ನಿರ್ವಹಣೆಯಿಲ್ಲದೆ ಕಳೆಗುಂದಿದ ನರ್ಸರಿ ಫಾರ್ಮ್

| Published : Apr 30 2025, 12:30 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿಒಂದು ಕಾಲದಲ್ಲಿ ಸಸ್ಯಕಾಶಿಯಂತೆ ಹಸಿರಿನಿಂದ ಕಂಗೊಳಿಸುತ್ತಿದ್ದ ಪಟ್ಟಣದ ತೋಟಗಾರಿಕಾ ಇಲಾಖೆಯ ನರ್ಸರಿ ಫಾರ್ಮ್ ಇದೀಗ ನೀರು, ನಿರ್ವಹಣೆ ಇಲ್ಲದೆ ಅನಾಥವಾಗಿದೆ.

ವಿಶೇಷ ವರದಿ: ಮಲ್ಲಿಕಾರ್ಜುನ ಪಟ್ಟಣಶೆಟ್ಟಿಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿಒಂದು ಕಾಲದಲ್ಲಿ ಸಸ್ಯಕಾಶಿಯಂತೆ ಹಸಿರಿನಿಂದ ಕಂಗೊಳಿಸುತ್ತಿದ್ದ ಪಟ್ಟಣದ ತೋಟಗಾರಿಕಾ ಇಲಾಖೆಯ ನರ್ಸರಿ ಫಾರ್ಮ್ ಇದೀಗ ನೀರು, ನಿರ್ವಹಣೆ ಇಲ್ಲದೆ ಅನಾಥವಾಗಿದೆ.

