ಕನ್ನಡಪ್ರಭ ವಾರ್ತೆ ಬೀರೂರು

ಪಟ್ಟಣಕ್ಕೆ ಈ ಹಿಂದೆ ಅನೇಕ ಶಾಸಕರುಗಳು ಕಾರ್ಯನಿರ್ವಹಿಸಿದ್ದಾರೆ, ಆದರೆ ಪಟ್ಟಣದ ಸರ್ವತೋಮುಖ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದ್ದು, ಪಟ್ಟಣಕ್ಕೆ ಹೊಸ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುವ ಮೂಲಕ ಬೀರೂರಿಗೆ ಹೆಚ್ಚಿನ ಒತ್ತು ನೀಡಿ ಹೊಸ ಅಭಿವೃದ್ಧಿ ಸ್ಪರ್ಶ ನೀಡುವುದಾಗಿ ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಪಟ್ದಣದ ಪುರಸಭಾ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಆಶ್ರಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈಗಾಗಲೇ ಲಿಂಗದಹಳ್ಳಿ- ಅಜ್ಜಂಪುರ ರಸ್ತೆಗಳಲ್ಲಿ 7 ಕೋಟಿ ರು. ವೆಚ್ಚದಲ್ಲಿ ದ್ವಿಪಥಗೊಳಿಸಿ ವಿದ್ಯುತ್ ದೀಪಾಲಂಕಾರದ ಜೊತೆ ರಸ್ತೆ ಅಗಲೀಕರಣವು ಸಹ ಆಗಿದ್ದು, ಅದರಂತೆ ಪಟ್ಟಣದಲ್ಲಿ ಹಾದು ಹೋಗಿರುವ ಬಿ.ಎಚ್ ರಸ್ತೆಯ, ತರಳಬಾಳು ಕಲ್ಯಾಣ ಮಂದಿರದಿಂದ ಕೆಇಬಿವರೆಗೂ ರಸ್ತೆಯನ್ನು ದ್ವಿಪಥಗೊಳಿಸಿ, ಕಾಂಕ್ರೀಟ್ ಹಾಗೂ ರಸ್ತೆಯ ಎರಡು ಕಡೆಗಳಲ್ಲಿ ಬಾಕ್ಸ್ ಚರಂಡಿ ನಿರ್ಮಾಣ ಮಾಡಲು ಸುಮಾರು 30 ಕೋಟಿ ರು. ಅಂದಾಜು ಪಟ್ಟಿ ತಯಾರಿಸಿ ಅನುಮೋದನೆಗೆ ಕಳುಹಿಸಲಾಗಿದ್ದು, ಶೀಘ್ರವೇ ಈ ಕಾಮಗಾರಿ ಪ್ರಾರಂಭಕ್ಕೆ ಭೂಮಿ ಪೂಜೆ ನಡೆಸಲಾಗುವುದು ಎಂದರು.

ಮಾರ್ಗದ ಕ್ಯಾಂಪಿನಲ್ಲಿ ಈಗಾಗಲೇ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಅದಕ್ಕೆ ಚಾಲನೆ ನೀಡಿದರೆ ಬೇಸಿಗೆಯನ್ನು ತೂಗಿಸುವುದರ ಜೊತೆ ಸುಮಾರು 6-7 ವಾರ್ಡ್‌ಗಳಿಗೆ ಕುಡಿಯುವ ನೀರನ್ನು ಸಮರ್ಪಕವಾಗಿ ನೀಡಲಾಗುವುದು ಎಂದರು. ಜೊತೆಗೆ ಕೆ.ಎಸ್.ಆರ್.ಟಿ,ಸಿ ಬಸ್ ನಿಲ್ದಾಣಕ್ಕೆ ನೂತನ ಅಭಿವೃದ್ಧಿಗಾಗಿ 3 ಕೋಟಿ ರು. ಹಣ ಬಿಡುಗಡೆಯಾಗಿದ್ದು, ನಿಲ್ದಾಣವನ್ನು ಶೀಘ್ರದಲ್ಲೇ ನವೀಕರಿಸಲು ಭೂಮಿ ಪೂಜೆ ಮಾಡಲಾಗುವುದು ಎಂದರು.


ಶೀಘ್ರದಲ್ಲೇ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ: ಆಶ್ರಯ ಸಮಿತಿ ಸಭೆಗೆ 80 ಅರ್ಜಿಗಳು ಬಂದಿದ್ದು, ಅದರಲ್ಲಿ ಕೆಲವರು ಸ್ವಾಧೀನದಲ್ಲಿದ್ದರೆ, ಇನ್ನು ಕೆಲವರಿಗೆ ಹಕ್ಕು-ಪತ್ರದಲ್ಲಿ ಹೆಸರು ಬದಲಾವಣೆಗಳಾಗಿವೆ. ಇಂತಹ ಸಾಕಷ್ಟು ಸಮಸ್ಯೆಗಳನ್ನು ಸಭೆಯಲ್ಲಿ ಚರ್ಚಿಸಲಾಗಿದ್ದು, ಈ ಅರ್ಜಿಗಳಿಗೆ ಸಭೆಯಲ್ಲಿ ಅನುಮೋದಿಸಲಾಗಿದೆ. ಇದರ ಜೊತೆ ಮಾದಿಗ ಜನಾಂಗದವೇ ಹೆಚ್ಚಿರುವ ಸ್ಲಂ-ಬೋರ್ಡ್‌ನಲ್ಲಿರುವ ಸುಮಾರು 40 ಮನೆಗಳ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲು ಕೊಳಚೆ ನಿರ್ಮೂಲನಾ ಮಂಡಳಿಗೆ ಪತ್ರ ಬರೆಯಲಾಗಿದ್ದು, ಉತ್ತರ ಬಂದ ತಕ್ಷಣವೇ ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದರು.

