿಸಲಾಗಿದೆ.ಒಟ್ಟು 10.2 ಚದರದ ಅಂಗನವಾಡಿ ಕಟ್ಟಡದ ರಚನೆ ಹಾಗೂ ವಿನ್ಯಾಸ ಮೊದಲ ನೋಟದಲ್ಲೇ ನೋಡುಗರ ಮನ ಗೆಲ್ಲುವಂತಿದೆ. ಹಾಲಿ ಇರುವ ಅಂಗನವಾಡಿ ಕಟ್ಟಡಗಳು 4 ರಿಂದ 6 ಚದರೊಳಗೆ ಕಿರಿದಾದ ಸ್ಥಳದಲ್ಲಿದ್ದರೆ, ಆಧುನಿಕ ಅಂಗನವಾಡಿ ಕಟ್ಟಡ ವಿಶಾಲವಾದ ಜಾಗವನ್ನೊಳಗೊಂಡಿದೆ. ಕಟ್ಟಡದ ಪ್ರವೇಶದ್ವಾರದ ಎಡಬದಿ ಪಾದರಕ್ಷೆ ಬಿಡುವ ಜಾಗವಿದ್ದರೆ, ಬಲಬದಿ ವಿಶೇಷ ಚೇತನ ಮಕ್ಕಳ ಆಟಕ್ಕಾಗಿ ಮರಳಿನ ಗುಂಡಿ ನಿರ್ಮಿಸಲಾಗಿದೆ.
ಇದರಿಂದ ಮುಂದೆ ಸಾಗಿದರೆ ಆಧುನಿಕ ಹಾಗೂ ಸುಸಜ್ಜಿತ ಅಡುಗೆ ಮನೆ ಇದೆ. ಸಾಕಷ್ಟು ಗಾಳಿ ಮತ್ತು ಬೆಳಕಿನ ವ್ಯವಸ್ಥೆ ಇರುವ ಗ್ರಾನೈಟ್ ಕಲ್ಲಿನ ಸ್ಲ್ಯಾಬ್, ವಾಲ್ ಟೈಲ್ಸ್, ವಾಷ್ ಬೇಸಿನ್ ಮತ್ತಿತರ ಸೌಲಭ್ಯ ಹೊಂದಿದ ಹೈಜನಿಕ್ ಕಿಚನ್ ಇದಾಗಿದೆ. ಇದರ ಪಕ್ಕದಲ್ಲೇ ಇಂಡಿಯನ್ ಕಮೋಡ್ ವಿತ್ ಫ್ಲೆಷ್, ಹ್ಯಾಂಡ್ ವಾಶ್ ಸೌಲಭ್ಯವಿರುವ ಶೌಚಾಲಯ ಇದೆ.ಎಲ್ಲಕ್ಕಿಂತ ಮುಖ್ಯವಾಗಿ ಆಧುನಿಕ ಅಂಗನವಾಡಿಯಲ್ಲಿ ಗಮನ ಸೆಳೆಯುವುದು ವಿಶಾಲವಾದ ತರಗತಿ ಕೊಠಡಿ 16x17 ಅಳತೆಯ ಕೊಠಡಿಯಲ್ಲಿ ಸುಮಾರು 30 ಮಕ್ಕಳು ಆರಾಮವಾಗಿ ಕುಳಿತು ಪಾಠ ಕೇಳಬಹುದಾಗಿದೆ. ಮಕ್ಕಳಿಗೆ ಅಕ್ಷರ ಸುಲಭವಾಗಿ ಕಾಣುವಂತಾಗಬೇಕು ಎಂಬ ಕಾರಣಕ್ಕೆ ವಿಶಾಲವಾದ ಬ್ಲ್ಯಾಕ್ ಬೋರ್ಡ್ ಕೊಠಡಿಯಲ್ಲಿದೆ. ಗಾಳಿ ಮತ್ತು ಬೆಳಕಿನ ಕೊರತೆಯಾಗದಂತೆ ಫ್ಯಾನ್ ಮತ್ತು ಲೈಟಿಂಗ್ಸ್ ವ್ಯವಸ್ಥೆಯ ಜೊತೆಗೆ ವಿಶಾಲವಾದ ಕಿಟಕಿಯನ್ನೊಳಗೊಂಡ ಕೊಠಡಿ ನಿರ್ಮಾಣಗೊಂಡಿರುವುದು ವಿಶೇಷ. ಅತಿ ಹೆಚ್ಚು ಮಳೆ ಬೀಳುವ ತೀರ್ಥಹಳ್ಳಿ, ಸಾಗರ ತಾಲೂಕಿನಲ್ಲಿ ಮಳೆ ನೀರು ಸುಲಭವಾಗಿ ಹರಿದು ಹೋಗುವಂತೆ ರೂಫಿಂಗ್ ವಿನ್ಯಾಸಗೊಳಿಸಿ ಅದಕ್ಕೆ ವಾಟರ್ ಪ್ರೂಫಿಂಗ್ ಮಾಡಲಾಗಿದೆ.
