ಹನುಮಮಲಾ ವಿಸರ್ಜನಾ ಕಾರ್ಯಕ್ರಮ ನಿಮಿತ್ತ ಈಗಾಗಲೇ ಜಿಲ್ಲಾಡಳಿತ ಸಾಕಷ್ಟು ಸೌಕರ್ಯಗಳನ್ನು ಕಲ್ಪಿಸಿದೆ ಎಂದು ಕೊಪ್ಪಳ ಸಂಸದ ರಾಜಶೇಖರ ಬಸವರಾಜ ಹಿಟ್ನಾಳ ಹೇಳಿದರು.

ಕೊಪ್ಪಳ: ಹನುಮಮಲಾ ವಿಸರ್ಜನಾ ಕಾರ್ಯಕ್ರಮ ನಿಮಿತ್ತ ಈಗಾಗಲೇ ಜಿಲ್ಲಾಡಳಿತ ಸಾಕಷ್ಟು ಸೌಕರ್ಯಗಳನ್ನು ಕಲ್ಪಿಸಿದೆ ಎಂದು ಕೊಪ್ಪಳ ಸಂಸದ ರಾಜಶೇಖರ ಬಸವರಾಜ ಹಿಟ್ನಾಳ ಹೇಳಿದರು.

ಹನುಮಮಲಾ ವಿಸರ್ಜನಾ ಕಾರ್ಯಕ್ರಮ-2025ರ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕೊಪ್ಪಳ ಜಿಲ್ಲಾ ಅಥ್ಲೆಟಿಕ್ ಅಸೋಷಿಯೇಷನ್ ವತಿಯಿಂದ ಕೈಗಾರಿಕೆಗಳು ಮತ್ತು ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರ ಸಯಯೋಗದಲ್ಲಿ ಹನುಮಮಾಲಾಧಾರಿಗಳಿಗೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಆಂಜನೇಯಸ್ವಾಮಿ ಜನ್ಮಸ್ಥಳ ಅಂಜನಾದ್ರಿಯಲ್ಲಿ ಡಿ. 2 ಮತ್ತು 3ರಂದು ಹನುಮಮಾಲಾ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ. ದೇವಸ್ಥಾನದ ಅಲಂಕಾರ, ಬೆಟ್ಟಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಬೆಟ್ಟದ ಮೇಲಿನ ದೇವಸ್ಥಾನದಲ್ಲಿ ನಡೆಯವ ವಿಶೇಷ ಪೂಜಾ ಕಾರ್ಯಕ್ರಮದ ನೇರಪ್ರಸಾರವನ್ನು ಎಲ್‌ಇಡಿ ಪರದೆ ಮೂಲಕ ಬೆಟ್ಟದ ಕೆಳಗೂ ನೋಡುವಂತೆ ಮಾಡಲಾಗುತ್ತದೆ. ಕುಡಿಯುವ ನೀರು ಮತ್ತು ಪ್ರಸಾದದ ವ್ಯವಸ್ಥೆ, ಭಕ್ತರಿಗೆ ಸ್ನಾನ ಘಟ್ಟಗಳ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಪಾರ್ಕಿಂಗ್‌ ಹಾಗೂ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಇದಲ್ಲದೇ ಆರೋಗ್ಯ ಸೇವೆ ಮತ್ತು ಸಹಾಯವಾಣಿ ಕೇಂದ್ರ ಸಹ ಸ್ಥಾಪಿಸಲಾಗಿದೆ. ಈ ಎಲ್ಲ ವ್ಯವಸ್ಥೆಗಳನ್ನು ಬಹಳ ಅಚ್ಚುಕಟ್ಟಾಗಿ ಮಾಡಲಾಗಿದೆ ಎಂದರು.