ಪಟ್ಟಣದ ಮಲ್ಲಯ್ಯನ ದೇವಸ್ಥಾನದ ಬಳಿ ತೋಟಗಾರಿಕಾ ಇಲಾಖೆಗೆ ಸೇರಿದ 13 ಎಕರೆಯಲ್ಲಿ ನರ್ಸರಿ ಫಾರ್ಮ್ ಇದೆ. ಇಲ್ಲಿನ ಉತ್ತಮ ವಾತಾವರಣ ಮತ್ತು ಗುಣಮಟ್ಟದ ಮಣ್ಣಿನಿಂದ ಕೂಡಿದ್ದ ಜಾಗದಲ್ಲಿ ಚಿಕ್ಕು 250 ಗಿಡಗಳು ಸೇರಿ ಹುಣಸೆ, ಬಳುಲ, ಮಾವು, ತೆಂಗು ಸೇರಿದಂತೆ ಹಲವು ವಿಧದ ಹಣ್ಣಿನ ಮರಗಳು ಇವೆ. ಆದರೆ ಇಷ್ಟು ಮರಗಳ ನಿರ್ವಹಣೆಗೆ ಏಳು ಜನ ಸಿಬ್ಬಂದಿ ಇರಬೇಕು. ಆದರೆ, ಇವಾಗ ಕೇವಲ ನಾಲ್ಕು ಜನ ಸಿಬ್ಬಂದಿಗಳಿದ್ದಾರೆ. ಮೂರು ಕೊಳವೆ ಬಾವಿಗಳಿವೆ. ಅದರಲ್ಲಿ ಎರಡು ಕೊಳವೆ ಬಾವಿ ಕೆಟ್ಟಿದ್ದು, ಇದರಿಂದ ಗಿಡಗಳಿಗೆ ಸಕಾಲದಲ್ಲಿ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಬೇಸಿಗೆಯಲ್ಲಿ ಹಲವು ಮರಗಳು ಒಣಗುತ್ತಿವೆ. ಇಲ್ಲಿ, ಕೆಲಸ ಮಾಡಲು ಇಬ್ಬರು ಪುರುಷ ಹಾಗೂ ಇಬ್ಬರು ಮಹಿಳಾ ಸಿಬ್ಬಂದಿ ಮಾತ್ರವಿದ್ದು, ಗಿಡ ಮರಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿಲ್ಲ. ಇಲ್ಲಿ, ಯಾವುದೇ ಹನಿ ನೀರಾವರಿ, ತುಂತುರು ನೀರಾವರಿ ವ್ಯವಸ್ಥೆಯನ್ನೂ ಅಳವಡಿಸಿಲ್ಲ. ಕೃಷಿ ಹೊಂಡದ ಒಂದು ಬೋರ್‌ ಸುಟ್ಟು ಹೋಗಿದ್ದೂ ವ್ಯವಸ್ಥೆ ಮಾಡಿಲ್ಲ.ಒಂದು ಕಾಲದಲ್ಲಿ ಇಲ್ಲಿ ತಾಲ್ಲೂಕಿನ ರೈತರಿಗೆ ಬೇಕಾದ ಮಾವು, ಸಪೋಟ, ಬಳಲು, ಹುಣಸೆ, ಕರಿಬೇವು, ತೆಂಗು ಸೇರಿದಂತೆ ಹಲವಾರು ಬಗೆಯ ಹಣ್ಣಿನ ಗಿಡಗಳಿಗೆ ಕಸಿ ಕಟ್ಟಲಾಗುತ್ತಿತ್ತು. ಕಸಿ ಕಟ್ಟಿದ ಗಿಡಗಳನ್ನು ರೈತರಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಜೊತೆಗೆ ಪ್ರತಿ ವರ್ಷ ಸಾವಿರಾರು ಗಿಡಗಳನ್ನು ಬೆಳೆಸಿ ರೈತರಿಗೆ ನೀಡಲಾಗುತ್ತಿತ್ತು. ಕಸಿ ಕಟ್ಟುವುದಕ್ಕಾಗಿಯೇ ಇಲ್ಲಿನ ಸಿಬ್ಬಂದಿಗೆ ತರಬೇತಿ ನೀಡುವ ಮೂಲಕ ಉತ್ತಮ ಜಾತಿಯ ಮಾವು, ಸಪೋಟ, ಹುಣಸೆ, ತೆಂಗು ಗಿಡಗಳನ್ನು ಬೆಳೆಸಿ, ಸದಾಕಾಲ ರೈತರ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಮಾಡಲಾಗುತ್ತಿತ್ತು. ಹಲವು ಹಣ್ಣಿನ ಗಿಡಗಳು ಕಾಲಕಾಲಕ್ಕೆ ಟೆಂಡರ್ ಆಗುವ ಮೂಲಕ ಇಲಾಖೆಗೆ ಉತ್ತಮ ಆದಾಯವನ್ನು ನೀಡುತ್ತಿದ್ದವು. ಆದರೆ ಇತ್ತೀಚಿಗೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಸಿ ಕಟ್ಟಿದ ಗಿಡಗಳನ್ನು ಬೆಳೆಸುವುದನ್ನೇ ನಿಲ್ಲಿಸಲಾಗಿದೆ. ಇವುಗಳ ಸಂರಕ್ಷಣೆಗೆ ಹಾಕಿದ್ದ ನೆರಳಿನ ಪರದೆ(ಪಾಲಿಹೌಸ್) ಹಾಳಾಗಿವೆ. ಪಾಲಿಹೌಸ್‌ನಲ್ಲಿ ಗಿಡಗಂಟೆಗಳು ಬೆಳೆದಿರುವುದೇ ದಿವ್ಯ ನಿರ್ಲಕ್ಷ್ಯಕ್ಕ ಸಾಕ್ಷಿಯಾಗಿದೆ. ಇತ್ತೀಚೆಗೆ ಬಂದ ಅಧಿಕಾರಿ ತೋಟಗಾರಿಕೆ ಕ್ಷೇತ್ರವನ್ನು ಬೆಳೆಸುವ ಉತ್ಸಾಹ ತೋರದಿರುವುದು ವಿಪರ್ಯಾಸ. ಹೀಗೆ ರೈತರಿಗೆ ಅನುಕೂಲವಾಗಿದ್ದ ಫಾರ್ಮ್‌ ಮತ್ತು ತೋಟಗಾರಿಕಾ ಇಲಾಖೆಗೆ ಆದಾಯ ತರುತ್ತಿದ್ದ ನರ್ಸರಿ ಇಂದು ನಿರ್ವಹಣೆ ಇಲ್ಲದೆ ಹಾಳಾಗಿದೆ. ಇಲಾಖೆ ಹಿರಿಯ ಅಧಿಕಾರಿಗಳು ಸಹ ನರ್ಸರಿಯನ್ನು ಅಭಿವೃದ್ಧಿಗಿಳಿಸಲು ಮನಸ್ಸು ಮಾಡದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಬಾಕ್ಸ್

