ಕನ್ನಡಪ್ರಭ ವಾರ್ತೆ ದಾಂಡೇಲಿ

ನಗರದ ಪಿಡಬ್ಲುಡಿ ಪ್ರವಾಸಿಗೃಹದ ಮುಂದೆ ಇರುವ ಕಾಳಿ ನದಿಯ ದಡದ ಗಿಡಗಂಟಿಗಳಲ್ಲಿ ಮೊಸಳೆ ಮನೆ ಮಾಡಿ ಮರಿಗಳಿಗಾಗಿ ಕಾವಲು ಕುಳಿತ ದೃಶ್ಯ ಇದೀಗ ಬೆಳಕಿಗೆ ಬಂದಿದೆ.ನಗರದ ಪಿಡಬ್ಲುಡಿ ಪ್ರವಾಸಿ ಮಂದಿರದ ಮುಂದಿನ ಕಾಳಿ ನದಿಯ ದಂಡೆಯ ಇಕ್ಕೆಲಗಳಲ್ಲಿ ಸುಮಾರು ೪೦ ಮರಿಗಳೊಂದಿಗೆ ಮರಗಳ ಪೊದೆಯಲ್ಲಿ ತನ್ನ ಮರಿಗಳನ್ನು ಕಾಯುತ್ತಿರುವ ಮೊಸಳೆಯಮ್ಮ. ಕಾಳಿ ನದಿಯಿಂದ ಆಹಾರ ಹಿಡಿದು ತಂದು ಮರಿಗಳಿಗೆ ನೀಡುತ್ತಿದೆ. ಅವುಗಳ ರಕ್ಷಣೆಗಾಗಿ ನದಿ ತಟದಲ್ಲಿಯೇ ಠಿಕಾಣಿ ಹುಡಿದೆ. ಕಳೆದ ಸುಮಾರು ಮೂರು ತಿಂಗಳಿಂದ ಮೊಸಳೆ ಅಲ್ಲಿಯೇ ಬಿಡು ಬಿಟ್ಟಿದ್ದು ಮರಗಳ ಪೊದೆಗಳಲ್ಲಿ ತನ್ನ ಮೊಟ್ಟೆಗಳನ್ನು ಸಂರಕ್ಷಿಸುತ್ತಿದ್ದನ್ನು ನೋಡಿರುವುದಾಗಿ, ಈಗ ಅವು ಮರಿಗಳಾಗಿ ಹೊರಗೆ ಬಂದಿರುವುದನ್ನು ನೋಡುವುದೇ ಸಂಭ್ರಮ ಎಂದು ಹೇಳುತ್ತಾರೆ ನೋಡಿದವರು.ಮೊಸಳೆ ಮರಿಗಳನ್ನು ಕಾಯುತ್ತಿರುವ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಕಾಳಿ ನದಿಯಲ್ಲಿ ಈ ಪ್ರದೇಶದಿಂದ ಸುಮಾರು ಒಂದುವರೆ ಕಿಮೀ ದೂರದಲ್ಲಿ ಮೊಸಳೆಯ ಪಾರ್ಕನ್ನು ನಿರ್ಮಾಣ ಮಾಡಲಾಗಿದೆ. ಅಲ್ಲಿ ಒಟ್ಟಿಗೆ ದೊಡ್ಡ ಸಂಖ್ಯೆಯಲ್ಲಿ ಮೊಸಳೆಗಳು, ಸುಮಾರು ನೂರಕ್ಕೂ ಹೆಚ್ಚು ಮೊಸಳೆಗಳು ಕಂಡುಬರುತ್ತವೆ. ಅಪರೂಪಕ್ಕೆ ಕುಳಗಿ ಸೇತುವೆ (ಬ್ರೀಜ್) ಕೆಳಗೆ ಕಂಡು ಬರುತ್ತಿದ್ದ ಮೊಸಳೆ ಈಗ ಪ್ರವಾಸಿ ಮಂದಿರದಲ್ಲಿ ತನ್ನ ಸಂಸಾರವನ್ನು ಪ್ರಾರಂಭಿಸಿದೆ. ಬೀದಿ ನಾಯಿಗಳಿಂದ ಈ ಮೊಸಳೆ ಮರಿಗಳ ರಕ್ಷಣೆ ಅಗತ್ಯವಿದೆ. ಮೊಸಳೆ ಮತ್ತು ಮಾನವನ ಸಂಘರ್ಷ ತಪ್ಪಿಸಲು ಅರಣ್ಯ ಇಲಾಖೆ ಕಳೆದ ಎರಡು ವರ್ಷಗಳ ಹಿಂದೆ ಸುರಕ್ಷತೆಗಾಗಿ ಕಾಳಿ ನದಿಗೊಂಟ ಆಯ್ದ ಸ್ಥಳದಲ್ಲಿ ತಂತಿ ಬೇಲಿಯನ್ನು ನಿರ್ಮಾಣ ಮಾಡಲಾಗಿದೆ.ಮೊಸಳೆ ಪಾರ್ಕ್ ಜಾಗದಿಂದ ಒಂದುವರೆ ಕಿಮೀ ದೂರದಲ್ಲಿ ಮೊಸಳೆ ಮರಿ ಹಾಕಿರುವುದು ಹಾಗೂ ಮೊಸಳೆ ಸಂತತಿ ಹೆಚ್ಚಳದ ಬಗ್ಗೆ ಪ್ರಾಣಿಪ್ರಿಯರು ಹರ್ಷ ವ್ಯಕ್ತಪಡಿಸಿದ್ದಾರೆ.