ಎಸ್.ಆರ್.ಲಕ್ಷ್ಮಯ್ಯ ಬಡಾವಣೆಯಲ್ಲಿ ಶೀಘ್ರ ಜಿ+2 ಮನೆ ನಿರ್ಮಾಣ: ಕಳೆದ ಸಭೆಯಲ್ಲಿ ಎಸ್.ಆರ್.ಲಕ್ಷ್ಮಯ್ಯ ಬಡಾವಣೆ ಮನೆ ನಿರ್ಮಾಣ ಮಾಡಲು ನಕ್ಷೆ ತಯಾರಿಸಿ ಅದರ ಪ್ಲಾನ್ ರಿವಯಸ್ ಮಾಡಲು ಜಿಲ್ಲಾಧಿಕಾರಿಗಳಿಂದ ಮೈಸೂರಿಗೆ ಕಳುಹಿಸಲಾಗಿದ್ದು, ಅದು ಸರ್ಕಾರಕ್ಕೆ ಹೋದ ಮೇಲೆ ಅದನ್ನು ಬದಲಾಯಿಸಿ ಜಿ+2 ಮನೆ ನಿರ್ಮಾಣ ಮಾಡಲು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

ಅಮೃತ್-2ರ ಯೋಜನೆ ಕಾಮಗಾರಿ ಪರಿಶೀಲನೆ ಬಗ್ಗೆ ಶೀಘ್ರ ಸಭೆ: ಕಡೂರು- ಬೀರೂರು ಪಟ್ಟಣಗಳಲ್ಲಿ ನಡೆಯುತ್ತಿರುವ ಕುಡಿಯುವ ನೀರಿನ ಯೋಜನೆಯಾದ ಅಮೃತ್-2ರ ಯೋಜನೆ ಕಾಮಗಾರಿಯು ಶೇ. 50ರಷ್ಟು ಪ್ರಮಾಣದಲ್ಲಿ ನಡೆದಿದ್ದು, ಕಾಮಗಾರಿಯಲ್ಲಿ ಕಳಪೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರ ಮತ್ತು ಚಿಕ್ಕಮಗಳೂರು ಒಳಚರಂಡಿ ಮಂಡಳಿ ಅಧಿಕಾರಿಗಳೊಂದಿಗೆ ಶೀಘ್ರ ಸಭೆ ನಡೆಸಿ ಗುಣಮಟ್ಟದ ಕಾಮಗಾರಿ ನಡೆಸಲು ಸೂಚಿಸಲಾಗುವುದು ಎಂದರು.

ಅಜ್ಜಂಪುರ ರಸ್ತೆ ಪುಟ್‌ಪಾತ್ ತೆರವುಗೊಳಿಸಿ: ಸಭೆಯಲ್ಲಿ ಮಾತನಾಡಿದ ಆಶ್ರಯ ಕಮಿಟಿ ಸದಸ್ಯ ಬಿ.ಟಿ.ಚಂದ್ರಶೇಖರ್, ಅಜ್ಜಂಪುರ ರಸ್ತೆ ನಿರ್ಮಾಣ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳು ರಸ್ತೆಗೆ ಜಾಗ ಬಿಡಲು ಕೋಟ್ಯಾಂತರ ರು. ಗಳನ್ನು ಸರ್ಕಾರದಿಂದ ಪಡೆದಿದ್ದರೂ ಸಹ ಜಾಗ ಬಿಡದೆ ಆಕ್ರಮಿಸಿಕೊಂಡು ವ್ಯಾಪಾರ ನಡೆಸುತಿದ್ದಾರೆ ಎಂದರು. ಇದಕ್ಕೆ ಉತ್ತರಿಸಿದ ಶಾಸಕ ಆನಂದ್, ಶೀಘ್ರವೇ ಪೊಲೀಸ್ ಬಂದೋಬಸ್ತಿನಲ್ಲಿ ಅತಿಕ್ರಮ ಮಾಡಿದವರನ್ನು ತೆರವುಗೊಳಿಸಿ ಎಂದು ಸೂಚಿಸಿದರು. ಬೀರೂರು ಸ್ಮಶಾಣದ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಭರವಸೆ ನೀಡಿದರು.

ಮುಖ್ಯಾಧಿಕಾರಿ ಜಿ.ಪ್ರಕಾಶ್, ಆಶ್ರಯ ಸಮಿತಿ ಸದಸ್ಯರಾದ ಬಿ.ಜಿ.ಮೈಲಾರಪ್ಪ, ಎನ್.ಮುಬಾರಕ್, ಮೇಘನ ಚೇತನ್, ಆರೋಗ್ಯ ನಿರೀಕ್ಷಕ ಲಕ್ಷ್ಮಣ್, ಆಶ್ರಯ ಸಮಿತಿ ಶಾಖೆಯ ಲಿಂಗರಾಜು, ಪ್ರದೀಪ್, ಗಿರಿರಾಜ್ ಇದ್ದರು.