ಇಲ್ಲಿ ನೀರು, ನಿರ್ವಹಣೆ, ಅಧಿಕಾರಿಗಳ ನಿರ್ಲಕ್ಷ ಹಾಗೂ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ಸುಮಾರು 13 ಎಕರೆ ವಿಸ್ತೀರ್ಣ ಹೊಂದಿರುವ ಫಾರ್ಮ್‌ನಲ್ಲಿ ಒಟ್ಟು ಏಳು ಜನ ಸಿಬ್ಬಂದಿ ಬೇಕು. ಆದರೆ,1-ತೋಟಗಾರಿಕೆ ಅಧಿಕಾರಿ ಹಾಗೂ 4-ಜನ ತೋಟಗಾರರು (ತಲಾ ಇಬ್ಬರು ಗಂಡು ಹೆಣ್ಣು) ಇದ್ದು, ಅಲಂಕಾರಿಕ ಫಾಟ್‌ಗಳು, ಚಿಕ್ಕು, ಮಾವು, ಕರಿಬೇವು, ನುಗ್ಗೆ ಹಾಗೂ ತೆಂಗಿನ ಸಸಿ ಅಭಿವೃದ್ಧಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿಲ್ಲ. ನೀರು ಹಾಗೂ ಸಿಬ್ಬಂದಿ ಕೊರತೆಯಾಗಿದ್ದು, ಅಸಮರ್ಪಕ ನಿರ್ವಹಣೆಯಿಂದಾಗಿ ಪಾಳು ಬಿದ್ದ ಜಮೀನಿನಂತಾಗಿದೆ.----

ಕೋಟ್‌

ಬೋರ್‌ವೆಲ್‌ ಮೋಟಾರ್ ಸುಟ್ಟ ಪರಿಣಾಮ ನೀರಿನ ಕೊರತೆ ಆಗಿರುವುದು ನನ್ನ ಗಮನಕ್ಕೆ ಬಂದಿಲ್ಲ. ಸಿಬ್ಬಂದಿ ಕೊರತೆ ಇದೆ. ನಿರ್ಲಕ್ಷದ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಸರ್ಕಾರದಿಂದ ಸಸಿ ಹಾಗೂ ನಿರ್ವಹಣೆಗಾಗಿ ಹಣ ಬಿಡುಗಡೆ ಆಗಬೇಕಾಗಿದೆ. ಹಣ ಬಿಡುಗಡೆಯಾದ ನಂತರ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.

-ನೀಲಕಂಠ ಬಿರಾದಾರ, ಉಪ ನಿರ್ದೇಶಕ ಜಿಲ್ಲಾ ತೋಟಗಾರಿಕೆ ಇಲಾಖೆ----ದೇವರಹಿಪ್ಪರಗಿ ಪಟ್ಟಣ ನೂತನ ತಾಲೂಕು ಕೇಂದ್ರ ಇಷ್ಟು ದೊಡ್ಡ ಫಾರ್ಮ್ ನೀರು, ಅಧಿಕಾರಿಗಳ ನಿರ್ಲಕ್ಷ ಹಾಗೂ ನಿರ್ವಹಣೆ ಇಲ್ಲದೆ ಹಾಳಾಗುತ್ತಿದೆ. ತಾಲೂಕು ತೋಟಗಾರಿಕಾ ಇಲಾಖೆ ಕಚೇರಿಗೆ ಬೇಕಾದ ಸ್ಥಳ ಇದೆ, ಕಚೇರಿ ಆದರೆ ಇನ್ನು ಹೆಚ್ಚಿನ ಅಭಿವೃದ್ಧಿ ಮಾಡಲು ಸಾಧ್ಯ. ದೇವರ ನಾಡು ದೇವರ ಹಿಪ್ಪರಗಿಗೆ ರಾಜ್ಯ ಅಂತರ ರಾಜ್ಯದಿಂದ ಭಕ್ತರು ಬರುತ್ತಾರೆ. ಬಂದ ಜನರಿಗೆ ಇಳಿದುಕೊಳ್ಳಲು ಯಾತ್ರಿ ನಿವಾಸ ಕಲ್ಪಿಸಬೇಕು ಹಾಗೂ ಹಲವಾರು ತಾಲೂಕು ಕಚೇರಿಗಳನ್ನು ತೆರೆಯಲು ಶಾಸಕರು ಮುತುವರ್ಜಿ ವಹಿಸಬೇಕು.ವೀರಗಂಗಾಧರ ಶಿವಾಚಾರ್ಯ, ಸದಯ್ಯನ ಮಠ ದೇ.ಹಿಪ್ಪರಗಿ.