ಒಟ್ಟಾರೆಯಾಗಿ ಖಾಸಗಿ ವಲಯಕ್ಕೆ ಸೆಡ್ಡು ಹೊಡೆಯುವಂತೆ ಸರ್ಕಾರಿ ಅಂಗನವಾಡಿ ಕಟ್ಟಡಗಳ ನಿರ್ಮಾಣ ಹೊಸ ಶಾಖೆಯಂತೂ ಹೌದು. ಬಾಣಂತಿಯರ ಕೊಠಡಿಸುಮಾರು 8 ಅಡಿ ಅಗಲದ ಮಧ್ಯ ಭಾಗದಿಂದ ಹಾಲ್ ಪ್ರವೇಶಿಸುವ ಎಡಬದಿ ಬಾಣಂತಿಯರ ಕೊಠಡಿ ಇದೆ. ಮಕ್ಕಳನ್ನು ಬಿಡಲು ಹಾಗೂ ಕರೆದುಕೊಂಡು ಹೋಗಲು ಬರುವ ಬಾಣಂತಿಯರು ಅಥವಾ ತಾಯಂದಿರು ಹೊರಗಡೆ ಕಾಯುವುದನ್ನು ತಪ್ಪಿಸಲೆಂದೇ ಈ ಕೊಠಡಿ ನಿರ್ಮಿಸಲಾಗಿದೆ.ಎದ್ದು ಕಾಣುವ ಆರ್ಟ್ ಗ್ಯಾಲರಿ
ಮಕ್ಕಳನ್ನು ಆಕರ್ಷಿಸಲು ಅಂಗನವಾಡಿ ಕಟ್ಟಡದ ಮುಂಭಾಗದಲ್ಲಿ ಎದ್ದು ಕಾಣುವಂತೆ ಮಿಕ್ಕಿ ಮೌಸ್ ಹಾಗೂ ಗಿಡ-ಮರಗಳ ಚಿತ್ರವುಳ್ಳ ಪೈಂಟಿಂಗ್ ಮಾಡಲಾಗಿದೆ. ದೊಡ್ಡದಾದ ಈ ಆರ್ಟ್ ಗ್ಯಾಲರಿ ವಾಲ್ ಮಕ್ಕಳು ಹಾಗೂ ಪೋಷಕರನ್ನು ಮೊದಲ ನೋಟದಲ್ಲೇ ತನ್ನತ್ತ ಸೆಳೆಯುವಂತಿದೆ. ಖಾಸಗಿಯವರ ನರ್ಸರಿಯಲ್ಲಿ ಕಂಡು ಬರುವಂತಹ ಟೈಲ್ಸ್, ಪೈಂಟಿಂಗ್, ರೂಫಿಂಗ್ ಮತ್ತಿತರ ವಿಶೇಷತೆಗಳನ್ನು ಈ ಸರ್ಕಾರಿ ಅಂಗನವಾಡಿ ಕಟ್ಟಡದಲ್ಲೂ ಕಾಣಬಹುದಾಗಿದೆ.ಜಿಲ್ಲೆಯ ಅಂಗನವಾಡಿ ಕಟ್ಟಡಗಳ ಚಿತ್ರಣ:
ಜಿಲ್ಲೆಯಲ್ಲಿ ಒಟ್ಟು 2563 ಅಂಗನವಾಡಿ ಕಾರ್ಯ ನಿರ್ವಹಿಸುತ್ತಿವೆ. ಈ ಪೈಕಿ 2074 ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಇದೆ. 266 ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಗ್ರಾಮ ಪಂಚಾಯಿತಿಗೆ ಸೇರಿದ ಕಟ್ಟಡಗಳಲ್ಲಿ 17, ಸಮುದಾಯ ಭವನಗಳಲ್ಲಿ 65, ಯುವಕ ಮಂಡಳಿಗಳಲ್ಲಿ 2, ಮಹಿಳಾ ಮಂಡಳಿಗಳಲ್ಲಿ 3, ಶಾಲಾ ಕಟ್ಟಡಗಳಲ್ಲಿ 113 ಹಾಗೂ ಇತರೆ ಸ್ಥಳಗಳಲ್ಲಿ 23 ಅಂಗನವಾಡಿಗಳಿವೆ.ಕಳೆದ ವರ್ಷ ಜಿಲ್ಲೆಗೆ 20 ಕಟ್ಟಡ ಮಂಜೂರಾಗಿದ್ದು, ಅವುಗಳಲ್ಲಿ 19 ಕಾಮಗಾರಿ ಮುಗಿದಿದೆ. ಸಾಗರ ಮತ್ತು ತೀರ್ಥಹಳ್ಳಿ ತಾಲೂಕಿನಲ್ಲಿ ತಲಾ 6 ಹಾಗೂ ಶಿವಮೊಗ್ಗ ತಾಲೂಕಿಗೆ 8 ಕಟ್ಟಡ ಮಂಜೂರಾಗಿತ್ತು. ಇದಲ್ಲದೆ ಈ ವರ್ಷ ಮತ್ತೆ 22 ಹೊಸದಾಗಿ ಮಂಜೂರಾಗಿದೆ. ಕಟ್ಟಡ ನಿರ್ಮಾಣಕ್ಕೆ ಒಟ್ಟು 20 ಲಕ್ಷ ರೂಪಾಯಿ ನಿಗದಿ ಪಡಿಸಿದ್ದು ನರೇಗಾದಿಂದ 8 ಲಕ್ಷ ಹಾಗೂ ಇಲಾಖೆಯಿಂದ 12 ಲಕ್ಷ ನೀಡಲಾಗಿದೆ. ಆಧುನಿಕ ಸೌಲಭ್ಯಗಳೊಂದಿಗೆ ನೂತನ ಕಟ್ಟಡ ನಿರ್ಮಾಣಗೊಂಡ ನಂತರ ಸರ್ಕಾರಿ ಅಂಗನವಾಡಿಗೆ ಮಕ್ಕಳ ದಾಖಲೆ ಪ್ರಮಾಣ ಹೆಚ್ಚಾಗಿದೆ. ಮಕ್ಕಳು, ಪೋಷಕರು ಹಾಗೂ ಜನಪ್ರತಿನಿಧಿಗಳಿಗೆ ಸರ್ಕಾರಿ ಅಂಗನವಾಡಿ ಕಟ್ಟಡದ ಹೊಸ ವಿನ್ಯಾಸ ಹಾಗೂ ಸೌಲಭ್ಯ ಸಂತಸ ತಂದಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು - ಬಿ.ಎಚ್.ಕೃಷ್ಣಪ್ಪ ಹೇಳಿದರು.