ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಮಗುವಿನ ಕತ್ತು ಕೊಯ್ದ ತಾಯಿ!

| Published : Feb 10 2024, 01:46 AM IST

ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಮಗುವಿನ ಕತ್ತು ಕೊಯ್ದ ತಾಯಿ!
Share this Article
  • FB
  • TW
  • Linkdin
  • Email

ಸಾರಾಂಶ

ಕಲ್ಲಯ್ಯನಿಂದ ವಿವಾಹ ವಿಚ್ಛೇದನ ಪಡೆದು ಮಕ್ಕಳೊಂದಿಗೆ ಬಂದು ತಾಯಿಯ ಮನೆಯಲ್ಲಿಯೇ ವಾಸವಾಗಿದ್ದ ಜ್ಯೋತಿ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಗುವಿನ ಹತ್ಯೆ ಮಾಡಿದ್ದಾಳೆ.

ಧಾರವಾಡ: ಐದು ವರ್ಷದ ಅಂಗವಿಕಲ ಬಾಲಕಿಯನ್ನು ಕತ್ತು ಕುಯ್ದು ಗುರುವಾರ ಹತ್ಯೆಗೈದ ಪ್ರಕರಣದಲ್ಲಿ ಶಂಕೆ ನಿಜವಾಗಿದ್ದು, ತಾಯಿಯೇ ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿ ಬರುತ್ತಿರುವ ಹಿನ್ನೆಲೆಯಲ್ಲಿ ಮಗುವನ್ನು ಬೀಭತ್ಸ ರೀತಿಯಲ್ಲಿ ಹತ್ಯೆಗೈದಿದ್ದಾಗಿ ದೂರು ದಾಖಲಾಗಿದೆ.

ಕಮಲಾಪುರ ಬಡಾವಣೆಯ ನಿವಾಸಿ ಜ್ಯೋತಿ ಹೆತ್ತ ಕರುಳ ಕತ್ತು ಕುಯ್ದ ಮಹಾತಾಯಿ!

ಗುರುವಾರ ರಾತ್ರಿ ಜ್ಯೋತಿಯನ್ನು ಪೊಲೀಸರು ಸಂಶಯದ ಮೇಲೆ ಕರೆದಂತಾಗ ಕರುಳು ಹಿಂಡುವ ರೀತಿಯಲ್ಲಿ ಅಳುತ್ತಿದ್ದಳು. ಈ ಮಹಿಳೆಯ ಅಳು ನೋಡಿದರೆ, ಪಾಪಾ ಯಾವುದೋ ತೊಂದರೆಯಾಗಿದೆ ಎಂದು ಭಾವಿಸಬೇಕು. ಆದರೆ, ವಿಚಾರಣೆ ನಂತರ ಆಕೆ ಮಾಡಿರುವ ಕೃತ್ಯ ಕೇಳಿ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ತರಕಾರಿ ಕತ್ತರಿಸುವ ಈಳಿಗೆಯಿಂದ ವಿಕಲಚೇತನ ಮಗುವಿನ ಕತ್ತು ಕುಯ್ದು ಹತ್ಯೆ ಮಾಡಿದ್ದು ಪೊಲೀಸ್‌ ತನಿಖೆಯಿಂದ ಬಯಲಾಗಿದೆ.

ಏಳು ವರ್ಷಗಳ ಹಿಂದೆ ಸವದತ್ತಿಯ ಕಲ್ಲಯ್ಯ ಹಿರೇಮಠ ಹಾಗೂ ಕಮಲಾಪುರ ಬಡಾವಣೆಯ ಜ್ಯೋತಿ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಐದು ವರ್ಷಗಳ ಹಿಂದೆ ಅವಳಿ-ಜವಳಿ ಹೆಣ್ಣು ಮಕ್ಕಳಾಗಿದ್ದವು. ಅದರಲ್ಲಿ ಒಂದು ಹೆಣ್ಣು ಮಗು ಸಹನಾಳಿಗೆ ಎರಡೂ ಕಾಲುಗಳ ಸ್ವಾದೀನ ಇರಲಿಲ್ಲ. ಕೊಂಚ ಮಂದಬುದ್ಧಿಯವಳೂ ಆಗಿದ್ದಳು. ದಂಪತಿ ಮಧ್ಯೆ ಜಗಳ ಶುರುವಾಗಿ ಅದು ವಿಚ್ಛೇದನ ವರೆಗೂ ಹೋಯಿತು.

