ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಬಯಲುಸೀಮೆ ಕುಕ್ಕೆ ಎಂದು ಪ್ರಸಿದ್ಧವಾದ ಸಾಸಲು ಗ್ರಾಮದಲ್ಲಿ ಈ ಬಾರಿ ಜೋಡಿ ರಥೋತ್ಸವ ಜರುಗದೆ ಕೇವಲ ರಥಗಳಿಗೆ ಪೂಜಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.ಹೊಸ ರಥಗಳು ನಿರ್ಮಾಣವಾಗಿಲ್ಲ. ಈಗಿರುವ ರಥಗಳು ಶಿಥಿಲಾವಾಗಿದೆ ಎಂಬ ನೆಪದಲ್ಲಿ ಮುಜರಾಯಿ ಇಲಾಖೆ ಅಧಿಕಾರಿಗಳು ರಥಕ್ಕೆ ಭಕ್ತರು ಪೂಜೆ ಮಾಡಲು ಅವಕಾಶ ಕಲ್ಪಿಸಿದರು. ಇದರಿಂದ ಜಾತ್ರೆ ಕಳೆಗುಂದಿತು.
ಯುಗಾದಿ ನಂತರ ರಜೆಯ ಸೋಮವಾರದಲ್ಲಿ ಜಾತ್ರಾ ರಥೋತ್ಸವ ನಡೆಯುವುದರಿಂದ ರಥೋತ್ಸವ ವೀಕ್ಷಿಸಲು ದೂರದ ಊರುಗಳಿಂದ ಭಕ್ತರು ಆಗಮಿಸಿದ್ದರು. ರಥೋತ್ಸವ ಜರುಗದೆ ಕೇವಲ ಜೋಡಿ ರಥಗಳಿಗೆ ಪೂಜಿಸಿದರು. ಇದರಿಂದ ಭಕ್ತರಿಗೆ ನಿರಾಸೆ ಉಂಟಾಯಿತು.ವರ್ಷಕ್ಕೆ ಲಕ್ಷಾಂತರ ರು. ವರಮಾನ ಮುಜರಾಯಿ ಇಲಾಖೆಗೆ ದೇಗುಲದಿಂದ ಬರುತ್ತಿದೆ. ಭಕ್ತರ ಹತ್ತಾರು ವರ್ಷಗಳ ಬೇಡಿಕೆ, ಒತ್ತಾಸೆಯಿಂದ ಎರಡು ವರ್ಷಗಳ ಹಿಂದೆರಥ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಕರೆಯಲಾಗಿತ್ತು. ಎರಡು ವರ್ಷಗಳ ಹಿಂದೆ ರಥ ನಿರ್ಮಿಸಲು ಶ್ರೀರಂಗಪಟ್ಟಣ ತಾಲೂಕಿನ ಶಿಲ್ಪಿ ಮುಂದಾಗಿದ್ದು ರಥ ನಿರ್ಮಾಣ ಕುಂಟುತ್ತ ಸಾಗಿದೆ. ಪರಿಣಾಮ ಕಳೆದ ವರ್ಷ ಹಳೆಯ ರಥಗಳನ್ನು ಹಗ್ಗಕಟ್ಟಿ ಎಳೆಯದೆ ರಥಗಳನ್ನು ನೂಕುವ ಮೂಲಕ ರಥೋತ್ಸವವನ್ನು ಆಚರಿಸಲಾಯಿತು.
ಈ ಬಾರಿ ರಥ ಮಂಟಪದಿಂದ ಹೊರಗಡೆ ಎಳೆಯದೆ ಸ್ವಸ್ಥಾನದಿಂದ ಒಂದೆರಡು ಮೀಟರ್ ಹೊರಗಡೆ ತಂದು ಸಾಂಕೇತಿಕವಾಗಿ ಮುಜರಾಯಿ ಇಲಾಖೆ ಮಾರ್ಗದರ್ಶನದಂತೆ ಅರ್ಚಕರು ಪೂಜಿಸಿದರು.ಕನಿಷ್ಠ ಉತ್ಸವಮೂರ್ತಿಗಳನ್ನಾದರೂ ರಥಬೀದಿಯಲ್ಲಿ ಮೆರವಣಿಗೆ ಮಾಡಿ ರಥದಲ್ಲಿ ಪ್ರತಿಷ್ಠಾಪಿಸಿದ್ದರೆ ದೇವರನ್ನು ಕಣ್ತುಂಬಿ ಕೊಳ್ಳಬಹುದಿತ್ತು. ಖಾಲಿ ರಥಕ್ಕೆ ಪೂಜೆ ಮಾಡಿದ್ದು ಸರಿಯಲ್ಲ. ದೂರದ ಊರುಗಳಿಂದ ಭಕ್ತರು ರಥೋತ್ಸವಕ್ಕಾಗಿ ಬರುತ್ತಾರೆ. ಇವರಿಗೆ ಕನಿಷ್ಠ ಸೌಲಭ್ಯವಿಲ್ಲ. ಹೊಸದಾಗಿರಥ ನಿರ್ಮಿಸಲು ಸಾಕಷ್ಟು ಕಾಲವಕಾಶವಿತ್ತು. ಅಧಿಕಾರಿಗಳ ಧೋರಣೆಯಿಂದ ಈ ಬಾರಿ ರಥೋತ್ಸವ ನಡೆಯಲಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅರ್ಚಕರು ರಥವನ್ನು ಪೂಜಿಸುತ್ತಿರುವುದನ್ನು ಕಂಡ ಭಕ್ತರು ರಥಕ್ಕೆ ಹಣ್ಣು, ಕಾಯಿ ಅರ್ಪಿಸಿ, ಧೂಪ ದೀಪಗಳಿಂದ ಬೆಳಗಿದರು. ಪುಷ್ಕರಿಣಿಯಲ್ಲಿ ಮಿಂದು ಭಕ್ತರು ಬಾಲಾಯಲದಲ್ಲಿನ ಸೋಮೇಶ್ವರ, ಶಂಭುಲಿಂಗೇಶ್ವರ ಮೂರ್ತಿ, ಕುದುರೆಮಂಡಮ್ಮ ದೇವರದರ್ಶನ ಪಡೆದು ಇಷ್ಟಾರ್ಥ ಸಿದ್ಧಿ, ಮಳೆಗಾಗಿ ಪ್ರಾರ್ಥಿಸಿದರು.ಮುಂಬರುವ ವರ್ಷದಲ್ಲಿ ನೂತನರಥ, ನವೀಕೃತ ದೇಗುಲ ಲೋಕಾರ್ಪಣೆಯಾಗಲಿದೆ. ಭಕ್ತರು ಎಂದಿನಂತೆ ಸಹಕರಿಸಬೇಕುಎಂದು ತಹಸೀಲ್ದಾರ್ ಎಸ್.ವಿ.ಲೋಕೇಶ್‌ಮನವಿ ಮಾಡಿದರು. ಉಪ ತಹಸೀಲ್ದಾರ್ ವೀಣಾ, ರಾಜಸ್ವ ನಿರೀಕ್ಷಕ ಗೋಪಾಲಕೃಷ್ಣ, ಗ್ರಾಮ ಆಡಳಿತಾಧಿಕಾರಿ ಪ್ರಸನ್ನ, ತಿಪ್ಪೇಶ್, ಸುನಿಲ್ ಗಾಣಿಗೇರ್, ಗ್ರಾಪಂ ಸದಸ್ಯ ಈ ರಾಜು, ಭಾಗ್ಯಮ್ಮ ಉಪಸ್ಥಿತರಿದ್ದರು.