ಸಾರಾಂಶ
ವಿಪ ಸದಸ್ಯರ ಆರೋಪ । ಜೈತುಂಬಿ ಅಧ್ಯಕ್ಷತೆಯಲ್ಲಿ ತುರ್ತು ಕೌನ್ಸಿಲ್ ಸಭೆಕನ್ನಡಪ್ರಭ ವಾರ್ತೆ ಚಳ್ಳಕೆರೆ
ನಗರಸಭೆಯ ತುರ್ತು ಕೌನ್ಸಿಲ್ ಸಭೆ ಅಧ್ಯಕ್ಷೆ ಜೈತುಂಬಿರವರ ಅಧ್ಯಕ್ಷತೆಯಲ್ಲಿ ನಡೆಯಿತು.ಪ್ರಾರಂಭದ ಹಂತದಲ್ಲಿ ಪೌರಾಯುಕ್ತ ಎಚ್.ಜಿ.ಜಗರೆಡ್ಡಿ ಎಲ್ಲರಿಗೂ ಸ್ವಾಗತಕೋರಿ, ನಗರಸಭೆಯ ಅಭಿವೃದ್ಧಿಗೆ ಸಂಬಂಧಪಟ್ಟಂತೆ ತುರ್ತಾಗಿ ಕೈಗೊಳ್ಳಬೇಕಾದ ಕೆಲವು ವಿಷಯಗಳ ಬಗ್ಗೆ ಅನುಮತಿ ಪಡೆಯುವ ಹಿನ್ನೆಲೆ ತುರ್ತು ಕೌನ್ಸಿಲ್ ಸಭೆ ಹಮ್ಮಿಕೊಂಡಿದ್ದು, ಎಲ್ಲ ಸದಸ್ಯರಿಗೂ ಈಗಾಗಲೇ ಸಭೆಯ ಮಾಹಿತಿ ನೀಡಿದ್ದು, ನಗರದ ಹಿತದೃಷ್ಠಿಯಿಂದ ಸದಸ್ಯರು ತಮ್ಮ ಸಲಹೆ ಸೂಚನೆಗಳನ್ನು ಮುಕ್ತವಾಗಿ ನೀಡುವಂತೆ ಮನವಿ ಮಾಡಿದರು.
ಕಮ್ಯೂನಿಟಿ ಅಧಿಕಾರಿ ಭೂತಣ್ಣ ಮಾತನಾಡಿ, 4 ಪ್ರಮುಖ ವಿಷಯಗಳು ಇಂದಿನ ಕಾರ್ಯಸೂಚಿಯಲ್ಲಿ ಮಂಡನೆಯಾಗಲಿದ್ದು, ಅವುಗಳಿಗೆ ಅನುಮೋದನೆ ನೀಡುವಂತೆ ಸದಸ್ಯರಲ್ಲಿ ಮನವಿ ಮಾಡಿದರು.2025-26ನೇ ಸಾಲಿಗೆ ಅನ್ವಯವಾಗುವಂತೆ ಮಾನ್ಯ ಪೌರಾಡಳಿತ ನಿರ್ದೇಶಕರ ಸೂಚನೆ ಮೇರೆಗೆ ಆಸ್ತಿ ತೆರಿಗೆ ಮೊತ್ತವನ್ನು ಪರಿಷ್ಕರಿಸುವ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ಹೇಳಿದರು.
ನಗರಸಭೆ ಹಿರಿಯ ಸದಸ್ಯ ಎಸ್.ಜಯಣ್ಣ, ಶಿವಕುಮಾರ್, ಪಾಲಮ್ಮ, ಸಾಕಮ್ಮ, ಜೆಡಿಎಸ್‌ನ ಶ್ರೀನಿವಾಸ್, ಪ್ರಮೋದ್, ನಿರ್ಮಲ, ತಿಪ್ಪಮ್ಮ, ನಾಗಮಣಿ ಮುಂತಾದವರು ಆಸ್ತಿ ತೆರಿಗೆ ಹೆಚ್ಚಳಕ್ಕೆ ಬಾರಿ ವಿರೋಧ ವ್ಯಕ್ತಪಡಿಸಿದರು.2018ರಲ್ಲಿ ಈ ಸಮಿತಿ ಆಯ್ಕೆಯಾಗಿದ್ದು, ಇಂದಿಗೂ ಕೂಡ ವಾರ್ಡ್‌ಗಳಲ್ಲಿ ಸೂಕ್ತ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಿಲ್ಲ, ಕಡೆಪಕ್ಷ ವಾರ್ಡ್ ಸಾರ್ವಜನಿಕರಿಗೆ ಉತ್ತಮ ನೈರ್ಮಲ್ಯ ವಾತಾವಣ ನೀಡಲು ಸಾಧ್ಯವಾಗಿಲ್ಲ, ಇದುವರೆಗೂ ಯಾವುದೇ ವಾರ್ಡ್‌ನಲ್ಲಿ ಡಿಡಿಟಿ ಸಿಂಪಡೆಣೆಯಾಗಿಲ್ಲ, ಪ್ರತಿಯೊಂದು ಸಭೆಯಲ್ಲೂ ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿ ತಪ್ಪಿಸಿ ಕೊಳ್ಳುತ್ತಾರೆ ಎಂದು ಆರೋಪಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನ್, ಸದಸ್ಯರ ಅಭಿಪ್ರಾಯಕ್ಕೆ ಬೆಂಬಲ ವ್ಯಕ್ತಪಡಿಸಿ ಡಿಡಿಟಿ ಪೌಂಡರ್ ಸಿಂಪಡೆಣೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ, ಆರೋಗ್ಯ ನಿರೀಕ್ಷಕರು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ, ನಗರದ ಬಹುತೇಕ ಕಡೆ ಸ್ವಚ್ಛತೆ ಮಾಯವಾಗಿದೆ. ನಮ್ಮನ್ನು ಆಯ್ಕೆ ಮಾಡಿದ ಜನ ಸ್ವಚ್ಛತೆ ಕೇಳುತ್ತಿದ್ದಾರೆ. ಆದರೆ, ಇಲ್ಲಿ ಅಧಿಕಾರಿಗಳೇ ಚುನಾಯಿತ ಸದಸ್ಯರ ಮಾತುಗಳನ್ನು ಕೇಳದೆ ಸುಳ್ಳು ಸಬೂಬು ಹೇಳಿ ನುಣಿಚಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.ಸದಸ್ಯರ ವಿರೋಧ ಹೆಚ್ಚಾದಾಗ ಮಧ್ಯ ಪ್ರವೇಶಿಸಿದ ಪೌರಾಯುಕ್ತ ಜಗರೆಡ್ಡಿ, ಈಗಾಗಲೇ ನಗರಸಭೆಗೆ ಡಿಡಿಟಿ ಪೌಂಡರ್ ಸಿದ್ದವಿದ್ದು, ನಾಳೆಯಿಂದಲೇ ವಿವಿಧ ವಾರ್ಡ್‌ಗಳ ಸದಸ್ಯರ ಸಮ್ಮುಖದಲ್ಲಿ ಡಿಡಿಟಿ ಸಿಂಪಡಣೆ ಮಾಡಲಾಗುವುದು ಎಂದು ತಿಳಿಸಿದರು.
ನಗರಸಭೆ ಈಗಾಗಲೇ ದಿನವಾಹಿ ಮಾರುಕಟ್ಟೆ, ವಾರಸಂತೆ, ಖಾಸಗಿ ಬಸ್ ಶುಲ್ಕವಸೂಲಿ ಕಾರ್ಯ ಮಾಡುತ್ತಿದೆ. ಇನ್ನು ಮುಂದೆ ಹೊಸ ಖಾಸಗಿ ಬಸ್ ನಿಲ್ದಾಣದ ಕೆಳಮಹಡಿಯಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದು, ಅದರ ಶುಲ್ಕವನ್ನು ಸಹ ವಸೂಲಿಗೆ ಅನುಮತಿ ನೀಡಬೇಕೆಂದರು. ಪ್ರಸ್ತುತ ನಗರಸಭೆಯಲ್ಲಿ ಪೌರಕಾರ್ಮಿಕರ ಸಮಸ್ಯೆಗಳಿದ್ದು, ಈಗಾಗಲೇ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದು ಶೀಘ್ರದಲ್ಲೇ ಪೌರಕಾರ್ಮಿಕರನ್ನು ನೇಮಿಸಿಕೊಳ್ಳಲಾಗುವುದು ಎಂದು ನೈರ್ಮಲ್ಯ ಎಂಜಿನಿಯರ್ ನರೇಂದ್ರಬಾಬು ತಿಳಿಸಿದರು.ನಗರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ನಿರೀಕ್ಷಕರು ನೈರ್ಮಲ್ಯದ ಬಗ್ಗೆ ನಿರ್ಲಕ್ಷೆ ವಹಿಸಿದ್ದಾರೆಂದು ಸದಸ್ಯರು ಆರೋಪಿಸಿದರು. ಇದಕ್ಕೆ ಧ್ವನಿಗೂಡಿದ ಪೌರಾಯುಕ್ತ ನಾಳೆಯಿಂದಲೇ ಎಲ್ಲಾ ಆರೋಗ್ಯ ನಿರೀಕ್ಷಕರು ತಮಗೆ ನಿಗದಿಪಡಿಸಿದ ವಾರ್ಡ್‌ಗಳಲ್ಲಿದ್ದು ಸಚ್ಛತೆ ಸೇರಿದಂತೆ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.
ಸಭೆಯಲ್ಲಿ ಸದಸ್ಯರಾದ ಆರ್.ರುದ್ರನಾಯಕ, ಎಂ.ಜೆ.ರಾಘವೇಂದ್ರ, ಜಯಲಕ್ಷ್ಮಿ, ವೈ.ಪ್ರಕಾಶ್, ಸಾಕಮ್ಮ, ನಾಮಿನಿ ಸದಸ್ಯರಾದ ಆರ್.ವೀರಭದ್ರಪ್ಪ, ನೇತಾಜಿ ಪ್ರಸನ್ನ, ಬಡಗಿಪಾಪಣ್ಣ, ನಟರಾಜ್, ವ್ಯವಸ್ಥಾಪಕ ಲಿಂಗರಾಜು, ಎಇಇ ಕೆ.ವಿನಯ್ ಮುಂತಾದವರು ಇದ್ದರು.