ಭಾವೈಕತೆಯ ಮೊಹರಂ ಆಚರಣೆ

| Published : Jul 18 2024, 01:36 AM IST

ಸಾರಾಂಶ

ಬಲಿದಾನದ ಪ್ರತೀಕವಾದ ಮೊಹರಂ ಹಬ್ಬವನ್ನು ಜಿಲ್ಲಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಲಿದಾನದ ಪ್ರತೀಕವಾದ ಮೊಹರಂ ಹಬ್ಬವನ್ನು ಜಿಲ್ಲಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಿದರು.

ಅದರಲ್ಲೂ ಬಾಗಲಕೋಟೆ ಸಮೀಪದ ಮುರನಾಳ ಪುನರ್ವಸತಿ ಕೇಂದ್ರದಲ್ಲಿ ಮಕಾನಗಳಲ್ಲಿ ದೇವರುಗಳನ್ನು ಬಟ್ಟೆಗಳಿಂದ ಸಿಂಗರಸಿ ಪ್ರತಿಷ್ಠಾಪಿಸಲಾಗಿತ್ತು. ಅವುಗಳಲ್ಲಿ ಹಸ್ತದ ಪಂಜಾಗಳು, ಡೋಲಿಗಳು,ಪ್ರಮುಖವಾಗಿದ್ದವು. ಸಮಸ್ತ ಜನಾಂಗದ ಜನರು ಅಲಾಯಿ ದೇವರುಗಳ ದರ್ಶನವನ್ನು ಪಡೆದು, ಸಕ್ಕರೆ ನೈವೇದ್ಯ ಮಾಡಿ ಕಾಣಿಕೆಗಳನ್ನು ಸಮರ್ಪಿಸಿದರು,

ಮೊಹರಂ ಕೊನೆಯ ದಿನವಾದ ಬುಧವಾರ ಬೆಳಿಗ್ಗೆ ದೇವರುಗಳಿಗೆ ಹೂ ಕಟ್ಟಿ ವಿಶೇಷ ಪೂಜೆ ಸಲ್ಲಿಸಿ ನಂತರ ಬೆಂಕಿಯ ಹಾಯ್ದು ಗ್ರಾಮದ ಅಗಸಿಯಲ್ಲಿ ಹಿರೆಮಸೂತಿಯಲ್ಲಿನ ದೇವರುಗಳು ಹಾಗೂ ಪಿಂಜಾರ ಮಸೂತಿಯಲ್ಲಿ ದೇವರುಗಳು ಪರಸ್ಪರ ಭೇಟಿಯಾಗಿ ಗ್ರಾಮದಲ್ಲಿರುವ ಶ್ರೀ ಮಳೆರಾಜೇಂದ್ರಸ್ವಾಮಿ ಮಠಕ್ಕೆ, ಗ್ರಾಮದೇವಿ ದೇವಸ್ಥಾನ, ಶ್ರೀ ಈಶ್ವರ ಹಾಗೂ ಮಾರುತಿ ದೇವಸ್ಥಾನ ನಂತರ ಬಸವೇಶ್ವರ ಮತ್ತು ಬೀರಲೆಂಗೇಶ್ವರ ದೇವಸ್ಥಾನಕ್ಕೆ ತೆರಳಿ ಭೇಟಿ ನೀಡಿದವು. ಮರಳಿ ಹಿರೇ ಮಸೂತಿಗೆ ಆಗಮಿಸಿದ ದೇವರುಗಳು ಅಲ್ಲಿ ಹಾಗೂ ಹೋಗುಗಳ ಬಗ್ಗೆ ಪ್ರಶ್ನೆ ಹೇಳಿಕೆಗಳು ನಡೆದವು.

ನಂತರ ಹಿರೇ ಮಸೂತಿಯ ಪ್ರವೇಶಕ್ಕೂ ಮುನ್ನ ನೀರು ತುಂಬಿಟ್ಟಿದ್ದ ಐದು ತಂಬಿಗಳಲ್ಲಿ ಅವುಗಳಲ್ಲಿ ಮನಸ್ಸಿಗೆ ಬಂದ ತಂಬಿಗೆ ಹಿಡಿದು ನೀರು ಚೆಲ್ಲುವ, ಚಿಮ್ಮುವ,ಮೂಲಕ ವರ್ಷದ ಮಳೆ ಸೂಚನೆ ನೀಡಿದ್ದು ವಿಶೇಷವಾಗಿತ್ತು.

ಸಂಜೆ ದೇವರುಗಳು ಗ್ರಾಮದಲ್ಲಿನ ಭಕ್ತರ ಮನೆಗೆ ಭೇಟಿ ನೀಡಿದ ನಂತರ ಹಿರೇ ಮಸೂತಿ ಹಾಗೂ ಪಿಂಜಾರ ಮಸೂತಿ ದೇವರುಗಳು ಗ್ರಾಮದ ಅಗಸಿಯಲ್ಲಿ ಪರಸ್ಪರ ಭೇಟಿಮಾಡಿ ನಂತರ ನದಿಗೆ ತೆರಳಿದವು.

ಗ್ರಾಮದ ಹುತಾಲಸಾಬ ವಾಲಿಕಾರ, ಮೌಲಾಸಾಬಾ ವಾಲೀಕಾರ, ಮೆಹಬೂಬಸಾಬ ವಾಲೀಕಾರ, ರಮಜಾನ ಸಾಬ ವಾಲೀಕಾರ, ಡೊಂಗ್ರಿಸಾಬ ವಾಲಿಕಾರ, ಹುಸೇನಸಾಬ ರೊಳ್ಳಿ, ಪತ್ತೆಸಾಬ ವಾಲೀಕಾರ ಬಾಬುಸಾಬ ವಾಲಿಕಾರ, ಮಳಿಯಪ್ಪ ಹೊರಕೇರಿ,ಹನಮಂತ ಜಮ್ಮನಕಟ್ಟಿ, ಗದಿಗೆಪ್ಪ ಕರಮುದಿ,ಚಂದ್ರು ಮಾದರ, ಜಗದೀಶ ಮರನಾಳ, ಪ್ರಕಾಶ ಬಿಸಾಳಿ, ಚೆನ್ನಬಸಪ್ಪ ಯಂಕಂಚಿ, ಮಳಿಯಪ್ಪಮಾಸ್ತರ ತೆಗ್ಗಿ,ಸಿದ್ದಪ್ಪ ಮುಚಖಂಡಿ.ಸಿದ್ದು ಕೊಂಡಗೂಳಿ, ಈರಪ್ಪ ಶಿರೂರ, ಸೇರಿದಂತೆ ಅನೇಕರು ಇದ್ದರು.