ಕೊನೆಗೆ ಕಲ್ಲಯ್ಯನಿಂದ ವಿವಾಹ ವಿಚ್ಛೇದನ ಪಡೆದ ಜ್ಯೋತಿ ಮಕ್ಕಳೊಂದಿಗೆ ಬಂದು ತಾಯಿಯ ಮನೆಯಲ್ಲಿಯೇ ವಾಸವಾಗಿದ್ದಳು. ಎರಡು ವರ್ಷಗಳ ಹಿಂದೆ ಹುಬ್ಬಳ್ಳಿಯ ನವನಗರದ 22 ವರ್ಷದ ರಾಹುಲ್ ತೆರದಾಳ ಯುವಕನೊಂದಿಗೆ ಸ್ನೇಹ ಬೆಳೆಸಿಕೊಂಡ ಜ್ಯೋತಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಗುರುವಾರ ಸಂಜೆ ರಾಹುಲ್ ಮನೆಗೆ ಬಂದಿದ್ದ. ಇದೇ ವೇಳೆ ಇಬ್ಬರೂ ಸೇರಿ ಸಹನಾಳ ಕತ್ತು ಕತ್ತರಿಸಲಾಗಿದೆ. ಮಗು ಮೇಲಿಂದ ಬಿದ್ದಿದೆ ಎಂದು ಜ್ಯೋತಿ ಜಿಲ್ಲಾಸ್ಪತ್ರೆಗೆ ಹೋಗಿದ್ದಳು. ಆದರೆ, ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ತಾಯಿ ಜ್ಯೋತಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಮಗುವಿನ ಕತ್ತನ್ನು ಕೊಯ್ದಿರುವುದು ಖಚಿತವಾಗಿದೆ.

ಈ ಮಧ್ಯೆ ಕಲ್ಲಯ್ಯನನ್ನು ಪ್ರೀತಿಸಿ ಮದುವೆಯಾಗುವುದಕ್ಕೂ ಮುಂಚೆ ಜ್ಯೋತಿ ಮತ್ತೊಂದು ಮದುವೆ ಆಗಿದ್ದಳು. ಆತನೊಂದಿಗೂ ಸಂಸಾರ ಮಾಡದೇ ಕಲ್ಲಯ್ಯನೊಂದಿಗೆ ಮದುವೆಯಾಗಿದ್ದಳು. ಆಕೆಯ ಪ್ರೀತಿಯ ಜಾಲಕ್ಕೆ ಬಿದ್ದ ಕಲ್ಲಯ್ಯ ಮನೆಯವರ ವಿರೋಧದ ನಡುವೆಯೂ ಮದುವೆಯಾಗಿದ್ದನು. ಆದರೆ ಇದೀಗ ಆತನಿಗೂ ವಿಚ್ಛೇದನ ನೀಡಿ ಮತ್ತೊಬ್ಬನ ಸಂಗ ಮಾಡಿ ಕೊನೆಗೆ ತನ್ನ ಮಗಳನ್ನೇ ಕೊಲೆಗೈದು ತಾಯಿ ಎನ್ನುವ ಪದಕ್ಕೆ ಅಪವಾದ ತಂದಿದ್ದಾಳೆ. ಪ್ರಸ್ತುತ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜ್ಯೋತಿ ಹಾಗೂ ರಾಹುಲ್‌ ಇಬ್ಬರನ್ನು ಬಂಧಿಸಿದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.