ಕಳೆದ ವರ್ಷವೂ ಹನುಮಮಾಲಾ ವಿಸರ್ಜನಾ ಕಾರ್ಯಕ್ರಮವನ್ನು ತುಂಬಾ ಚೆನ್ನಾಗಿ ಮಾಡಲಾಗಿತ್ತು. ಈ ವರ್ಷ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆಯಿದೆ. ಸಂಗಾಪುರದ ಕಣಿವೆ ಆಂಜನೇಯ ಸ್ವಾಮಿ ದೇವಸ್ಥಾನ, ಆನೆಗುಂದಿಯ ದುರ್ಗಾದೇವಿ ಬೆಟ್ಟ, ತಿರುಮಲಾಪುರದ ಆಂಜನೇಯ ಸ್ವಾಮಿ ದೇವಸ್ಥಾನ, ಅಂಜನಾದ್ರಿ ಮುಖ್ಯರಸ್ತೆಯ ಅಗಳಕೇರಾದ ಅಂದಿಗಾಲೇಶ್ವರ ದೇವಸ್ಥಾನ, ಹಿಟ್ನಾಳ ಕ್ರಾಸ್, ಆನೆಗುಂದಿಯ ಶ್ರೀ ಕೃಷ್ಣದೇವರಾಯ ವಿಶ್ರಾಂತಿ ತಾಣ, ಸಣಾಪುರ ಐಬಿ, ಕಮಲಾಪುರದ ಕಡ್ಡಿರಾಂಪುರ ಕ್ರಾಸ್, ಹಂಪಿ ರೋಡ್ ಸೇರಿದಂತೆ ಈ ಎಂಟು ಸ್ಥಳಗಳಲ್ಲಿ ಅಗತ್ಯ ಅನುಕೂಲ ಮಾಡಿಕೊಳ್ಳಲಾಗಿದೆ. ಪಾದಯಾತ್ರೆ ಮೂಲಕ ಬರುವ ಹನುಮಮಾಲಾಧಾರಿಗಳಿಗೆ ಅಲ್ಲಿ ತಂಗಲು ಪೆಂಡಾಲ್‌ ವ್ಯವಸ್ಥೆ ಜತೆಗೆ ಹಾಲು, ಮಜ್ಜಿಗೆ, ಉಪಾಹಾರ, ಊಟ, ವಿಶ್ರಾಂತಿ, ಶೌಚಾಲಯ ವ್ಯವಸ್ಥೆ, ಸ್ನಾನಗೃಹ ಮತ್ತು ರಾತ್ರಿ ಭಜನೆಗೂ ಅನುಕೂಲಗಳಿವೆ. ಈ ಎಲ್ಲ ಸೌಲಭ್ಯಗಳು ಸೋಮವಾರ ರಾತ್ರಿಯಿಂದ ಡಿ. 3ರ ಬೆಳಗ್ಗೆಯ ಉಪಾಹಾರದ ವರೆಗೂ ಇರಲಿವೆ ಎಂದು ಹೇಳಿದರು.

ಹನುಮಮಾಲಾ ವಿಸರ್ಜನಾ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಿದ್ದು, ಈ ಬಗ್ಗೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಪ್ಲಾಸ್ಟಿಕ್ ಬಾಟಲ್ ಸೇರಿದಂತೆ ಯಾವುದೇ ರೀತಿಯ ಪ್ಲಾಸ್ಟಿಕ್ ವಸ್ತುಗಳನ್ನು ಅಂಜನಾದ್ರಿ ಬೆಟ್ಟದ ವ್ಯಾಪ್ತಿಯಲ್ಲಿ ಕೊಂಡೊಯ್ಯಲು ಅವಕಾಶವಿಲ್ಲ. ಹಾಗಾಗಿ ಪ್ಲಾಸ್ಟಿಕ್ ಬಳಕೆ ಮಾಡಬಾರದು. ಭಕ್ತರಿಗೆ ಸ್ನಾನಕ್ಕಾಗಿ ಕಡ್ಲೆ ಹಿಟ್ಟಿನ ವ್ಯವಸ್ಥೆ ಸಹ ಮಾಡಲಾಗಿದೆ. ಸಾಬೂನು ಅಥವಾ ಶಾಂಪು ಬಳಸದೇ ಕಡ್ಲೆ ಹಿಟ್ಟಿನ ಬಳಕೆ ಮಾಡಬೇಕು. ವಸ್ತ್ರಗಳು ಹಾಗೂ ಇತರ ಸಾಮಗ್ರಿಗಳನ್ನು ಹಾಕಲು ಪ್ರತ್ಯೇಕ ಸ್ಥಳ ಗುರುತಿಸಲಾಗಿದೆ. ಭಕ್ತರು ತಮ್ಮ ಬಟ್ಟೆಗಳನ್ನು ನಿಗದಿಪಡಿಸಿದ ಜಾಗದಲ್ಲಿಯೇ ಹಾಕಬೇಕು ಮತ್ತು ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಉಪಸ್ಥಿತರಿದ್ದರು.