ಸಾರಾಂಶ
ಹಾವೇರಿ: ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಕೊಂಡಿದ್ದವರಿಗೆ ಅಂದು ತರಬೇತಿ ನೀಡುವ ಮತ್ತು ಗಾಂಧೀಜಿಯವರ ತತ್ವಾದರ್ಶಗಳನ್ನು ತಿಳಿಹೇಳುವ ಸಲುವಾಗಿ ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹದೇವಪ್ಪ ಅವರು ತಾಲೂಕಿನ ಕೊರಡೂರ ಗ್ರಾಮದಲ್ಲಿ 1935- 36ರಲ್ಲಿ ಸ್ಥಾಪಿಸಿದ್ದ ಗ್ರಾಮ ಸೇವಾಶ್ರಮ ಕಟ್ಟಡ ನವೀಕರಣಗೊಳಿಸಲಾಗಿದ್ದು, ಹೊಸ ಸ್ಪರ್ಶ ನೀಡಲಾಗಿದೆ. ಜೂ. 9ರಂದು ಲೋಕಾರ್ಪಣೆಗೆ ಸಜ್ಜಾಗಿದೆ.
ರಾಜ್ಯದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹೆಚ್ಚಿಸಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಮೈಲಾರ ಮಹದೇವಪ್ಪ ಹಾಗೂ ಅವರ ಪತ್ನಿ ಸಿದ್ದಮ್ಮ ಅವರು ಗಾಂಧೀಜಿಯವರ ಪ್ರೀತಿಗೆ ಪಾತ್ರರಾಗಿ ಸಬರಮತಿ ಆಶ್ರಮದಲ್ಲಿ ಸೇವೆ ಸಲ್ಲಿಸಿದ್ದರು. ಇದರಿಂದ ಪ್ರೇರಿತರಾದ ಮಹದೇವಪ್ಪ ಅವರು 1936ರಲ್ಲಿ ಹಾವೇರಿ ತಾಲೂಕಿನ ಕೊರಡೂರ ಗ್ರಾಮದ ಬಳಿ ವರದಾ ನದಿಯ ದಂಡೆಯ ಪಕ್ಕದಲ್ಲಿ ಗ್ರಾಮ ಸೇವಾಶ್ರಮ ಸ್ಥಾಪಿಸಿದರು. ಈ ಸೇವಾಶ್ರಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿದ್ದ ಹೋರಾಟಗಾರರಿಗೆ ತರಬೇತಿ ನೀಡುವ ಜತೆಗೆ ಗಾಂಧೀಜಿಯವರು ಅಳವಡಿಸಿಕೊಂಡಿದ್ದ ತತ್ವಾದರ್ಶಗಳನ್ನು ಪಾಲಿಸುವ ಕೇಂದ್ರವಾಗಿತ್ತು.ಸ್ವಾತಂತ್ರ್ಯ ಹೋರಾಟಗಾರರಿಗೆ ಈ ಭಾಗದಲ್ಲಿ ತರಬೇತಿ ನೀಡುವ ಜತೆಗೆ ಸ್ಫೂರ್ತಿಯ ಚಿಲುಮೆಯೂ ಆಗಿದ್ದ ಈ ಸೇವಾಶ್ರಮ, ದಿನ ಕಳೆದಂತೆ ಸೇವಾಶ್ರಮದಲ್ಲಿ ಕಾರ್ಯ ಚಟುವಟಿಕೆಗಳು ಇಲ್ಲದಂತಾಗಿ ನಿರ್ಲಕ್ಷ್ಯಕ್ಕೆ ಒಳಪಟ್ಟು ಪಾಳು ಬಿಳುವ ಸ್ಥಿತಿ ತಲುಪಿತ್ತು. ಇದೀಗ ರಾಜ್ಯ ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಹಾಗೂ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರು ಇಚ್ಛಾಶಕ್ತಿ ತೋರುವ ಮೂಲಕ ಮತ್ತೆ ಸೇವಾಶ್ರಮಕ್ಕೆ ಜೀವಕಳೆ ತುಂಬಿದ್ದು, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಸ್ಮರಿಸುವ ಕಾರ್ಯ ಮಾಡಿದ್ದಾರೆ.
