ಸಾರಾಂಶ
ಹಲವು ವರ್ಷಗಳಿಂದ ಪಾಳು ಬಿದ್ದಿದ್ದ ಟ್ರಿನಿಟಿ ವೃತ್ತದ ಬಳಿಯ ಭಾರತೀಯ ಸೇನೆಯ ಜಾಗದಲ್ಲಿನ ಈಗಲ್ ನೆಸ್ಟ್ ಕೆರೆಯನ್ನು ಎರಡು ಎನ್‌ಜಿಒಗಳು ಅಭಿವೃದ್ಧಿ ಪಡಿಸಿವೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಹಾತ್ಮ ಗಾಂಧಿ ರಸ್ತೆಯ ಟ್ರಿನಿಟಿ ವೃತ್ತದ ಬಳಿ ಇರುವ ಭಾರತೀಯ ಸೇನೆಯ ‘515 ಆರ್ಮಿ ಬೇಸ್ ವರ್ಕ್‌ಶಾಪ್’ ಆವರಣದಲ್ಲಿ ಅನೇಕ ವರ್ಷಗಳಿಂದ ಪಾಳು ಬಿದ್ದು, ಬಹುತೇಕ ಒಣಗಿದ್ದ 8 ಎಕರೆ ವಿಸ್ತೀರ್ಣದ ಕೆರೆಯನ್ನು ‘3 ಒನ್ ಫೋರ್ ಕ್ಯಾಪಿಟಲ್’ ಮತ್ತು ’ಹ್ಯಾಂಡ್ಸ್ ಆನ್ ಸಿಎಸ್‌ಆರ್’ ಸಂಸ್ಥೆಗಳ ನೆರವಿನೊಂದಿಗೆ ಐದು ತಿಂಗಳಲ್ಲೇ ಪುನರುಜ್ಜೀವನಗೊಳಿಸಿ ಹೊಸ ರೂಪ ನೀಡಲಾಗಿದೆ.ಎನ್‌ಜಿಒ ನೆರವು ಮತ್ತು ಸೇನೆಯ ಪ್ರಾಮಾಣಿಕ ಪ್ರಯತ್ನದ ಫಲವಾಗಿ ₹80 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಯಾಗಿರುವ ಕೆರೆಯಲ್ಲಿ ಇತ್ತೀಚೆಗೆ ಸುರಿದಿರುವ ಉತ್ತಮ ಮಳೆಯಿಂದ ಶುದ್ಧ ನೀರು ತುಂಬಿದೆ. ಸ್ವಚ್ಛ ಪರಿಸರದೊಂದಿಗೆ ಕೆರೆ ಪ್ರದೇಶ ಕಂಗೊಳಿಸುತ್ತಿದೆ. ಅಭಿವೃದ್ಧಿಪಡಿಸಲಾಗಿರುವ ಕೆರೆಯ ಸುತ್ತಲು ಮಂಗಳವಾರ ಸಸಿಗಳನ್ನು ನೆಡುವ ಮೂಲಕ ಲೆಫ್ಟಿನೆಂಟ್ ಜನರಲ್ ಕರಣ್‌ಬೀರ್ ಸಿಂಗ್ ಬ್ರಾರ್, ಉದ್ಯಮಿ ಮೋಹನ್ ದಾಸ್ ಪೈ ಮತ್ತು ನಟ ರಾಜ್ ಬಿ.ಶೆಟ್ಟಿ ಮತ್ತಿತರರು ಉದ್ಘಾಟಿಸಿದರು.
ಬೆಂಗಳೂರು ನಗರ ತೀವ್ರವಾಗಿ ನೀರಿನ ಸಮಸ್ಯೆ ಎದುರಿಸುತ್ತಿದ್ದ ಇದೇ ಮಾರ್ಚ್ ತಿಂಗಳಲ್ಲಿ ಕೆರೆ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು. ಐದೇ ತಿಂಗಳಲ್ಲಿ ಕೆರೆಯ ನೀರಿನ ಸಂಗ್ರಹ ಪ್ರಮಾಣ ಶೇ.200ರಷ್ಟು ಹೆಚ್ಚಾಗಿದೆ. ಸುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಪ್ರಮಾಣ ಸುಧಾರಿಸಿದ್ದು, 2 ಕಿ.ಮೀ ವ್ಯಾಪ್ತಿಯಲ್ಲಿನ ಕೊಳವೆಬಾವಿಗಳಿಗೆ ನೀರಿನ ಲಭ್ಯತೆ ಹೆಚ್ಚಾಗಿದೆ. ಕೆರೆ ಅಭಿವೃದ್ಧಿಯ ಜೊತೆಗೆ 400 ಸಸಿಗಳನ್ನು ನೆಡಲಾಗಿದೆ ಎಂದು ಹ್ಯಾಂಡ್ಸ್ ಆನ್ ಸಿಎಸ್‌ಆರ್‌ನ ಗುರುನಂದನ್ ರಾವ್ ತಿಳಿಸಿದರು.ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ ಕೆರೆಯ ಅಭಿವೃದ್ಧಿಯಿಂದ ನೀರಿನ ಗುಣಮಟ್ಟ, ಜೀವವೈವಿಧ್ಯತೆ ಮತ್ತು ವಾತಾವರಣ ಸುಧಾರಿಸಿದೆ. ಬೆಂಗಳೂರಿನ ಸುಸ್ಥಿರ ಅಭಿವೃದ್ಧಿಗಾಗಿ ಕೆರೆಗಳನ್ನು ಉಳಿಸುವುದು ಮತ್ತು ಅಭಿವೃದ್ಧಿಪಡಿಸುವುದು ಅತಿ ಅವಶ್ಯಕ ಎಂದು ತ್ರಿ ಒನ್ ಫೋರ್ ಕ್ಯಾಪಿಟಲ್‌ನ ಸಿದ್ಧಾರ್ಥ ಪೈ ಹೇಳಿದರು.