ಹುತಾತ್ಮ ಮೈಲಾರ ಮಹಾದೇವಪ್ಪನವರು ಈ ಗ್ರಾಮ ಸೇವಾಶ್ರಮದಲ್ಲಿ ಸ್ವದೇಶಿ ವಸ್ತುಗಳ ಬಗ್ಗೆ ಜಾಗೃತಿ, ಖಾದಿ ಬಟ್ಟೆ ನೂಲುವ ಉದ್ದೇಶದಿಂದ ಹೊಸರಿತ್ತಿ ಸೇರಿದಂತೆ ಸುತ್ತಲಿನ ಭಾಗದ ಗ್ರಾಮಸ್ಥರು ಆರ್ಥಿಕ, ನೈತಿಕ ಹಾಗೂ ಸಾಮಾಜಿಕ ಏಳ್ಗೆ ಹೊಂದಲು ಪ್ರಯತ್ನಿಸಿದ್ದರು.ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಳ್ಳಲು ಜನರನ್ನು ಹುರಿದುಂಬಿಸಲು, ಅಸ್ಪೃಶ್ಯತೆ ಸಮಸ್ಯೆ ನಿವಾರಿಸಲು, ಮದ್ಯಪಾನ ಮುಕ್ತಗೊಳಿಸಲು ಚಳವಳಿಗಾರರು ಇಲ್ಲಿಯೇ ಉಳಿದುಕೊಳ್ಳುತ್ತಿದ್ದರು. ಮೈಲಾರ ಮಹಾದೇವಪ್ಪನವರ ನಿಧನದ ಬಳಿಕ ಪತ್ನಿ ಸಿದ್ದಮ್ಮ ಮೈಲಾರ ಆಶ್ರಮದ ನಿರ್ವಹಣೆ ಮಾಡಿದರು. ಬಳಿಕ ಸ್ಥಳೀಯರಾದ ಮಾಜಿ ಶಾಸಕ ಚಿತ್ತರಂಜನ್ ಕಲಕೋಟಿ ಅವರು ಆಶ್ರಮವನ್ನು ಜೋಪಾನವಾಗಿಟ್ಟಿದ್ದರು. ಕಲಕೋಟಿ ಅವರ ನಿಧನದ ಬಳಿಕ ಆಶ್ರಮದ ಬಾಗಿಲುಗಳು ತೆರೆದದ್ದು ಬಹು ಅಪರೂಪವಾಗಿತ್ತು. ಇದೀಗ ಮತ್ತೆ ಗ್ರಾಮ ಸೇವಾಶ್ರಮ ಹೊಸ ಸ್ಪರ್ಶದೊಂದಿಗೆ ಸಾರ್ವಜನಿಕರಿಗೆ ಮುಕ್ತವಾಗಲಿದೆ.ಗ್ರಾಮ ಸೇವಾಶ್ರಮಕ್ಕೆ ಹೊಸ ಸ್ಪರ್ಶಹುತಾತ್ಮ ಮೈಲಾರ ಮಹದೇವಪ್ಪನವರು ಸ್ಥಾಪಿಸಿದ್ದ ಗ್ರಾಮ ಸೇವಾಶ್ರಮಕ್ಕೆ ಇದೀಗ ಹೊಸ ಸ್ಪರ್ಶ ನೀಡಲಾಗಿದೆ.ನವೀಕೃತ ಕಟ್ಟಡದ ಒಳಗೆ ಮೈಲಾರ ಮಹಾದೇವಪ್ಪನವರ ಜೀವನಗಾಥೆ ಪರಿಚಯಿಸುವ ಭಾವಚಿತ್ರ ಅಳವಡಿಸಲಾಗಿದೆ. ಜತೆಗೆ ಗ್ರಾಮಸ್ಥರು ಈ ಆಶ್ರಮದ ಸದ್ಬಳಕೆ ಮಾಡಿಕೊಳ್ಳುವ ಕಾರಣಕ್ಕೆ ಗ್ರಂಥಾಲಯ ಮಾದರಿಯಲ್ಲಿ ಕುರ್ಚಿ ಹಾಗೂ ಪುಸ್ತಕಗಳನ್ನು ಜೋಡಿಸಲಾಗಿದೆ.ಅನಾವರಣ ಸಮಾರಂಭ
ತಾಲೂಕಿನ ಕೊರಡೂರಿನ ಗ್ರಾಮ ಸೇವಾಶ್ರಮದ ನವೀಕರಣಗೊಂಡ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ಜೂ. 9ರಂದು ಬೆಳಗ್ಗೆ 10.30ಕ್ಕೆ ಜರುಗಲಿದೆ. ಹಿರಿಯರ ತ್ಯಾಗ ಮತ್ತು ಬಲಿದಾನದ ಸಾರ್ಥಕತೆಯ ಕ್ಷಣ ಈ ಸಮಾರಂಭದ ಮೂಲಕ ಅನಾವರಣಗೊಳ್ಳಲಿದೆ.